ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಸುಧಾಮೂರ್ತಿ

7

ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಸುಧಾಮೂರ್ತಿ

Published:
Updated:

ಮೈಸೂರು: ದಸರಾ ಉತ್ಸವಕ್ಕೆ ಚಾಮುಂಡಿಬೆಟ್ಟದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಲೇಖಕಿ ಸುಧಾಮೂರ್ತಿ ಬುಧವಾರ ಮುಂಜಾನೆ ಚಾಲನೆ ನೀಡಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರೊಂದಿಗೆ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಚಾಮುಂಡಿ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಅರಮನೆ ಆವರಣದಲ್ಲಿಯೂ ಸಂಭ್ರಮ ಕಳೆಗಟ್ಟಿದೆ. ಖಾಸಗಿ ದರ್ಬಾರ್‌ಗೆ ಚಾಲನೆ ನೀಡುವ ವಿಧಿವಿಧಾನಗಳು ಬೆಳಿಗ್ಗೆ 5.30ರಿಂದ ಆರಂಭವಾಗಿತ್ತು. 10 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣ ಧರಿಸಿದ್ದಾರೆ.


ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾಕ್ಕೆ ಚಾಲನೆ ನೀಡಲಾಯಿತು

ಕೊಡಗಿನ ಜನರಿಗೆ ಮನೆ ಕಟ್ಟಿಕೊಡ್ತೇವೆ: ಸುಧಾಮೂರ್ತಿ

ದಸರಾ ಉದ್ಘಾಟಿಸಿ ಮಾತನಾಡಿದಿ ಸುಧಾಮೂರ್ತಿ, ‘ಕೊಡಗಿನಲ್ಲಿ ಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ₹25 ಕೋಟಿ ವೆಚ್ಚದಲ್ಲಿ ಮನೆ ಕಟ್ಟಿಕೊಡುತ್ತೇವೆ. ಸರ್ಕಾರ ನಮಗೆ ಜಾಗ ತೋರಿಸಿ, ಸಹಕರಿಸಲಿ. ಇದು ನಾವು ಮಾಡುತ್ತಿರುವ ಉಪಕಾರವಲ್ಲ. ಕಷ್ಟದಲ್ಲಿರುವ ಜನರಿಗೆ ನೆರವಾಗುವುದು, ಸರ್ಕಾರಕ್ಕೆ ಹೆಗಲೆಣೆಯಾಗಿ ದುಡಿಯುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

‘ದಸರಾ ಇಂದು ನಿನ್ನೆಯ ಹಬ್ಬವಲ್ಲ. ನೂರಾರು ವರ್ಷಗಳ ಇತಿಹಾಸವಿದೆ. ಮೈಸೂರು ದೊರೆಗಳು ಕನ್ನಡ ಉಳಿಸಲು, ಬೆಳೆಸಲು ಶ್ರಮಿಸಿದವರು. ಅವರ ಧಾರ್ಮಿಕ ಕಾರ್ಯಗಳೂ ವಿಖ್ಯಾತವಾಗಿವೆ. ಕರ್ನಾಟಕ ಸರ್ಕಾರವು ದಸರೆಯನ್ನು ನಾಡಿನಹಬ್ಬವಾಗಿ ಸರ್ವ ಜನಾಂಗಗಳಿಗೂ ಸಮರ್ಪಿಸಿದೆ. ಇದು ನಮ್ಮ ರಾಜ್ಯದ ಶ್ರೇಷ್ಠ ಆಚರಣೆ. ನನಗೆ ದಸರಾ ಉದ್ಘಾಟಿಸುವ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆಗಳು’ ಎಂದು ನುಡಿದರು.

‘ತಿರುಪತಿ ವೆಂಕಟೇಶನಿಗೆ ಮೈಸೂರು ದೊರೆಗಳು ಭಕ್ತಿಯಿಂದ ಆಭರಣಗಳನ್ನು ಸಮರ್ಪಿಸಿದ್ದರು. ತಿರುಪತಿಯಲ್ಲಿ ಬಳಕೆಯಾಗುವ ಬೆಣ್ಣೆ–ತುಪ್ಪ ಮೈಸೂರು ಅರಸರು ಕೊಡುತ್ತಿದ್ದರು. ಇಂದಿಗೂ ತಿರುಪತಿಗೆ ಕರ್ನಾಟಕದಿಂದಲೇ ಬೆಣ್ಣೆ–ತುಪ್ಪ ಹೋಗುತ್ತದೆ. ಇದು ಸಂತಸದ ಸಂಗತಿ’ ಎಂದರು.


ಸುಧಾ ಮೂರ್ತಿ ಅವರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು

ಮಹಿಷಾ ದಸರೆಗೆ ಅವಕಾಶ ಬೇಡ: ಪ್ರತಾಪಸಿಂಹ

‘ಮಹಿಷಾ ದಸರೆ ಹೆಸರಿನಲ್ಲಿ ರಾಕ್ಷಸನ ಹಬ್ಬ ಆಚರಿಸಲು ಕೆಲವರು ಹೊರಟಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತರುವ ಇಂಥ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಟಿಪ್ಪು ಜಯಂತಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಪ್ರತಾಪಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಹಣದ ಕೊರತೆ ಇಲ್ಲ: ಕುಮಾರಸ್ವಾಮಿ

‘ರಾಜ್ಯದಲ್ಲಿ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಆದರೆ ಸದ್ಬಳಕೆಯಲ್ಲಿ ಲೋಪವಿದೆ. ಅದನ್ನು ಸರಿಪಡಿಸಿ, ನಾವೆಲ್ಲರೂ ಕೈಜೋಡಿಸಿ ನಾಡು ಕಟ್ಟಬೇಕಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಎದ್ದು ಕಂಡ ಅನುಪಸ್ಥಿತಿ

ದಸರಾ ಕಾರ್ಯಕ್ರಮಗಳಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಶಾಸಕ ತನ್ವೀರ್ ಸೇಠ್, ಸಚಿವ ಪುಟ್ಟರಂಗಶೆಟ್ಟಿ ಗೈರಾಗಿದ್ದರು. ಇದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಯಿತು.

ಅರಮನೆ ನಗರಿಯಲ್ಲಿ ದಸರಾ ವೈಭವ

ನಗರದಲ್ಲೀಗ ಸಾಂಸ್ಕೃತಿಕ ಸಂಗಮ ಹಾಗೂ ನವರಾತ್ರಿಯ ಸಡಗರ. ಸಾಂಸ್ಕೃತಿಕ ವಲಯ, ಕಲಾ ರಸಿಕರ ಚಿತ್ತವೆಲ್ಲಾ ಅರಮನೆಗಳ ನಗರಿಯತ್ತ ನೆಟ್ಟಿದೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ಸವಿಯುತ್ತಾ ವಿದ್ಯುತ್‌ ದೀಪಾಲಂಕಾರದ ವೈಭವದಲ್ಲಿ ಮಿಂದೇಳಲು ಸ್ಥಳೀಯರು ಹಾಗೂ ಪ್ರವಾಸಿಗರು ಸನ್ನದ್ಧರಾಗಿದ್ದಾರೆ.

ಗತವೈಭವ ಸಾರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಚಾಲನೆ ಸಿಗಲಿದೆ. ಇನ್ನು ಹತ್ತು ದಿನ ಸಾಂಸ್ಕೃತಿಕ ಸಿರಿವೈಭವ ಅನಾವರಣಗೊಳ್ಳಲಿದೆ. ಮೈತ್ರಿ ಸರ್ಕಾರದ ಮೊದಲ ದಸರೆ ಇದಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಲವು ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಶರನ್ನವರಾತ್ರಿ ಅಂಗವಾಗಿ ಈ ಬಾರಿ ಹೊಸದಾಗಿ ಮತ್ಸ್ಯಮೇಳ, ಸಾಕುಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿದೆ. ಪಾರಂಪರಿಕಾ ನಡಿಗೆ, 3ಡಿ ಮ್ಯಾಪಿಂಗ್‌, ಲ್ಯಾಂಟರ್ನ್‌ ಉತ್ಸವ ನಡೆಯಲಿದೆ. ಕಿರುಚಿತ್ರ ನಿರ್ಮಾಣ ಕಾರ್ಯಾಗಾರ ಇರಲಿದೆ. ಈ ಬಾರಿ ಜನಾಕರ್ಷಣೆಯ ಓಪನ್‌ ಸ್ಟ್ರೀಟ್‌ ಉತ್ಸವದ ಸ್ಥಳ ಬದಲಾಗಿದ್ದು, ಕೃಷ್ಣರಾಜ ಬುಲೆವಾರ್ಡ್‌ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 44

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !