ದೋಸ್ತಿ ಸರ್ಕಾರ ಭದ್ರಗೊಳಿಸಲು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ

ಗುರುವಾರ , ಏಪ್ರಿಲ್ 25, 2019
31 °C
ಜೆಡಿಎಸ್‌ ಮುಖಂಡರಿಂದ ಕಾರ್ಯಕರ್ತರಿಗೆ ಮನವಿ

ದೋಸ್ತಿ ಸರ್ಕಾರ ಭದ್ರಗೊಳಿಸಲು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ

Published:
Updated:
Prajavani

ಮೈಸೂರು: ‘ಹಿಂದಿನದೆಲ್ಲಾ ಮರೆತುಬಿಡಿ. ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದ ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯ ಪರ ಕೆಲಸ ಮಾಡಿ’ ಎಂದು ಜೆಡಿಎಸ್ ಮುಖಂಡರು ತಮ್ಮ ಕಾರ್ಯಕರ್ತರಿಗೆ ಇಲ್ಲಿ ಮನವಿ ಮಾಡಿದರು.

ಜೆಡಿಎಸ್‌ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಕ್ಷದ ಮುಖಂಡರು ಹೀಗೆ ಕೋರಿಕೊಂಡರು.

ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಆರಂಭದಲ್ಲಿ ಮಾತನಾಡಿ, ‘ಪಕ್ಷಕ್ಕಾಗಿ ನಾನೂ ಸಾಕಷ್ಟು ದುಡಿದಿದ್ದೇನೆ. ನಿಮ್ಮ ಹಾಗೆಯೇ ನಾನೂ ನೋವು ಅನುಭವಿಸಿದ್ದೇನೆ. ಆದರೆ, 10 ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಜೆಡಿಎಸ್‌ಗಾಗಿ ಕೆಲಸ ಮಾಡಿದ್ದೆವು. ಈಗ, ಸಮ್ಮಿಶ್ರ ಸರ್ಕಾರದ ಉಳಿವಿಗೆ ಕೆಲಸ ಮಾಡಬೇಕಿದೆ. ಬಿಜೆಪಿಯನ್ನು ರಾಜ್ಯದಲ್ಲಿ ದುರ್ಬಲಗೊಳಿಸಿದರೆ ಮಾತ್ರ ಈ ದೋಸ್ತಿ ಸರ್ಕಾರ ಭದ್ರವಾಗಿರುತ್ತದೆ’ ಎಂದು ಒತ್ತಿ ಹೇಳಿದರು.

ವಿಧಾನಸಭಾ ಚುನಾವಣೆ ಚುನಾವಣೆ ಪ್ರಕಟವಾದ ಸಂದರ್ಭದಲ್ಲಿ ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾವ ಎದುರಾಯಿತು. ಸರ್ಕಾರವು ಇನ್ನೂ ನಾಲ್ಕು ವರ್ಷ ಆಡಳಿತ ನಡೆಸಬೇಕಿದೆ. ಹಾಗಾಗಿ, ಮುಖ್ಯಮಂತ್ರಿ– ಉಪ ಮುಖ್ಯಮಂತ್ರಿಗಳ ಕುರ್ಚಿಗಳನ್ನೂ ಉಳಿಸಿಕೊಳ್ಳಬೇಕಿದೆ. ಈಗ ಕಾಂಗ್ರೆಸ್‌– ಜೆಡಿಎಸ್‌ ನಡುವೆ ಆಗಿರುವ ಒಪ್ಪಂದವನ್ನು ಗೌರವಿಸಬೇಕು. ಹಾಗಾಗಿ, ಪಕ್ಷದ ಎಲ್ಲರೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು. ಇಲ್ಲವಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲ, ಪಕ್ಷಕ್ಕೆ ಉಳಿಗಾಲವಿಲ್ಲ. ನಾಯಕರು ಹಾಗೂ ನಿಮಗೂ ಉಳಿಗಾಲವಿಲ್ಲ’ ಎಂದು ಅವರು ಎಚ್ಚರಿಸಿದರು.

ಹಳೆಯದನ್ನೆಲ್ಲಾ ಮರೆತುಬಿಡಿ: ವಿಧಾನಸಭಾ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರನ್ನು ಗೆಲ್ಲಿಸಬೇಕು; ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ಕ್ಷೇತ್ರದ ಜನತೆ ಪಣ ತೊಟ್ಟಿದ್ದು ನಿಜ. ಆದರೆ, ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಹಟ ಸಾಧಿಸುವುದು ಬೇಡ. ಈಗ ಪರಿಸ್ಥಿತಿ ಬದಲಾಗಿದೆ. ಹಳೆಯದನ್ನೆಲ್ಲಾ ಮರೆತು, ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಕೋರಿದರು.

‘ನಾನು ಈ ಚುನಾವಣೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಮುಖ್ಯಮಂತ್ರಿ ಬಳಿ ಹೋಗಿದೆ. ಆದರೆ, ಸಿದ್ದರಾಮಯ್ಯ ಹಾಗೂ ನನ್ನ ನಡುವೆ ನಡೆದ ಚರ್ಚೆಯ ಬಳಿಯ ಬದಲಾವಣೆಯಾಗಿದೆ. ಕೋಮುವಾದಿ ಪಕ್ಷವನ್ನು ಸೋಲಿಸಬೇಕು ಎನ್ನುವುದಷ್ಟೇ ನಮ್ಮೆಲ್ಲರ ಮುಂದಿನ ಆಶಯವಾಗಿದೆ’ ಎಂದು ಅವರು ಸ್ಪಷ್ಟ‍ಪಡಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್‌. ವಿಶ್ವನಾಥ್‌ ಮಾತನಾಡಿ, ‘ನಾವೆಲ್ಲರೂ ಜೆಡಿಎಸ್‌ ಬಾವುಟ ಹಿಡಿದು ಹೋರಾಡಿದ್ದೇವೆ ನಿಜ. ಆದರೆ, ಈ ಚುನಾವಣೆಯಲ್ಲಿ ಅದನ್ನು ಮಾಡುವುದು ಬೇಡ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಯಾವುದೇ ಷರತ್ತುಗಳನ್ನು ವಿಧಿಸದೇ ಮುಖ್ಯಮಂತ್ರಿ ಕುರ್ಚಿಯನ್ನು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಈಗ ಆಗಿರುವ ಚುನಾವಣಾ ಒಪ್ಪಂದದಂತೆ ನಾವು ಜವಾಬ್ದಾರಿ ವಹಿಸಿಕೊಳ್ಳೋಣ’ ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌, ಶಾಸಕ ಅಶ್ವಿನ್ ಕುಮಾರ್, ಮುಖಂಡರಾದ ಪ್ರೊ.ಕೆ.ಎಸ್.ರಂಗಪ್ಪ, ಉಮಾಶಂಕರ್‌, ಹಿನಕಲ್ ರಾಜಣ್ಣ, ನರಸಿಂಹಸ್ವಾಮಿ, ಮಾದೇಗೌಡ, ಅಬ್ದುಲ್ಲಾ ಭಾಗವಹಿಸಿದ್ದರು.

ಜೈಕಾರಕ್ಕೆ ಪ್ರತಿ ಜೈಕಾರ!

ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ‘ಚನ್ನಾಗಿ’ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾರ್ಯಕರ್ಯರು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿ ಬಿಡುತ್ತಾರೆ!

ಇದು ಶುಕ್ರವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ನಿಜವಾಗಿಬಿಟ್ಟಿತು. ‘ಬೆವರು ಸುರಿಸಿ ನಿಮ್ಮನ್ನು ಗೆಲ್ಲಿಸಿಕೊಟ್ಟಿರುವುದು ನಾವು. ನಿಮಗೆ ನಮ್ಮ ಕಷ್ಟ ಏನು ಗೊತ್ತು. ನಿಮಗಾಗಿ ನಾವು ಕೋರ್ಟ್ ಮೆಟ್ಟಿಲು ಹತ್ತುವಂತೆ ಆಗಿದೆ. ಈಗ ಕಾಂಗ್ರೆಸ್‌ ಅಭ್ಯರ್ಥಿಗೆ ವೋಟ್‌ ಹಾಕಬೇಕ‘ ಎಂದು ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ನಾವು ಕೆಲಸ ಮಾಡುವುದು ಜೆಡಿಎಸ್‌ಗಾಗಿ. ಕಾಂಗ್ರೆಸ್‌ಗೆ ಬೆಂಬಲ ಕೊಡಬೇಕು ಎಂದರೆ ನಾವು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿಬಿಡುತ್ತೇವಷ್ಟೇ’ ಎಂದು ಜೈಕಾರಗಳ ಸುರಿಮಳೆ ಸುರಿಸಿದರು. ಇದರಿಂದ ಜೆಡಿಎಸ್‌ನ ಮುಖಂಡರು ಕಕ್ಕಾಬಿಕ್ಕಿಯತಾದರು. ಜೈಕಾರ ಹಾಕುತ್ತಿದ್ದ ಕಾರ್ಯಕರ್ತರ ವಿಡಿಯೊ, ಫೋಟೊ ತೆಗೆಯುತ್ತಿದ್ದ ಮಾಧ್ಯಮದವರ ಮೇಲೆ ಹರಿಹಾಯ್ದರು.

ವೇದಿಕೆಯಿಂದ ಕೆಳಗೆ ಓಡಿಬಂದ ಸಚಿವ ಜಿ.ಡಿ.ದೇವೇಗೌಡರು, ‘ಇದೇನಿದು ನೀವು ಮಾಡುತ್ತಿರುವುದು. ನಿಮ್ಮ ಕಷ್ಟ ನಮಗೆ ಗೊತ್ತಿಲ್ಲವೆ’ ಎಂದು ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು. ಮತ್ತೆ ವೇದಿಕೆಯೇರಿ, ‘ಬೋಲೋ ಭಾರತ್‌ ಮಾತಾ ಕಿ ಜೈ’ ಎಂದು ಜೈಕಾರ ಕೂಗಿಸಿ, ಜೆಡಿಎಸ್‌ ಪಕ್ಷಕ್ಕೂ ಜೈಕಾರ ಹಾಕಿಸಿಬಿಟ್ಟರು.

ಅಕೌಂಟಿಗೆ ಹಣ ಹಾಕಿಸಿಬಿಡಿ:

ಬಳಿಕ, ಕಾರ್ಯಕರ್ತರ ಕಷ್ಟಗಳನ್ನು ಕುರಿತು ಮಾತನಾಡಿ, ‘ಎದೆಗುಂದಬೇಡಿ. ನಾವು ನಿಮ್ಮೊಂದಿಗೆ ಇದ್ದೇವೆ. ಈ ವರ್ಷ ಬೇರೆ ಮಳೆಯಾಗುವುದು ಕಡಿಮೆಯಂತೆ. ಬೆಳೆ ಇನ್ನು ಹೇಗೆ ಆಗುವುದೊ...’ ಎಂದು ಆಕಾಶ ನೋಡಿದರು. ಸಭೆಯಲ್ಲಿ ಕುಳಿತಿದ್ದ ಕಾರ್ಯಕರ್ತರಲ್ಲಿ ಕೆಲವರು, ‘ನಿಜ ಬೆಳೆ ಕಡಿಮೆಯಾಗುವುದಂತೆ. ನಮಗೆಲ್ಲಾ ಚೆಕ್‌ ಕೊಟ್ಟುಬಿಡಿ. ಅಕೌಂಟಿಗೆ ಹಣ ಹಾಕಿಸಿಬಿಡಿ’ ಎಂದು ಕಿರುನಕ್ಕರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !