ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಮಠ ಮಾದರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಶಿವರಾತ್ರೀಶ್ವರ ಶಿವಯೋಗಿಗಳ 1,061ನೇ ಜಯಂತಿಗೆ ಚಾಲನೆ
Last Updated 11 ಜನವರಿ 2021, 11:15 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರು ಮಠವು ಜನಪರ ಸೇವೆಗಳಿಗೆ ಇತರೆ ಮಠಗಳಿಗೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಂಜನಗೂಡು ತಾಲ್ಲೂಕಿನ ಸುತ್ತೂರು ಮಠದಲ್ಲಿ ಸೋಮವಾರ ಶಿವರಾತ್ರೀಶ್ವರ ಶಿವಯೋಗಿಗಳ 1,061ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗಲೆಲ್ಲ ಶ್ರೀಮಠ ನೆರವಿನ ಹಸ್ತ ಚಾಚಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಎಲ್ಲಾ ವಿಧದ ರೀತಿಯಲ್ಲೂ ಬೆಂಬಲ ನೀಡಿದೆ. ತ್ರಿವಿಧ ದಾಸೋಹಗಳ ಮೂಲಕ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ. ಇಂತಹ ಜನಪರ ಕಾರ್ಯಗಳಿಗೆ ಸರ್ಕಾರದ ನೆರವು ಇದ್ದೇ ಇರುತ್ತದೆ ಎಂದು ಹೇಳಿದರು.

ಕಪಿಲಾ ನದಿಯ ದಡದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಮಠ ಸ್ಥಾಪಿಸಿದ ಶಿವರಾತ್ರೀಶ್ವರ ಶಿವಯೋಗಿಗಳು ಶ್ರೇಷ್ಠ ಸಂತರಲ್ಲಿ ಪ್ರಾತಃಸ್ಮರಣೀಯರಾಗಿದ್ದಾರೆ. ಇವರು ಗಂಗರು ಮತ್ತು ಚೋಳರ ನಡುವೆ ಸಂಭವಿಸಲಿದ್ದ ಯುದ್ಧವನ್ನು ತಡೆದು ಘೋರ ಅನಾಹುತ ತಪ್ಪಿಸಿದರು ಎಂದು ಶ್ಲಾಘಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುತ್ತಿದ್ದರೂ, ತಂತ್ರಜ್ಞಾನದ ನೆರವಿನಿಂದ ಈ ಕಾರ್ಯಕ್ರಮ ಮನೆಮನೆಗೆ ತಲುಪಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಎಸ್.ಎನ್.ಸಿಂಪಿಗೇರ ಅವರ ‘ಶ್ರೀ ಸುತ್ತೂರೇಶ್ವರ ಶತಕಗಳು’ ಕೃತಿಯನ್ನು ಹಾಗೂ ಸಿದ್ಧಾಂತಿ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಅವರು ರಚಿಸಿರುವ ಪಂಚಾಂಗವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ನೇರಪ್ರಸಾರ ಮಾಡಲಾಯಿತು.

ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪೌರಾಡಳಿತ ಸಚಿವ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ನಿರಂಜನ್ ಕುಮಾರ್, ತನ್ವೀರ್ ಸೇಠ್, ಎನ್.ಮಹೇಶ್, ಅಶ್ವಿನ್ ಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಚಿತ್ರ ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT