ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ಜನ್ಮದಿನಾಚರಣೆ: ಪೌರಕಾರ್ಮಿಕರ ಸಂಭ್ರಮ

ಗಣಪತಿ ಸಚ್ಚಿದಾನಂದ ಸ್ವಾಮೀಜಿ 77ನೇ ಜನ್ಮದಿನ ಆಚರಣೆ
Last Updated 2 ಜೂನ್ 2019, 19:51 IST
ಅಕ್ಷರ ಗಾತ್ರ

ಮೈಸೂರು: ಕೊರತೆಗಳ ನಡುವೆಯೇ ಕಲಿಕೆಯಲ್ಲಿ ಉನ್ನತ ಸಾಧನೆ ಮಾಡಿದ ಪೌರಕಾರ್ಮಿಕರ ಮಕ್ಕಳು ಸನ್ಮಾನ ಸ್ವೀಕರಿಸಿ ಸಂಭ್ರಮಪಟ್ಟರೆ, ಗಾಲಿಕುರ್ಚಿಗಳನ್ನು ಪಡೆದ ಅಂಗವಿಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅಲ್ಲಿದ್ದ ಮಹಿಳೆಯರು, ಮಕ್ಕಳಲ್ಲಿ ಹಬ್ಬದ ಸಂತಸ ಮನೆಮಾಡಿತ್ತು.

ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಜನ್ಮದಿನದ ಅಂಗವಾಗಿ ಆಶ್ರಮದ ನಾದಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪೌರಕಾರ್ಮಿಕರ ಸಮ್ಮೇಳನದಲ್ಲಿ ಕಂಡುಬಂದ ದೃಶ್ಯಗಳಿವು.

ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ ನೂರಾರು ಪೌರಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಶ್ರಮದ ಮುಖ್ಯದ್ವಾರದ ಬಳಿಯಿಂದ ನಾದಮಂಟಪದವರೆಗೆ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಮಹಿಳೆಯರು, ಮಕ್ಕಳು ಮತ್ತು ವಾದ್ಯ ತಂಡದ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪೌರಕಾರ್ಮಿಕ ಸಮುದಾಯದವರನ್ನು ಗೌರವಿಸಲಾಯಿತು. 2018–19ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಅಂಕಗಳಿಸಿದ ಚಂದ್ರಶೇಖರ್‌ ಮತ್ತು ಪವಿತ್ರಾ ಅವರನ್ನು ಸನ್ಮಾನಿಸಲಾಯಿತು. 221 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ವಿತರಿಸಲಾಯಿತು.

ಅಂಗವಿಕಲರಿಗೆ 11 ಗಾಲಿಕುರ್ಚಿಗಳು ಮತ್ತು ಐದು ಟ್ರೈ ಸೈಕಲ್‌ಗಳನ್ನು ಹಸ್ತಾಂತರಿಸಲಾಯಿತು. ಪೌರಕಾರ್ಮಿಕ ಕಾಲೊನಿ ದೇವಾಲಯಗಳ ಐದು ಭಜನಾ ತಂಡಗಳಿಗೆ ಸಂಗೀತ ವಾದ್ಯಗಳನ್ನು ಪ್ರದಾನ ಮಾಡಲಾಯಿತು. ಕಿಕ್‌ ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಿರುವ ಎ.ರಂಜಿತ್‌ ಅವರಿಗೆ ಆಶ್ರಮದ ವತಿಯಿಂದ ಕಿಕ್ ಬಾಕ್ಸಿಂಗ್‌ ಕಿಟ್‌ ವಿತರಿಸಲಾಯಿತು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ದಲಿತರು ಜೀತಪದ್ಧತಿಯಂತಹ ಅನಿಷ್ಠ ಪದ್ಧತಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಸಾಕಷ್ಟು ಸವಲತ್ತುಗಳನ್ನು ಕೊಟ್ಟಿರುವುದರಿಂದ ದಲಿತರ ಪರಿಸ್ಥಿತಿ ಈಗ ಅಲ್ಪ ಸುಧಾರಿಸಿಕೊಂಡಿದೆ. ಆದರೆ, ಸಮಾಜವು ಇಂದು ಕೂಡಾ ಅವರನ್ನು ಪ್ರತ್ಯೇಕವಾಗಿ ನೋಡುತ್ತಿರುವುದು ವಿಪರ್ಯಾಸ ಎಂದರು.

ಕಷ್ಟಪಟ್ಟು ದುಡಿದರೂ ಸಮಾಜ ನಮ್ಮನ್ನು ದೂರವಿಟ್ಟಿದೆ ಎಂಬ ಭಾವನೆ ದಲಿತರರಲ್ಲಿದೆ. ಅದು ದೂರವಾಗಬೇಕು. ಪೌರಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಬೇಕು. ಹಾಗಾದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಮಾತನಾಡಿ, ಸ್ವಾಮೀಜಿ ಅವರು ಈ ಆಶ್ರಮದ ಮೂಲಕ ಪೌರಕಾರ್ಮಿಕ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಳೆದ 20 ವರ್ಷಗಳಿಂದ ಪೌರಕಾರ್ಮಿಕ ಸಮುದಾಯದ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಪೌರಕಾರ್ಮಿಕ ಕಾಲೊನಿಗಳಲ್ಲಿ 15 ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. 584 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅವಧೂತ ದತ್ತ ಪೀಠದ ದತ್ತ ವಿಜಯಾನಂದ ಸ್ವಾಮೀಜಿ, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಉನ್ನತ ಸಮಿತಿಯ ಅಧ್ಯಕ್ಷ ಎನ್‌.ಮಾರ, ರಾಜ್ಯ ಘಟಕದ ಉಪಾಧ್ಯಕ್ಷ ಆರ್‌.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಎಂ.ಪಳನಿಸ್ವಾಮಿ, ಮುಖಂಡರಾದ ದೊರೆ, ಅರುಣ್ ಸಾಗರ್, ಆರ್ಮುಗಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT