ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪರಿಸರ ಪ್ರೀತಿಗೆ ಗೆಲುವು

‌‍‘ನಿಮ್ಮ ಕಸ ನಿಮಗೆ’ ಅಭಿಯಾನಕ್ಕೆ ನೆಸ್ಲೆ ಕಂಪನಿ ಶ್ಲಾಘನೆ; ವಿಶಿಷ್ಟ ಪ್ರತಿಭಟನೆಗೆ ಮತ್ತೊಂದು ಯಶಸ್ಸು
Last Updated 21 ಜನವರಿ 2020, 12:01 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ ವಿರುದ್ಧ ನಡೆಸುತ್ತಿರುವ ವಿಶಿಷ್ಟ ಪ್ರತಿಭಟನೆಗೆ ಮತ್ತೊಂದು ಯಶಸ್ಸು ದೊರೆತಿದೆ.

9 ಹಾಗೂ 10ನೇ ತರಗತಿ ಮಕ್ಕಳು ಕೈಗೊಂಡಿರುವ ‘ನಿಮ್ಮ ಕಸ ನಿಮಗೆ’ ಅಭಿಯಾನಕ್ಕೆ ಬಹುರಾಷ್ಟ್ರೀಯ ಆಹಾರ ಉತ್ಪಾದನಾ ಕಂಪನಿ ನೆಸ್ಲೆ ಸ್ಪಂದಿಸಿದೆ. ಈ ಸಂಬಂಧ ಇ–ಮೇಲ್‌ ಮೂಲಕ ಪತ್ರ ಬರೆದು ಮಕ್ಕಳ ಕೆಲಸ ಶ್ಲಾಘಿಸಿದೆ. ಈ ಹಿಂದೆ ಕೋಲ್ಗೇಟ್ ಕಂಪನಿ ಕೂಡ ಇದೇ ರೀತಿ ಪ್ರತಿಕ್ರಿಯಿಸಿತ್ತು.

ವಿವಿಧ ಕಂಪನಿಗಳ ಉತ್ಪನ್ನಗಳ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು, ಆಯಾ ಕಂಪನಿಗಳಿಗೆ ಕಳುಹಿಸಿಕೊಡುತ್ತಿದ್ದಾರೆ. 9 ತಿಂಗಳಿಂದ ಸುಮಾರು 25 ಕಂಪನಿಗಳಿಗೆ ರಿಜಿಸ್ಟರ್ಡ್‌ ಪೋಸ್ಟ್‌ ಮಾಡಿದ್ದಾರೆ. ‌

‘ನೆಸ್ಲೆ ಕಂಪನಿಯು ಪತ್ರ ಬರೆದು ಶ್ಲಾಘಿಸಿರುವುದಕ್ಕೆ ಮಕ್ಕಳು ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಯಾನ ಮುಂದುವರಿಸಲು ಅವರಿಗೆ ಮತ್ತಷ್ಟು ಪ್ರೇರಣೆ ದೊರೆತಿದೆ’ ಎಂದು ಶಾಲೆಯ ಶಿಕ್ಷಕ ಸಂತೋಷ್‌ ಗುಡ್ಡಿಯಂಗಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಕ್ಕಳ ಪರಿಸರ ಪ್ರೀತಿ, ಅಭಿಯಾನಕ್ಕೆ ಮಣಿದಿರುವ ನೆಸ್ಲೆ ಕಂಪನಿಯು ಪರಿಸರಸ್ನೇಹಿ ಪ್ಯಾಕಿಂಗ್ ಮೆಟೀರಿಯಲ್ ಅಭಿವೃದ್ಧಿಪಡಿಸುವ ಭರವಸೆ ನೀಡಿದೆ.

‘ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಮಕ್ಕಳ ಕಳವಳ ಶ್ಲಾಘನೀಯ. ತ್ಯಾಜ್ಯ ನಿರ್ವಹಣೆಗೆ ಹಲವು ಕ್ರಮ ಕೈಗೊಂಡಿದ್ದೇವೆ. 2025ರ ವೇಳೆಗೆ ಶೇ 100ರಷ್ಟು ಮರುಬಳಕೆ ಮಾಡಬಹುದಾದ ಪ್ಯಾಕೇಜಿಂಗ್ ಸಾಧನ ತಯಾರಿಸುವುದು ನಮ್ಮ ಗುರಿ’ ಎಂದು ಕಂಪನಿಯ ಗ್ರಾಹಕರ ಅಹವಾಲು ವಿಭಾಗದ ಪಂಕಜ್‌ ತಲ್ವಾರ್‌ ಪತ್ರ ಬರೆದಿದ್ದಾರೆ.

‘ಈಗಾಗಲೇ ಡೆಹ್ರಾಡೂನ್ ಮತ್ತು ಮಸ್ಸೂರಿಯಲ್ಲಿ ಪ್ಲಾಸ್ಟಿಕ್ ಎಕ್ಸ್‌ಪ್ರೆಸ್ ಎಂಬ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದೇವೆ. ಟ್ರಕ್‌ವೊಂದು ಈ ನಗರಗಳ ನಡುವೆ ಸಂಚರಿಸುತ್ತಿದ್ದು, ಮ್ಯಾಗಿ ಪೊಟ್ಟಣಗಳ ಕವರ್‌ ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದೇವೆ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT