ಪ್ರಶಸ್ತಿ ಸ್ವೀಕರಿಸಿದ ಹುಣಸೂರು ನಗರಸಭೆ

7
ಘನತ್ಯಾಜ್ಯ ನಿರ್ವಹಣೆಗೆ ಸ್ವಚ್ಛ ಭಾರತ್ ಮಿಷನ್‌ 2018ರ ಪ್ರಶಸ್ತಿ

ಪ್ರಶಸ್ತಿ ಸ್ವೀಕರಿಸಿದ ಹುಣಸೂರು ನಗರಸಭೆ

Published:
Updated:
ಮಧ್ಯಪ್ರದೇಶದ ಇಂದೋರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ಜಿತ್ ಸಿಂಗ್ ಪೂರಿ ಅವರಿಂದ ಹುಣಸೂರು ನಗರಸಭೆ ಅಧ್ಯಕ್ಷ ಶಿವಕುಮಾರ್‌ ಹಾಗೂ ಪೌರಾಯುಕ್ತ ಶಿವಪ್ಪನಾಯಕ ಪ್ರಶಸ್ತಿ ಸ್ವೀಕರಿಸಿದರು

ಹುಣಸೂರು: ಸ್ವಚ್ಛ ಭಾರತ್‌ ಮಿಷನ್‌ 2018 ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಗೆ ದಕ್ಷಿಣ ಭಾರತ ವಿಭಾಗದಲ್ಲಿ ಹುಣಸೂರು ನಗರಸಭೆ ಪಾತ್ರವಾಗಿದ್ದು, ಶನಿವಾರ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ₹10 ಲಕ್ಷ ನಗದು ಹಾಗೂ ಪ್ರಮಾಣ ಪತ್ರ ಸ್ವೀಕರಿಸಲಾಯಿತು.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ಜಿತ್ ಸಿಂಗ್ ಪೂರಿ ಅವರಿಂದ  ಹುಣಸೂರು ನಗರಸಭೆ ಅಧ್ಯಕ್ಷ ಶಿವಕುಮಾರ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಮಧ್ಯಪ್ರದೇಶದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮಾಯಾಸಿಂಗ್‌ ಮತ್ತು ಕಾರ್ಯದರ್ಶಿ ದುರ್ಗಾಸಿಂಗ್ ಶಂಕರ್‌ ಉಪಸ್ಥಿತರಿದ್ದರು ಎಂದು ನಗರಸಭೆ ಪೌರಾಯುಕ್ತ ಶಿವಪ್ಪನಾಯಕ ತಿಳಿಸಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ತೆಲಂಗಾಣ, ಗೋವಾ, ಕೇರಳ ರಾಜ್ಯಗಳು ದಕ್ಷಿಣ ಭಾರತ ವಿಭಾಗದಲ್ಲಿದ್ದು, ಈ ರಾಜ್ಯಗಳಲ್ಲಿ ಒಂದು ಲಕ್ಷಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಹುಣಸೂರು ನಗರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಪ್ರಶಸ್ತಿಯನ್ನು ಹುಣಸೂರು ನಗರದ ಸಮಸ್ತ ನಾಗರಿಕರಿಗೆ ಅರ್ಪಿಸಲಾಗುವುದು. ಅವರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ. ಮುಂದೆಯೂ ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಗೆ ನಗರಸಭೆಯೊಂದಿಗೆ ಸಂಪೂರ್ಣ ಕೈ ಜೋಡಿಸಬೇಕು’ ಎಂದು ನಗರಸಭೆ ಅಧ್ಯಕ್ಷ ಶಿವಕುಮಾರ್‌ ತಿಳಿಸಿದ್ದಾರೆ.

‘ಸ್ವಚ್ಛ ನಗರ ಪ್ರಶಸ್ತಿಗೆ ಭಾಜನವಾಗುವ ನಿಟ್ಟಿನಲ್ಲಿ  ಪೌರಕಾರ್ಮಿಕರು ಹಾಗೂ ಪರಿಸರ ಎಂಜಿನಿಯರ್‌ ವಿಭಾಗ ಸಂಪೂರ್ಣ ಶ್ರಮವಹಿಸಲಿದೆ. ಆದ್ದರಿಂದ ನಾಗರಿಕರು ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಪೌರಕಾರ್ಮಿಕರಿಗೆ ನೀಡಿ ಸಹಕರಿಸಬೇಕು’ ಎಂದು ನಗರಸಭೆ ಪರಿಸರ ಎಂಜಿನಿಯರ್‌ ರವಿಕುಮಾರ್‌ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !