ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗರ ಹೃದಯ ಗೆದ್ದಿದ್ದ ಎಸ್‌ಪಿಬಿ

ಫೆಬ್ರುವರಿಯಲ್ಲಿ ನೀಡಿದ್ದ ಕಾರ್ಯಕ್ರಮವೇ ಕೊನೆಯದ್ದು
Last Updated 25 ಸೆಪ್ಟೆಂಬರ್ 2020, 15:17 IST
ಅಕ್ಷರ ಗಾತ್ರ

ಮೈಸೂರು: ಗಾಯನ ಲೋಕದ ದಿಗ್ಗಜ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವು ಸಲ ಕಾರ್ಯಕ್ರಮ ನೀಡಿ, ಇಲ್ಲಿನ ಅಭಿಮಾನಿಗಳ ಮನಗೆದ್ದಿದ್ದರು.

ಇದೇ ವರ್ಷ ಫೆಬ್ರುವರಿಯಲ್ಲಿ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ (ಎಸ್‌ವಿವೈಎಂ) ವತಿಯಿಂದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹಾಡಿದ್ದರು. ಅಲ್ಲಿ ಸೇರಿದ್ದ ಸಾವಿರಕ್ಕೂ ಅಧಿಕ ಮಂದಿ ಅವರ ಕಂಠಸಿರಿಗೆ ತಲೆದೂಗಿದ್ದರು.

ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವವರಿಗೆ ಸಹಾಯಾರ್ಥವಾಗಿ ಎಸ್‌ವಿವೈಎಂ ವತಿಯಿಂದ ‘ಸ್ವರಾನುಭೂತಿ’ ಎಂಬ ಹೆಸರಿನಲ್ಲಿ ಈ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಮೈಸೂರಿನಲ್ಲಿ ಅವರು ಪಾಲ್ಗೊಂಡ ಕೊನೆಯ ಕಾರ್ಯಕ್ರಮ ಇದು.

ಗಾಯಕಿ ದಿವ್ಯಾ ರಾಘವನ್ ಹಲವು ಹಾಡುಗಳಿಗೆ ಎಸ್‌ಪಿಬಿ ಅವರಿಗೆ ಸಾಥ್ ನೀಡಿದ್ದರು. ‘ಕನ್ನಡ ನಾಡಿನ ಜೀವ ನದಿ ಕಾವೇರಿ’, ‘ನನ್ನ ಹಾಡು ನನ್ನದು ನನ್ನ ರಾಗ ನನ್ನದು’, ‘ಈ ಭೂಮಿ ಬಣ್ಣದ ಬುಗುರಿ’ ಹಾಡುಗಳ ಮೂಲಕ ನೆರೆದವರನ್ನು ರಂಜಿಸಿದ್ದರು.

2018ರ ದಸರಾ ಉತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಕನ್ನಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅಂದು ಮಳೆ ಸುರಿದಿದ್ದರೂ ಅದನ್ನು ಲೆಕ್ಕಿಸದೆ ಹಲವು ಹಾಡುಗಳನ್ನು ಪ್ರಸ್ತುತಪಡಿಸಿದ್ದರು. ಪ್ರೇಕ್ಷಕರು ಕೂಡಾ ಮಳೆಯಲ್ಲಿ ನೆನೆಯುತ್ತಾ ಅವರ ಕಂಠಕ್ಕೆ ಮನಸೋತಿದ್ದರು. 2010ರ ದಸರಾದಲ್ಲೂ ಕಾರ್ಯಕ್ರಮ ನೀಡಿದ್ದರು.

ಅವಧೂತ ದತ್ತ ಪೀಠಕ್ಕೆ ಭೇಟಿ: ಎಸ್‌ಪಿಬಿ ಅವರು ಮೈಸೂರಿಗೆ ಬಂದಾಗಲೆಲ್ಲಾ ಅವಧೂತ ದತ್ತಪೀಠಕ್ಕೆ ಭೇಟಿ ಕೊಟ್ಟು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆಯುತ್ತಿದ್ದರು. ಇಲ್ಲಿನ ನಾದ ಮಂಟಪದಲ್ಲಿ ಹಲವು ಸಲ ಕಾರ್ಯಕ್ರಮ ನೀಡಿದ್ದಾರೆ. ವಿವಿಧ ಜಾತಿಯ ಗಿಳಿಗಳಿಗೆ ಆಶ್ರಯ ಒದಗಿಸಿರುವ ಶುಕವನಕ್ಕೂ ಭೇಟಿ ಕೊಟ್ಟಿದ್ದರು.

‘ಎಸ್‌‍ಪಿಬಿ ಅವರು ಆಶ್ರಮದ ನಾದ ಮಂಟಪದಲ್ಲಿ ಅನೇಕ ಸಲ ಕಾರ್ಯಕ್ರಮ ನೀಡಿದ್ದಾರೆ. ಅವರ ಸಿರಿಕಂಠದ ಹಾಡುಗಳು ಮೈಸೂರಿನ ಸಂಗೀತ ಪ್ರೇಮಿಗಳು, ಅವಧೂತ ದತ್ತ ಪೀಠದ ಭಕ್ತರ ಹೃದಯದಲ್ಲಿ ಅಜರಾಮರವಾಗಿದೆ’ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT