ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ರಕ್ಷಣೆಗೆ ಕಬ್ಬಿನ ಸೋಗೆ ಮೊರೆ

ಕಡಿಮೆ ಬೆಲೆಯ ಸೋಗೆಯತ್ತ ಒಲವು; ಕಬ್ಬು ಬೆಳೆಗಾರರ ಮೊಗದಲ್ಲಿ ಹರ್ಷ
Last Updated 14 ಮೇ 2022, 2:55 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನಾದ್ಯಂತ ಶುಂಠಿ ಬೆಳೆಗಾರರು ಕಬ್ಬಿನ ಸೋಗೆ (ತರಗು)ಯನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದು ಕಬ್ಬು ಕಟಾವು ಮಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಶುಂಠಿ ಬಿತ್ತನೆ ಮಾಡಿದ ಬಳಿಕ ಶುಂಠಿ ಬಿಸಿಲಿಗೆ ಒಣಗದ ರೀತಿ ಭತ್ತದ ಹುಲ್ಲನ್ನು ಹಾಕಲಾಗುತ್ತಿತ್ತು. ಆದರೆ, ಭತ್ತದ ಹುಲ್ಲಿನ 1 ಕಂತೆಗೆ ₹ 35 ಆಗಿರುವುದರಿಂದ ಈ ರೈತರು ಹುಲ್ಲಿನ ಬದಲಿಗೆ ಪರ್ಯಾಯವಾಗಿ ಕಬ್ಬಿನ ಸೋಗೆ ಖರೀದಿಗೆ ಮುಂದಾಗಿದ್ದಾರೆ. ಈ ಹಿಂದೆ ಬೆಳೆಗಾರರು ಕಬ್ಬು ಕಟಾವಾದ ಬಳಿಕ ಜಮೀನನ್ನು ಹದಗೊಳಿಸಲು ಸೋಗೆಗೆ ಬೆಂಕಿ ಹಾಕುತ್ತಿದ್ದರು. ನಂತರ ಶುಂಠಿ ಬೆಳೆಗಾರರು ಸೋಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಭೂಮಿ ಹಸನಾಗುವುದು ಎಂದು ಬೆಳೆಗಾರರು ಹಣವನ್ನು ಪಡೆಯುತ್ತಿರಲಿಲ್ಲ. ಆದರೆ, ಶುಂಠಿ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಸೋಗೆಗೆ ಮುಗಿಬಿದ್ದಿದ್ದರಿಂದ ಕಬ್ಬು ಬೆಳೆಗಾರರು ಎಕರೆ ಸೋಗೆಗೆ ಸುಮಾರು ₹ 5 ಸಾವಿರದಿಂದ ₹ 10 ಸಾವಿರದವರೆಗೆ ನಿಗದಿ ಮಾಡಿದ್ದಾರೆ.

ಶುಂಠಿ ಬೆಳೆಗಾರರು ಭತ್ತದ ಹುಲ್ಲಿನ ಬೆಲೆಗೆ ಕಬ್ಬಿನ ಸೋಗಿನ ಬೆಲೆಗೂ ಹೋಲಿಕೆ ಮಾಡಿ, ಕಬ್ಬಿನ ಸೋಗೆ ಅಗ್ಗವಾಗಿರುವುದರಿಂದ ರೈತ ಕೇಳಿದ ಬೆಲೆಯನ್ನು ನೀಡಿ ಸೋಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

‘ಈ ಹಿಂದೆ ಕಬ್ಬು ಕಟಾವಾದ ಬಳಿಕ ಗುಡಿಸಲು ನಿವಾಸಿಗಳು ತಮ್ಮ ಗುಡಿಸಲಿಗೆ ಸೋಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ದಿನ ಕಳೆದಂತೆ ಹುಲ್ಲಿನ ಮನೆಗಳು ಕಡಿಮೆಯಾದವು. ಸೋಗೆ ಕೇಳುವವರಿಲ್ಲದಾಗಿ ಗದ್ದೆಯಲ್ಲೇ ಬೆಂಕಿ ಹಾಕುತ್ತಿದ್ದೆವು. ಈಗ ಶುಂಠಿ ಬೆಳೆಗಾರರಿಗೆ ಹಣ ನೀಡಿ ತಾವೇ ಸೋಗನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಜಮೀನು ಹಸನಾಗುವುದು ಅಲ್ಲದೇ ಕೈಸಾಲವೂ ತೀರುತ್ತಿದೆ. ತಕ್ಷಣಕ್ಕೆ ಜೀವನ ನಿರ್ವಹಣೆಗೆ ಸಹಾಯವಾಗುತ್ತಿದೆ. ಏಕೆಂದರೆ ಕಾರ್ಖಾನೆಗೆ ಕಬ್ಬು ಸಾಗಿಸಿದ ಹಣ ತಡವಾಗಿ ಬರುವುದರಿಂದ ಸೋಗೆ ಮಾರಾಟ ನಮ್ಮ ಕೈ ಹಿಡಿಯುತ್ತಿದೆ’ ಎನ್ನುತ್ತಾರೆ ಬೆಳಗನಹಳ್ಳಿಯ ಕಬ್ಬು ಬೆಳೆಗಾರ ಕೆಂಡಗಣ್ಣಸ್ವಾಮಿ.

‘ಶುಂಠಿ ಬಿಸಿಲಿಗೆ ಒಣಗದಂತೆ ಹಾಗೂ ತೇವಾಂಶ ಹೆಚ್ಚು ದಿನಗಳವರಗೆ ಇರಲಿ ಎಂಬ ಕಾರಣದಿಂದ ಭತ್ತ ಹುಲ್ಲನ್ನು ಹಾಕಲಾಗುತ್ತಿತ್ತು. ಹುಲ್ಲಿನ ಬೆಲೆ ಏರಿಕೆಯಾಗಿದ್ದರಿಂದ ಕಬ್ಬಿನ ಸೋಗೆಯತ್ತ ವಾಲಿದೇವು. ಬೇಡಿಕೆ ಹೆಚ್ಚಾಗಿದ್ದರಿಂದ ಸೋಗೆಗೂ ಬೆಲೆ ನಿಗದಿಯಾಗಿದೆಯಾದರೂ ಕಡಿಮೆ ಬೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಗುವುದ ರಿಂದ ಖರೀದಿಸುತ್ತಿದ್ದೇವೆ’ ಎಂದು ಶುಂಠಿ ಬೆಳೆಗಾರ ಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT