ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರಿಗೆ ಹರಿದು ಬಂದ ಭಕ್ತ ಸಾಗರ !

ಶಿವರಾತ್ರೀಶ್ವರ ಶಿವಯೋಗಿಗಳ ಆರು ದಿನದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
Last Updated 22 ಜನವರಿ 2020, 10:44 IST
ಅಕ್ಷರ ಗಾತ್ರ

ಸುತ್ತೂರು: ಕಪಿಲೆಯ ತಟದಲ್ಲಿರುವ ಸುಕ್ಷೇತ್ರ ಸುತ್ತೂರಿನ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಆರು ದಿನದ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆತಿದ್ದು, ಭಕ್ತಸಾಗರವೇ ಗ್ರಾಮಕ್ಕೆ ಹರಿದು ಬರುತ್ತಿದೆ.

ಜಾತ್ರೆಗಾಗಿ ಸುತ್ತೂರು ನವ ವಧುವಿನಂತೆ ಶೃಂಗಾರಗೊಂಡಿದೆ. ಎತ್ತ ನೋಡಿದರೂ ತಳಿರು–ತೋರಣ, ಚಪ್ಪರ ಗೋಚರಿಸುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಜನಸಾಗರ. ರಾತ್ರಿ ವೇಳೆ ಕಣ್ಮನ ಸೆಳೆಯುವ ವಿದ್ಯುತ್‌ ದೀಪಾಲಂಕಾರ ರಾರಾಜಿಸುತ್ತಿದೆ. ಅಹೋರಾತ್ರಿ ಜನರ ಸಂಚಾರವಿದೆ.

ಜಾತ್ರಾ ಮಹೋತ್ಸವಕ್ಕೆ ಈಚೆಗಿನ ವರ್ಷಗಳಲ್ಲಿ ಹೊಸ ಸ್ವರೂಪ ಸಿಕ್ಕಿದ್ದು, ವರ್ಷದಿಂದ ವರ್ಷಕ್ಕೆ ಹೊಸತು ಅನಾವರಣಗೊಳ್ಳುತ್ತಿದೆ. ಹಿಂದಿನ ಜಾತ್ರೆಗಿಂತ ಈ ಬಾರಿಯ ಜಾತ್ರೆ ಜೋರಾಗಿದೆ. ಹಲವು ಹೊಸತುಗಳಿವೆ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ.

ಸುತ್ತೂರು ಜಾತ್ರೆಯ ಖ್ಯಾತಿ, ವೈಶಿಷ್ಟ್ಯ ಈಚೆಗಿನ ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಸೇರಿದಂತೆ ಹೊರ ರಾಜ್ಯಗಳಲ್ಲೂ ಪಸರಿಸಿದೆ. ನೆರೆಯ ರಾಜ್ಯಗಳಿಂದಲೂ ಜನರು ಜಾತ್ರೆಯ ವೀಕ್ಷಣೆಗಾಗಿ ಬರುವುದು ವಿಶೇಷವಾಗಿದೆ. ಮಕರ ಸಂಕ್ರಮಣದ ಬಳಿಕ ನಡೆಯುವ ಜಾತ್ರೆಗೆ ಉತ್ತರ ಕರ್ನಾಟಕದ ಅಪಾರ ಜನರು ಬರುತ್ತಿದ್ದಾರೆ.

ಸುತ್ತೂರಿನ ಬೀದಿಯುದ್ದಕ್ಕೂ ಸ್ಥಳೀಯ ಖಾದ್ಯಗಳ ಆಹಾರ ಮಳಿಗೆಗಳ ಜತೆಗೆ, ಉತ್ತರ ಕರ್ನಾಟಕದ ಜವಾರಿ ಊಟವೂ ಲಭ್ಯವಿದೆ. ವೀರಶೈವ ಖಾನಾವಳಿಗಳು ತಮ್ಮ ಮಳಿಗೆ ತೆರೆದು ಬಿಳಿಜೋಳದ ರೊಟ್ಟಿ, ಸಜ್ಜೆ ರೊಟ್ಟಿಯ ಊಟ ಉಣಬಡಿಸುತ್ತಿವೆ. ಮಿರ್ಚಿಯೂ ಇಲ್ಲಿದೆ.

ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಕೈಗಾರಿಕಾ ಪ್ರದರ್ಶನ, ಆಹಾರ ಮೇಳ, ದೇಸಿ ಆಟೋಟ, ದೋಣಿ ವಿಹಾರ, ರಂಗೋಲಿ, ಸೋಬಾನೆ ಸ್ಪರ್ಧೆಗಳಿಗೂ ವಿಧ್ಯುಕ್ತ ಚಾಲನೆ ದೊರೆತಿದ್ದು, ಸುತ್ತೂರಿನಲ್ಲಿ ಜಾತ್ರೆಯ ಆರು ದಿನವೂ ದೇಸಿಯ ಗತ ವೈಭವ ಮರುಕಳಿಸಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಕ್ತ ಸಾಗರವೇ ಜಮಾಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT