ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿ ಮನೆಯೆಂಬ ಬೇಸಿಗೆ ಶಿಬಿರ

Last Updated 12 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೇಸಿಗೆ ರಜೆಯಲ್ಲಿ ಅಜ್ಜಿಯ ಊರಿಗೆ ಹೋಗುತ್ತಿದ್ದ ಮಕ್ಕಳು ಈಗ ನಗರಗಳಲ್ಲಿ ಆಯೋಜಿಸುವ ಬೇಸಿಗೆ ಶಿಬಿರಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಪ್ರತಿ ಮಗುವೂ ಈಗ ಒಂದಿಲ್ಲೊಂದು ಶಿಬಿರಕ್ಕೆ ಸೇರುತ್ತಿರುವುದು ಸಾಮಾನ್ಯವಾಗಿದೆ. ಕ್ರಿಕೆಟ್, ಕೇರಂ, ಚೆಸ್, ರಂಗಭೂಮಿ, ಸಂಗೀತ, ಕರಾಟೆ, ನೃತ್ಯ, ಪೇಯಿಂಟಿಂಗ್‌, ಸ್ವಿಮ್ಮಿಂಗ್‌.. ಹೀಗೆ ನೂರಾರು ಆಯ್ಕೆಗಳು ಶಿಬಿರದಲ್ಲಿ ಮಕ್ಕಳನ್ನು ಆಕರ್ಷಿಸುತ್ತಿವೆ.

ಬೇಸಿಗೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ ‘ಸಮ್ಮರ್‌ ಕ್ಯಾಂ‍ಪ್‌’ ಪ್ರವೇಶಿಸುವ ಮಗುವಿಗೆ ಅಲ್ಲಿ ‘ಕೃತಕ’ ಪಾಠ ಮಾತ್ರ ದೊರೆಯಲು ಸಾಧ್ಯ. ಇತ್ತೀಚೆಗೆ ಅಪ್ಪಟ ವ್ಯವಹಾರದ ಕೂಪವಾಗಿರುವ ಶಿಬಿರಗಳಲ್ಲಿ ಬದುಕಿನ ಪಾಠ ಹೇಳಿಕೊಡುವ, ಸಂಬಂಧಗಳು, ಸಂಪ್ರದಾಯಗಳನ್ನು ಬೆಸುಗೆ ಹಾಕಲು ಸಾಧ್ಯವೇ?

ಆದರೆ, ಅವೆಲ್ಲವನ್ನೂ ಹೇಳಿಕೊಡುವ ಶಾಲೆಯೊಂದಿದೆ. ಅದೇ ಅಜ್ಜಿ ಮನೆ.

ಬೇಜಾರು, ಒಂಟಿತನ ಎಂಬ ಪದವೇ ಸುಳಿಯದಂತೆ ಬದುಕಿಗೆ ಚೈತನ್ಯ ತುಂಬುವ, ಬದುಕನ್ನು ಸಂಭ್ರಮಿಸೋ ಕಲೆಯನ್ನು ಹೇಳಿಕೊಡುವ ಪಾಠಶಾಲೆ ಅಜ್ಜಿ ಮನೆ. ಆ ಸುಂದರ ಪ್ರಪಂಚ ಕಲಿಸುವ ಬದುಕಿನ ಪಾಠವೇ ಅಂತಹದ್ದು. ಅದು ಬದುಕಿನ ಕೊನೆಯವರೆಗೂ ನೆನಪಿನಲ್ಲುಳಿಯುವುದು.

ಮಣಭಾರದ ಬ್ಯಾಗು, ಅರ್ಥವಾಗದ ಪಾಠ, ಬೋರ್‌ ಎನಿಸುವ ಹೋಂವರ್ಕ್‌ ಇವುಗಳೆಲ್ಲವನ್ನೂ ಮೂಲೆಗೆಸೆದು, ಕುಣಿದು, ಕುಪ್ಪಳಿಸಿ ಬಾಲ್ಯವನ್ನು ನಿಜವಾಗಿಯೂ ಸಂಭ್ರಮಿಸಿ, ಅನುಭವಿಸಲು ಇರುವ ಅದ್ಭುತ ತಾಣ ಅದು.

ಅಲ್ಲಿ, ತರಕಾರಿ ತೋಟದ ಉಸ್ತುವಾರಿ, ಹೂವಿನ ಗಿಡಗಳ ಆರೈಕೆ, ಎಮ್ಮೆ, ಎತ್ತು, ಕುರಿ ಕೋಳಿಗಳೊಡನೆ ಒಡನಾಟ, ನಾಯಿ-ಬೆಕ್ಕಿನ ಉಪಚಾರ, ಸಂಜೆ ಪೂಜೆ ಪುನಸ್ಕಾರ, ಹಾಡು, ಕಥೆ, ತಲೆಹರಟೆ, ಆಟ, ಬೈಗುಳ ಮಾಮೂಲು. ಮಾವು, ಹಲಸು, ಕಿತ್ತಳೆ, ನೇರಳೆ, ಪೇರಳೆ, ಪನ್ನೇರಳೆಗಳ ಸ್ವಾದ ಸವಿಯಬಹುದು. ಆ ರಸಾನುಭವವನ್ನು ವರ್ಣಿಸುತ್ತಾ ಹೊದರೆ ಮುಗಿಯುವುದೇ ಇಲ್ಲ.

ಮರ ಹತ್ತುವುದು, ನೆಗೆಯುವುದು, ನೀರಿನ ತೊರೆಯ ಜಾಡು ಹಿಡಿದು ಮೂಲ ಹುಡುಕುವುದು, ಅದಕ್ಕೆ ಕಟ್ಟೆಕಟ್ಟಿ ಈಜುವುದು, ಎಳನೀರಿಗೆ ಕಲ್ಲು ಹೊಡೆದು ಕೆಡವಿ ಕುಡಿಯುವುದು, ಗೇರುಬೀಜ ಹೆಕ್ಕಿ, ಕೆಂಡದಲ್ಲಿ ಸುಟ್ಟು ತಿನ್ನುವ ಖುಷಿ, ಮಾವಿನ ಕಾಯಿಗೆ ಉಪ್ಪು–ಖಾರ ಬೆರೆಸಿ ತಿಂದಾಗಿನ ರುಚಿಗೆ ಬೇರಾವುದು ಸಾಟಿ ಹೇಳಿ?. ಹೊಟ್ಟೆ ತುಂಬಿಸಿಕೊಂಡ ನಂತರ ಮರಕೋತಿ, ಕ್ರಿಕೆಟ್‌, ಕುಂಟೆಬಿಲ್ಲೆ, ಚಿನ್ನಿದಾಂಡು, ಕಬಡ್ಡಿ, ಗೋಲಿ, ಬಗುರಿ ಆಟಗಳ ಮೊರೆ ಹೋಗಬಹುದು. ನೆರೆಹೊರೆಯ ಮಕ್ಕಳೊಂದಿಗೆ ಆಡುತ್ತಿದ್ದರೆ ಏಪ್ರಿಲ್‌– ಮೇ ತಿಂಗಳ ಬಿಸಿಲ ಝಳ ಸ್ವಲ್ವವೂ ಬಾಧಿಸದು.

ವಿಡಿಯೊ ಗೇಮ್‌, ಮೊಬೈಲ್‌ ಹಿಡಿದುಕೊಂಡು ಕೂರುವುದಕ್ಕೆ ಅಲ್ಲಿ ಅವಕಾಶವೂ ಇಲ್ಲ. ‘ಮಣ್ಣು ಮುಟ್ಟಬೇಡ, ಗೇಟು ದಾಟಬೇಡ’ ಎಂದು ‘ಮಕ್ಕಳ ಸ್ವಾತಂತ್ರ’ಕ್ಕೆ ಗೆರೆ ಎಳೆಯುವವರಿಲ್ಲ. ‘ಅಲ್ಲಿ ಹೋಗಬೇಡ, ಅದನ್ನು ಮುಟ್ಟಬೇಡ, ಇಲ್ಲಿ ಬರಬೇಡ’ ಎಂದು ಅಡ್ಡಿಪಡಿಸುವವರಿಲ್ಲ.

ಹರಿಯೋ ನದಿಯ ನಿನಾದ, ಕಾಡಿನೊಳಗಿನ ಕಲರವ, ಗದ್ದೆ–ತೋಟಗಳಲ್ಲಿ ಬೀಸುವ ತಂಗಾಳಿ, ರಾತ್ರಿಯಿಡಿ ಕೋಲ ಕಟ್ಟುವುದನ್ನು ನೋಡುವುದು. ಸುಗ್ಗಿ, ಜಾತ್ರೆಯ ಸಂಭ್ರಮವನ್ನು ಇಂದಿನ ಬೇಸಿಗೆ ಶಿಬಿರಗಳು ಕಟ್ಟಿಕೊಡಲು ಸಾಧ್ಯವೇ ಇಲ್ಲ.

ಅವೆಲ್ಲಕ್ಕಿಂತ ಮಿಗಿಲಾಗಿ ಹಳೆ ತಲೆಮಾರು ಮತ್ತು ಹೊಸ ತಲೆಮಾರಿನ ನಡುವೆ ಬೆಸುಗೆ ಹಾಕುವ ಮೂಲಕ ಕುಟುಂಬ ವ್ಯವಸ್ಥೆಯನ್ನು ಬಲಪಡಿಸುತ್ತದೆ ಅಜ್ಜಿ ಮನೆ. ಅಣ್ಣ– ಅತ್ತಿಗೆ, ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು, ಸೋದರತ್ತೆ, ಸೋದರ ಮಾವನ ಮಕ್ಕಳು... ಹೀಗೆ ಸಂಬಂಧಿಕರೆಲ್ಲರೂ ಒಟ್ಟಿಗೆ ಸೇರುವ ಮೂಲಕ ರಕ್ತ ಸಂಬಂಧಕ್ಕೆ ನೀರೆರೆಯುತ್ತದೆ ಈ ಅಜ್ಜಿಮನೆ ಎಂಬ ತಾಣ.

ಸಂಬಂಧಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ, ಹಳ್ಳಿಯ ಸೊಗಡು, ಸಂಪ್ರದಾಯವನ್ನು ಆಸ್ವಾದಿಸಲು, ಜೀವನಾನುಭವವನ್ನು ಕಟ್ಟಿಕೊಳ್ಳಲು ಮಕ್ಕಳನ್ನು ಅಜ್ಜ– ಅಜ್ಜಿಯ ಮನೆಗೆ ಕಳುಹಿಸಿ. ಒಂದಿಷ್ಟು ದಿನ ಮನಸೋ ಇಚ್ಛೆ ಕುಣಿಯಲು ಬಿಡಿ. ಆಗ ನೋಡಿ ಅವರ ಉತ್ಸಾಹ, ಜೀವನದಲ್ಲಿ ಜೋಶ್‌...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT