ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಕ್ಷೇತ್ರಕ್ಕೆ ತರಾಸು ಕೊಡುಗೆ ದೊಡ್ಡದು: ಎಸ್‌.ಕೆ.ಭಗವಾನ್‌

ಕಾದಂಬರಿಯ ಕಥೆಗಳಿಂದ ಚಲನಚಿತ್ರಕ್ಕೆ ಭದ್ರಬುನಾದಿ: ಸಿನಿಮಾ ನಿರ್ದೇಶಕ ಎಸ್‌.ಕೆ.ಭಗವಾನ್‌
Last Updated 30 ನವೆಂಬರ್ 2020, 1:27 IST
ಅಕ್ಷರ ಗಾತ್ರ

ಮೈಸೂರು: ಸಾಹಿತ್ಯದೊಂದಿಗೆ ಚಲನಚಿತ್ರ ಕ್ಷೇತ್ರಕ್ಕೂ ತರಾಸು ಅವರ ಕೊಡುಗೆ ದೊಡ್ಡದು. ಅವರ ಕಾದಂಬರಿಯಲ್ಲಿ ಬರುವ ಕಥೆಗಳು ಚಲನಚಿತ್ರಕ್ಕೆ ಭದ್ರಬುನಾದಿ ಹಾಕಿಕೊಡುತ್ತಿದ್ದವು ಎಂದು ಚಲನಚಿತ್ರ ನಿರ್ದೇಶಕ ಎಸ್‌.ಕೆ.ಭಗವಾನ್‌ ಹೇಳಿದರು.

ತರಾಸು ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ತರಾಸು ಜನ್ಮಶತಮಾನೋತ್ಸವ ಸಮಾರಂಭದ ವಿಚಾರ ಗೋಷ್ಠಿಯಲ್ಲಿ ‘ಪತ್ರಕರ್ತರಾಗಿ– ಕಾದಂಬರಿಕಾರರಾಗಿ ತರಾಸು ಮತ್ತು ಚಿತ್ರರಂಗಕ್ಕೆ ಅವರ ಕೊಡುಗೆ’ ಎಂಬ ವಿಷಯದಲ್ಲಿ ಮಾತನಾಡಿದರು.‌‌

ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ನಿರೂಪಣೆಯಲ್ಲಿ ಅರ್ಧ ಜೀವ ಇರುತಿತ್ತು. ಇನ್ನರ್ಧ ಜೀವ ತುಂಬುವುದು ಮಾತ್ರ ನಿರ್ದೇಶಕರ ಕೆಲಸವಾಗಿತ್ತು. ಅವರ ಕಥೆಯನ್ನು ಹೆಚ್ಚು ಬದಲಾಯಿಸುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ತಿಳಿಸಿದರು.

‘ಕನ್ನಡದಲ್ಲಿ ಬಂದಿರುವಷ್ಟು ಕಾದಂಬರಿ ಆಧಾರಿತ ಚಲನಚಿತ್ರಗಳು ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲ. ತರಾಸು ಅವರ ಐದು ಕಾದಂಬರಿಗಳನ್ನು ಆಧರಿಸಿ ನಾನು ಚಲನಚಿತ್ರ ನಿರ್ದೇಶಿಸಿದ್ದೇನೆ’ ಎಂದು ಹೇಳಿದರು.‌

‘ಹಂಸಗೀತೆ, ನಾಗರಹಾವು, ಮಸಣದ ಹೂವು, ಚಂದನದ ಗೊಂಬೆ ಸೇರಿ ಹಲವು ಚಿತ್ರಗಳು ಅವರ ಕಾದಂಬರಿಗಳನ್ನು ಆಧರಿಸಿವೆ. ‘ಚಂದವಳ್ಳಿಯ ತೋಟ’ ಎಲ್ಲರ ಹೃದಯ ಗೆದ್ದಿತ್ತು. ಅದಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ.‌‌ ಕಾದಂಬರಿ ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿದ್ದರಿಂದ ಅನಕ್ಷರಸ್ಥರಿಗೂ ನನ್ನ ಕಾದಂಬರಿಯ ವಿಷಯ ತಿಳಿಯುವಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದರು’ ಎಂಬುದನ್ನು ನೆನಪಿಸಿಕೊಂಡರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ತರಾಸು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ವಿಶ್ವಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿದ್ದ ಅವರು 1950 ರಲ್ಲಿ ನವೋದಯ ಪತ್ರಿಕೆಯನ್ನು ಸೇರಿದ್ದರು. ‍ಪತ್ರಿಕೋದ್ಯಮದ ಬವಣೆಯನ್ನು ನಿರೂಪಿಸಲು ‘ಮುಂಜಾವಿನಿಂದ ಮುಂಜಾವು‌’ ಎಂಬ ಕಾದಂಬರಿ ಬರೆದಿದ್ದಾರೆ. ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿರುವವರು ಈ ಕಾದಂಬರಿ ಓದಬೇಕು ಎಂದು ಸಲಹೆ ನೀಡಿದರು.

ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದಕ್ಕಿಂತ ಮುಂಚೆ ಅದು ಪ್ರಕಟವಾದ ಬಳಿಕ ಏನೆಲ್ಲಾ ಪರಿಣಾಮಗಳು ಆಗಬಹುದು ಎಂಬ ಕಲ್ಪನೆ ಲೇಖಕನಿಗೆ ಇರಬೇಕು. ದುಃಖವನ್ನು ತಿಳಿದುಕೊಳ್ಳುವ ಹೃದಯ ಪತ್ರಕರ್ತನಿಗೆ ಬೇಕು. ಆದರೆ ಆ ಹೃದಯಕ್ಕೆ ಒಂದು ದುಃಖವನ್ನು ಪರಿಹಾರ ಮಾಡುವ ಉಪಾಯ ಕೂಡಾ ಗೊತ್ತಿರಬೇಕು. ನಮ್ಮ ಎದುರಿಗೆ ಬರುವ ವಿಷಯವನ್ನು ನಾವು ನೋಡುವ ರೀತಿ ಕೂಡ ಮುಖ್ಯ ಎಂಬುದನ್ನು ತರಾಸು ತಮ್ಮ ಕಾದಂಬರಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು.

ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿ.ವಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ, ಸಮಿತಿಯ ಪ್ರಧಾನ ಸಂಚಾಲಕ ಎಸ್.ಪ್ರಕಾಶ್‌ ಬಾಬು, ರಾಜಶೇಖರ ಕದಂಬ ಪಾಲ್ಗೊಂಡಿದ್ದರು.

‘ಪ್ರಗತಿಶೀಲರ ಪಟ್ಟಿಗೆ ಸೇರ್ಪಡೆ ಅನ್ಯಾಯ’

‘ತರಾಸು ಅವರನ್ನು ಪ್ರಗತಿಶೀಲರ ಪಟ್ಟಿಯಲ್ಲಿ ಸೇರಿಸಿ ಅನ್ಯಾಯ ಮಾಡಿದ್ದೇವೆ. ಅನೇಕ ಪ್ರಗತಿಶೀಲ ಬರಹಗಾರರಲ್ಲಿ ಇದ್ದ ಲಕ್ಷಣ ತರಾಸು ಅವರಲ್ಲಿ ಇಲ್ಲ’ ಎಂದು ಭಾರತೀಯ ವಿದ್ಯಾಭವನ, ಮಾಧ್ಯಮ ಭಾರತಿ ನಿರ್ದೇಶಕ ಎನ್‌.ಎಸ್‌.ಶ್ರೀಧರಮೂರ್ತಿ ಹೇಳಿದರು.

ತರಾಸು ಅವರ ಒಟ್ಟು ಚಾರಿತ್ರಿಕ ಕಾದಂಬರಿಗಳ ಬಗ್ಗೆ ಮಾತನಾಡುವಾಗ ಅದರ ತಾತ್ವಿಕ ಮತ್ತು ಸಾಮಾಜಿಕ ನೆಲೆಯನ್ನು ಕನ್ನಡ ವಿಮರ್ಶಾ ಪ್ರಪಂಚ ಸಂಪೂರ್ಣವಾಗಿ ಮರೆತುಬಿಟ್ಟಿದೆ. ಅವರ ಚಾರಿತ್ರಿಕ ಕಾದಂಬರಿಗಳಲ್ಲಿ ಬರುವ ಸಾಮಾಜಿಕ ಮತ್ತು ತಾತ್ವಿಕ ನೆಲೆಯು ಕನ್ನಡದ ಬೇರೆ ಯಾವ ಚಾರಿತ್ರಿಕ ಕಾದಂಬರಿಯಲ್ಲೂ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT