ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿಗೆ ಸಮರ್ಥ ಕಿರಿಯ ಸ್ವಾಮೀಜಿ ಲಭ್ಯತೆ ಕಡುಕಷ್ಟ– ಸ್ವಾಮೀಜಿಗಳ ಅಭಿಮತ

ಮಠಕ್ಕಾಗಿ ಎಲ್ಲವನ್ನೂ ಕೊಡುವ ಭಕ್ತರು ಮಕ್ಕಳನ್ನು ಕೊಡುವುದಿಲ್ಲ
Last Updated 27 ಮೇ 2019, 19:37 IST
ಅಕ್ಷರ ಗಾತ್ರ

ತಲಕಾಡು: ರಾಜ್ಯದಲ್ಲಿರುವ ವಿವಿಧ ಮಠಗಳಿಗೆ ಸಮರ್ಥ ಕಿರಿಯ ಸ್ವಾಮೀಜಿ ಸಿಗುವುದು ಬಲು ಕಷ್ಟ ಎಂಬ ಅಭಿಪ್ರಾಯ ಇಲ್ಲಿನ ಮೇದಿನಿ ಮಠದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ವ್ಯಕ್ತವಾಯಿತು.

ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ವಿಷಯ ಪ್ರಸ್ತಾಪಿಸಿದರು. ‘ಪ್ರತಿಭಾವಂತರಾಗಿರುವ ಮಕ್ಕಳನ್ನು ಮಠಗಳ ಕಿರಿಯ ಸ್ವಾಮೀಜಿಯನ್ನಾಗಿ ನೇಮಕ ಮಾಡಬೇಕು ಎಂದು ಕೇಳಿದರೆ ಗೃಹಸ್ಥರು ಒಪ್ಪಿಗೆ ಸೂಚಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಓದಿ ವೈದ್ಯರಾದರೆ ಕೇವಲ ದೇಹಕ್ಕೆ ಅಂಟುವ ಕಾಯಿಲೆಗಳನ್ನಷ್ಟೇ ಗುಣಪಡಿಸುತ್ತಾರೆ. ಅದೇ ಅವರು ಮಠದ ಸ್ವಾಮೀಜಿಯಾದರೆ ಭವರೋಗವನ್ನು ಕಳೆಯುತ್ತಾರೆ ಎಂದು ಹೇಳಿದರು. ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಯೂ ಇದಕ್ಕೆ ದನಿಗೂಡಿಸಿದರು.

‘ಮಠಕ್ಕಾಗಿ ದವಸ ಧಾನ್ಯ, ಹಣ, ಒಡವೆಗಳನ್ನು ನೀಡಲು ಅನೇಕ ಭಕ್ತರು ಸಿದ್ಧರಿದ್ದಾರೆ. ಆದರೆ, ತಮ್ಮ ಮಕ್ಕಳನ್ನು ಸ್ವಾಮೀಜಿಯನ್ನಾಗಿಸಿ ಎಂದು ಕೇಳಿದರೆ ಹಿಂಜರಿಯುತ್ತಾರೆ’ ಎಂದು ತಿಳಿಸಿದರು.

ಮಠಾಧಿಪತಿಯಾಗುವುದೆಂದರೆ ಅದು ಸುಲಭದ ಮಾತಲ್ಲ. ಅದೊಂದು ಖಡ್ಗದ ಮೇಲಿನ ನಡಿಗೆ ಎಂದು ವ್ಯಾಖ್ಯಾನಿಸಿದರು.

ಮೇದಿನಿ ಮಠದ ಶಿವಲಿಂಗಸ್ವಾಮಿ ಮಾತನಾಡಿ, ‘ಕಲ್ಯಾಣ ಕ್ರಾಂತಿಯಾದಾಗ ಶಿವಲಿಂಗಸ್ವಾಮಿ ಎಂಬ ಶರಣರು ಇಲ್ಲಿಗೆ ಬಂದು ಮಠ ಸ್ಥಾ‍ಪಿಸಿದರು. ಅಲ್ಲಿಂದ ಇಲ್ಲಿಯವರೆಗೆ ಮಠದ ಎಲ್ಲ ಸ್ವಾಮೀಜಿಗಳ ಹೆಸರು ಶಿವಲಿಂಗಸ್ವಾಮಿ ಎಂದೇ ಇರುವುದು ವಿಶೇಷ. ಈ ಊರಿನಲ್ಲಿ ಇದ್ದ 3 ಮಠಗಳ ಪೈಕಿ ಉಳಿದಿರುವುದು ಮೇದಿನಿ ಮಠ ಮಾತ್ರ’ ಎಂದು ಹೇಳಿದರು.

ಬಿಜೆಪಿಯ ಯುವ ಮೋರ್ಚಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ಜನರೆಲ್ಲರೂ ಒಂದೇ ದಾರಿಯಲ್ಲಿ ನಡೆಯುವ ಸೂಚನೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

ಸೈನಿಕರು ದೇಶವನ್ನು ರಕ್ಷಿಸಿದರೆ, ಮಠಗಳು ಸಮಾಜವನ್ನು ರಕ್ಷಿಸುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಮಠಗಳು ನೀಡಿದ ಕೊಡುಗೆಗಳನ್ನು ಮರೆಯಲಾಗದು ಎಂದು ಬಣ್ಣಿಸಿದರು.

ಬೀಸಾಡುವುದೇ ಸಂಸ್ಕೃತಿ– ಸುತ್ತೂರು ಸ್ವಾಮೀಜಿ ಬೇಸರ
‘ಇತ್ತೀಚೆಗೆ ಬೀಸಾಡುವುದೇ ಸಂಸ್ಕೃತಿಯಾಗುತ್ತಿದೆ’ ಎಂದು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಬಾರಿಯೂ ವಿದ್ಯಾರ್ಥಿಗಳು ಊಟಕ್ಕೆ ಕುಳಿತಾಗ ಊಟದೆಲೆಯ ಪಕ್ಕದಲ್ಲಿ ಹಾಕುತ್ತಿದ್ದ ಕರಿಬೇವು, ಕೊತ್ತಂಬರಿ, ಮೆಣಸಿನಕಾಯಿ ಮೊದಲಾದ ವಸ್ತುಗಳನ್ನು ಧಾರವಾಡದ ಮೃತ್ಯುಂಜಯ ಸ್ವಾಮೀಜಿ ಆಯ್ದುಕೊಂಡು ತಮ್ಮ ಮಡಿಲಿಗೆ ಹಾಕಿಕೊಳ್ಳುತ್ತಿದ್ದರು. ಈ ರೀತಿ ಮಾಡಬೇಡಿರೆಂದು ವಿದ್ಯಾರ್ಥಿಗಳು ಕೈ ಮುಗಿದರೆ, ಊಟಕ್ಕೆ ತಿನ್ನಲಾರದ ಯಾವುದೇ ವಸ್ತುವನ್ನು ಹಾಕುವುದಿಲ್ಲ. ಒಂದು ಅಗುಳನ್ನೂ ಬಿಡದೆ ಊಟ ಮಾಡಬೇಕು ಎಂದು ಹೇಳುತ್ತಿದ್ದರು. ಊಟ ಮಾಡಿದರೆ ತಟ್ಟೆ ತೊಳೆದಂತೆ ಮಾಡಬೇಕು’ ಎಂದು ಹೇಳಿದರು.

‍ಒಂದುಗೂಡಲು ವಿದ್ವಾನ್ ಶಿವಕುಮಾರಸ್ವಾಮಿ ಕರೆ
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ವಿದ್ವಾನ್ ಡಾ.ಎಂ.ಶಿವಕುಮಾರಸ್ವಾಮಿ, ‘ವೀರಶೈವರು ಮತ್ತು ಲಿಂಗಾಯತರು ಒಂದೂಗೂಡಬೇಕು’ ಎಂದು ಕರೆ ನೀಡಿದರು.

ಸಮಾಜವು ಒಂದುಗೂಡಿ ತಮ್ಮ ಮುಖಂಡರನ್ನು ಬೆಳೆಸಬೇಕೇ ಹೊರತು ಅವರ ಕಾಲೆಳೆಯಬಾರದು. ಆದರೆ, ಇಂದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಮಾಜದ ಮುಖಂಡರೇ ಪರಸ್ಪರ ಕಾಲೆಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

**

ಇತಿಹಾಸದ ಆಳದಿಂದ ಅಂತಃಸತ್ವವನ್ನು ಹೀರಿಕೊಳ್ಳಬೇಕು. ಮೇದಿನಿ ಮಠದ ಮುಂದಿನ ಬೆಳವಣಿಗೆಗೆ ಇದು ಹೊಸ ದಾರಿ
-ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ,ಕನಕಪುರದ ಶ್ರೀದೇಗುಲಮಠದ ಅಧ್ಯಕ್ಷ

**

ಬಸವಣ್ಣನವರ ಚಿತ್ರದ ಪಕ್ಕದಲ್ಲಿ ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರ ಇಟ್ಟು ಪೂಜಿಸುವಷ್ಟರ ಮಟ್ಟಿಗೆ ಅವರ ಸೇವಾ ಕೈಂಕರ್ಯ ಇದೆ. ಅವರು ಪ್ರಾತಃಸ್ಮರಣೀಯರು
-ಪರಿಮಳಾ ನಾಗಪ್ಪ,ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT