ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರುದ್ಧ, ಪರ ವಿದ್ಯಾರ್ಥಿಗಳ ಪ್ರತಿಭಟನೆ ತಪ್ಪು: ಸಂತೋಷ್‌ ಹೆಗ್ಡೆ

Last Updated 23 ಜನವರಿ 2020, 14:13 IST
ಅಕ್ಷರ ಗಾತ್ರ

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿಯಾಗಲಿ, ವಿರುದ್ಧವಾಗಿಯಾಗಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ದೇಶದ ಮುಂದಿನ ಆಸ್ತಿ. ಅವರು ಯಾರ ಪ್ರೇರಣೆಗೂ ಒಳಗಾಗಬಾರದು. ತಮ್ಮ ಅಮೂಲ್ಯ ಸಮಯವನ್ನು ಪ್ರತಿಭಟನೆ ಮಾಡುವುದಕ್ಕೆ ವ್ಯಯ ಮಾಡಬಾರದು. ಇದರಿಂದ ಅವರ ಶೈಕ್ಷಣಿಕ ಭವಿಷ್ಯ ಹಾಳಾಗುತ್ತದೆ. ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ರಾಜಕಾರಣಿಗಳು ಆರಾಮವಾಗಿದ್ದಾರೆ ಎಂದು ಕಿಡಿಕಾರಿದರು.

‘ನನಗೂ ಈ ಕಾಯ್ದೆ ಬಗ್ಗೆ ಹೇಳುವುದಿದೆ. ಆದರೆ, ವಿಷಯ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ಈಗ ಏನೇ ಹೇಳಿದರೂ ಅದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಹೇಳಿದರು.

ಮೀಸಲಾತಿ ಕುರಿತು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಂದು ಕುಟುಂಬಕ್ಕೆ ಒಮ್ಮೆ ಮಾತ್ರ ಮೀಸಲಾತಿ ನೀಡಿದರೆ ಸಾಕು. ಅದನ್ನು ಬಿಟ್ಟು ಅಪ್ಪ, ಮಗ, ಮೊಮ್ಮಗ ... ಹೀಗೆ ವಂಶಪಾರಂಪರ್ಯವಾಗಿ ಮೀಸಲಾತಿ ಸೌಲಭ್ಯ ನೀಡಬಾರದು’ ಎಂದು ತಿಳಿಸಿದರು.

‘ರಾಷ್ಟ್ರಪತಿ, ಐಎಎಸ್ ಅಧಿಕಾರಿ, ನ್ಯಾಯಾಧೀಶರು... ಹೀಗೆ ಒಮ್ಮೆ ಮೀಸಲಾತಿಯಲ್ಲಿ ಸ್ಥಾನ ಪಡೆದು ಅಧಿಕಾರ ಹಿಡಿದ ಬಳಿಕ ಅವರು ಹೇಗೆ ಹಿಂದುಳಿಯುತ್ತಾರೆ’ ಎಂದು ಪ್ರಶ್ನಿಸಿದ ಅವರು, ‘ಇದೇ ಮೀಸಲಾತಿಯನ್ನು ಒಮ್ಮೆಯೂ ಸೌಲಭ್ಯ ಪಡೆಯದವರಿಗೂ ವಿಸ್ತರಿಸಬೇಕು. ಆಗ ಸಮಾನತೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಈಚೆಗೆ ಜೈಲಿನಿಂದ ಜಾಮೀನು ಪಡೆದು ಹೊರಬಂದ ರಾಜಕಾರಣಿಯೊಬ್ಬರನ್ನು ಸ್ವಾಗತಿಸಲು ಸಾವಿರಾರು ಮಂದಿ ಸೇರಿದ್ದರು. ಇದರಿಂದ ಉಂಟಾದ ಸಂಚಾರದಟ್ಟಣೆಯಿಂದ ದುಬೈಗೆ ಹೋಗಬೇಕಾದ ವ್ಯಕ್ತಿಯೊಬ್ಬರಿಗೆ ವಿಮಾನ ತಪ್ಪಿ₹ 27 ಸಾವಿರ ನಷ್ಟವಾಯಿತು. ಇದನ್ನು ವಿರೋಧಿಸಿ ಕೋರ್ಟ್‌ನಲ್ಲಿ ಅರ್ಜಿ ಹಾಕಿ ಎಂದರೆ, ಕುಟುಂಬಕ್ಕೆ ಏನಾದರೂ ಆಗುತ್ತದೆ ಎಂದು ಅವರು ಹೆದರುತ್ತಾರೆ. ಈ ರೀತಿಯ ಹೆದರಿಕೆ ಸರಿಯಲ್ಲ ಎಂದರು.

ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಯದೇ ಒಂದೆರಡು ನಿಮಿಷಗಳಲ್ಲಿ ಹತ್ತಾರು ಮಸೂದೆಗಳು ಒಪ್ಪಿಗೆ ಪಡೆಯುತ್ತವೆ. ಸಂಸದರು ಚರ್ಚೆಯೇ ನಡೆಸುತ್ತಿಲ್ಲ. 2016ರ ಚಳಿಗಾಲದ ಅಧಿವೇಶನದಲ್ಲಿ ಒಂದೂ ದಿನವೂ ಕಲಾಪ ನಡೆಯಲಿಲ್ಲ. ಸಂಸದರಿಗೆ ಮಾಸಿಕ ವೇತನ, ಕಲಾಪಭತ್ಯೆ ಏಕೆ ಕೊಡಬೇಕು ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT