ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆಗೆ ಸುತ್ತೂರಿನ ಧಾರ್ಮಿಕ ಸಭೆಯಲ್ಲಿ ಪ್ರತಿರೋಧ

ವಿವಿಧ ಧರ್ಮಗಳ ಧಾರ್ಮಿಕ ನಾಯಕರಿಂದ ಶಾಂತಿ ಮಂತ್ರ ಪಠಣ
Last Updated 24 ಜನವರಿ 2020, 13:59 IST
ಅಕ್ಷರ ಗಾತ್ರ

ಮೈಸೂರು: ಧರ್ಮ, ಧರ್ಮಗಳು ಹಾಗೂ ಮನುಷ್ಯ, ಮನುಷ್ಯರ ನಡುವಿನ ವಿಭಜನೆಗೆ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಯಿತು.

ಸಭೆಯಲ್ಲಿ ಮಾತನಾಡಿದ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ವಿಭಜನೆ ಬೇಡ ಎಂದು ಸಾರಿದರು. ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂದು ಒಕ್ಕೊರಲಿನಿಂದ ಕರೆ ನೀಡಿದರು.

ಮುಸ್ಲಿಂ ಧರ್ಮವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ, ‘ನಾವಿಂದು ವಿಭಜನೆಯ ಕಾಲದಲ್ಲಿ ಬದುಕುತ್ತಿದ್ದೇವೆ. ಯಾವ ಹಂತಕ್ಕೆ ಎಂದರೆ ದೇವರನ್ನೇ ವಿಭಜಿಸುವ ಕಾಲದಲ್ಲಿ ಇದ್ದೇವೆ’ ಎಂದು ಹರಿಹಾಯ್ದರು.

ದೇವರು ಹಿಂದೂಗಳಿಗೆ ಒಂದು ಕಡೆ ಕಣ್ಣು, ಮುಸ್ಲಿಮರಿಗೆ ಮತ್ತೊಂದು ಕಡೆ ಕಣ್ಣು ನೀಡಿದ್ದಾನೆಯೇ ಎಂದು ಪ್ರಶ್ನಿಸಿದ ಅವರು, ‘ನಾವೆಲ್ಲ ಒಂದು, ನಮಗೆಲ್ಲ ಒಬ್ಬನೇ ದೈವ’ ಎಂದು ಪ್ರತಿಪಾದಿಸಿದರು.

ವಿಭಜಿಸುವುದು ಯಾವತ್ತೂ ಧರ್ಮದ ಕೆಲಸ ಅಲ್ಲ. ಕೋಪಾವೇಶದಿಂದ ಮಾತನಾಡುವುದೂ ಧರ್ಮ ಅಲ್ಲ. ಎಲ್ಲ ಧರ್ಮಗಳೂ ಮಂದಹಾಸವನ್ನು ಹೇಳುತ್ತವೆ. ಎಲ್ಲ ಧರ್ಮಗಳೂ ನಾವೆಲ್ಲ ಒಂದು ಎಂದು ಸಾರುತ್ತವೆ ಎಂದರು.

‘ನಮಗಿಂತ, ನಮ್ಮ ಧರ್ಮಕ್ಕಿಂತ ದೊಡ್ಡದಿಲ್ಲ ಎಂಬುದೇ ಎಲ್ಲ ಸಮಸ್ಯೆಗಳಿಗೆ ಮೂಲ. ಸೋಲಿಸುವುದಕ್ಕೆ ಧರ್ಮ ಇರಬಾರದು. ಎಲ್ಲರನ್ನೂ ಒಂದುಗೂಡಿಸುವುದಕ್ಕೆ ಧರ್ಮ ಇರಬೇಕು’ ಎಂದು ಹೇಳಿದರು.

ಆಂತರಿಕ ಕಲಹ ಹಾಗೂ ಛಿದ್ರತೆಗಳಿಂದ ನಾಗರಿಕತೆಗಳು ನಾಶವಾಗಿವೆಯೇ ಹೊರತು ಹೊರಗಿನ ದಾಳಿಗಳಿಂದ ಅಲ್ಲ ಎಂದು ಇತಿಹಾಸಕಾರ ಆರ್ನಾಲ್ಡ್ ಟಾಯ್ನಬಿ ಹೇಳುತ್ತಾರೆ. ಈ ಮಾತನ್ನು ನಾವು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ವೀರಶೈವ ಹಾಗೂ ಲಿಂಗಾಯತ ಎಂದು ಹೊಡೆದಾಡುವುದೇ ಹಾಸ್ಯಾಸ್ಪದ ಎಂದರು.

ಸಂತ ಜೋಸೆಫರ ದೇವಾಲಯದ ಪ್ರಧಾನ ಧರ್ಮಗುರು ಸ್ಟ್ಯಾನ್ಲಿ ಡಿ ಅಲ್ಮೆರಾ, ಶಾಂತಿಯ ಅಗತ್ಯ ಇದೆ ಎಂದು ಹೇಳಿದರು.

ಶ್ರವಣಬೆಳಗೊಳದ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಧರ್ಮ ಇದ್ದಲ್ಲಿ ಜಯ ಇರುತ್ತದೆ. ಅಧರ್ಮವಾಗಿ ಯಾರೂ ನಡೆಯಬಾರದು. ಶಾಂತಿ ಇಂದ ಎಲ್ಲರೂ ಇರುವ ಮೂಲಕ ಅಶಾಂತಿಯನ್ನು ತೊಲಗಿಸಬೇಕು’ ಎಂದು ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸೋಸಲೆಯ ವ್ಯಾಸರಾಜ ಮಠದ 1008 ವಿದ್ಯಾಶ್ರೀಶತೀರ್ಥ ಶ್ರೀಪಾದ, ಶಾಸಕರಾದ ಸೌಮ್ಯಾ ರೆಡ್ಡಿ, ಬಿ.ಸಿ.ಪಾಟೀಲ, ಎಂ.ಪಿ.ರೇಣುಕಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT