ಸೋಮವಾರ, ನವೆಂಬರ್ 18, 2019
29 °C
ವಿಜಯನಗರದ ರೈಲ್ವೆ ಬಡಾವಣೆಯಲ್ಲೊಂದು ಹೃದಯ ವಿ‌ದ್ರಾವಕ ಘಟನೆ

ಒಂದೇ ಕುಣಿಕೆಗೆ ಶರಣಾದ ತಾಯಿ, ಮಗಳು

Published:
Updated:

ಮೈಸೂರು: ಇಲ್ಲಿನ ವಿಜಯನಗರದ ರೈಲ್ವೆ ಬಡಾವಣೆಯಲ್ಲಿ ತಾಯಿ ಮತ್ತು 11 ವರ್ಷ ವಯಸ್ಸಿನ ಮಗಳು ಒಂದೇ ನೇಣಿನ ಕುಣಿಕೆ ಹಾಕಿಕೊಂಡು ಒಟ್ಟಿಗೆ ಮೃತಪಟ್ಟಿದ್ದಾರೆ.

ತಾಯಿ ಜಯಾ (35) ಹಾಗೂ 4ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ (11) ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡವರು.

ಲಿಫ್ಟ್‌ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರಿನ ಸುಧಾಕರ್ ಅವರನ್ನು ಶಿವಮೊಗ್ಗದ ಜಯಾ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೆಟ್ಟು ಹೋಗಿದ್ದ ಲಿಫ್ಟ್‌ನ್ನು ದುರಸ್ತಿ ಮಾಡಲು ಸುಧಾಕರ್ ಮನೆಯಿಂದ ತೆರಳಿದ್ದರು. ರಾತ್ರಿ ವಾಪಸ್ ಬಂದು ನೋಡುವಷ್ಟರಲ್ಲಿ ಪತ್ನಿ ಮತ್ತು ಮಗಳು ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಇವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ವಿಜಯನಗರ ಠಾಣೆಯ ಇನ್‌ಸ್ಪೆಕ್ಟರ್‌ ಎಚ್.ಎನ್.ಬಾಲಕೃಷ್ಣ ಪರಿಶೀಲನೆ ನಡೆಸಿ ಸುಧಾಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ‘ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಕಲಹದಿಂದ ಆಗಿರುವ ಆತ್ಮಹತ್ಯೆ ಎಂದು ಕಂಡು ಬರುತ್ತಿದೆ. ಜಯಾ ಅವರ ತವರು ಮನೆಯ ಸದಸ್ಯರು ಶಿವಮೊಗ್ಗದಿಂದ ಹೊರಟಿದ್ದಾರೆ. ಅವರು ಬಂದ ನಂತರ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.

ಪ್ರತಿಕ್ರಿಯಿಸಿ (+)