ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿನ ಮೇಲೆ ಒತ್ತಡ ಸಲ್ಲ; ಸೂಕ್ತ ಆರೈಕೆ ಅಗತ್ಯ

ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೆ.ಆರ್‌.ಆಸ್ಪತ್ರೆಯ ನೇತ್ರತಜ್ಞ ಡಾ.ಎಂ.ಕೆ.ಚೇತನ್‌ಕುಮಾರ್‌ ಸಲಹೆ
Last Updated 27 ಸೆಪ್ಟೆಂಬರ್ 2020, 2:08 IST
ಅಕ್ಷರ ಗಾತ್ರ

ಮೈಸೂರು: ತುಂಬಾ ಹೊತ್ತು ಮೊಬೈಲ್‌ ಪರದೆಯನ್ನು ದಿಟ್ಟಿಸಿ ನೋಡಬೇಡಿ. 20 ನಿಮಿಷಗಳಿಗೊಮ್ಮೆ ಕಣ್ಣುಗಳಿಗೆ ಅಲ್ಪ ವಿಶ್ರಾಂತಿ ನೀಡಿ. ಆಗಿಂದಾಗ್ಗೆ ಕಣ್ಣನ್ನು ಮುಚ್ಚುವುದು– ತೆರೆಯುವುದು ಮಾಡುತ್ತಿರಿ. ಕಣ್ಣುಗಳು ಒಣಗದಂತೆ ಎಚ್ಚರವಹಿಸಿ...

ಮೊಬೈಲ್‌ನಲ್ಲಿ ಆನ್‌ಲೈನ್‌ ಪಾಠ ವೀಕ್ಷಣೆಯಿಂದ ಮಕ್ಕಳ ಕಣ್ಣಿಗೆ ತೊಂದರೆಯಾಗದಂತೆ ಎಚ್ಚರವಹಿಸುವ ಬಗ್ಗೆ ಕೆ.ಆರ್‌.ಆಸ್ಪತ್ರೆಯ ನೇತ್ರತಜ್ಞ, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ.ಕೆ.ಚೇತನ್‌ಕುಮಾರ್‌ ಅವರು ನೀಡಿದ ಸಲಹೆಗಳಿವು.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ಕೋವಿಡ್‌ ಕಾರಣ ಶಾಲೆಗಳು ಆರಂಭವಾಗಿಲ್ಲ. ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇದರಿಂದ ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳ ಕಣ್ಣಿನ ಆರೋಗ್ಯದ ಚಿಂತೆಯೇ ಕಾಡುತ್ತಿದೆ. ಹಲವು ಪೋಷಕರು, ಶಿಕ್ಷಕ– ಶಿಕ್ಷಕಿಯರು ಕರೆ ಮಾಡಿ ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡರು.

ಮೊಬೈಲ್‌, ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಪರದೆಯನ್ನು ಸತತವಾಗಿ ದಿಟ್ಟಿಸುವುದರಿಂದ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಕಣ್ಣಿನ ಆರೋಗ್ಯವನ್ನು ಚಿಕ್ಕವಯಸ್ಸಿನಿಂದಲೇ ಉತ್ತಮವಾಗಿ ಕಾಯ್ದುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಕೊಠಡಿಗೆ ಬೆಳಕು ಬೀಳುತ್ತಿರಲಿ: ಆನ್‌ಲೈನ್‌ ಪಾಠಕ್ಕೆ ಮಕ್ಕಳನ್ನು ಒಂದು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಬೇಕು. ಕೊಠಡಿ ವಿಶಾಲವಾಗಿರಲಿ, ಬೆಳಕು ಚೆನ್ನಾಗಿ ಬೀಳುತ್ತಿರಲಿ. ಕಿರಿದಾದ, ಕತ್ತಲೆಯ ಕೋಣೆಯಲ್ಲಿ ಕೂರಿಸುವುದು ಬೇಡ. ಮೊಬೈಲ್‌ ಪರದೆ ಚಿಕ್ಕದಾಗಿರುವ ಕಾರಣ, ಸಾಧ್ಯವಾದಷ್ಟು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಬಳಸಿರಿ. ಕಣ್ಣಿಗೆ ಸರಿಯಾಗಿ ಹೊಂದಿಕೊಳ್ಳುವ ರೀತಿಯಲ್ಲಿ ಮೊಬೈಲ್ ಸ್ಕ್ರೀನ್‌ನ ಪ್ರಕಾಶವನ್ನು ಹೊಂದಿಸಿಕೊಳ್ಳಿ ಎಂದರು.

ಮಕ್ಕಳ ಕಣ್ಣು ಒಣಗದ ಹಾಗೆ ನೋಡಿಕೊಳ್ಳಿ. ತಲೆಯ ನೇರಕ್ಕೆ ಜೋರಾಗಿ ಫ್ಯಾನ್‌ ಹಾಕುವುದರಿಂದ ಕಣ್ಣು ಒಣಗುತ್ತದೆ. ಕಿಟಕಿಗಳನ್ನು ತೆರೆದಿಡಿ. ಮಕ್ಕಳಿಗೆ ಆನ್‌ಲೈನ್‌ ಪಾಠ ಕೇಳಲು ಮಾತ್ರ ಮೊಬೈಲ್‌ ನೀಡಿ. ಆ ಬಳಿಕವೂ ಗೇಮ್ಸ್‌ ಅಥವಾ ವಿಡಿಯೊ ನೋಡಲು ಬಳಸಿದರೆ ಕಣ್ಣಿಗೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದರು.

ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಲು ಶಿಕ್ಷಕರು ಕೂಡ ತುಂಬ ಹೊತ್ತು ಮೊಬೈಲ್‌ ಬಳಸಬೇಕಾಗುತ್ತದೆ. ಆದ್ದರಿಂದ ಶಿಕ್ಷಕರೂ ಕಣ್ಣಿನ ಮೇಲೆ ಗಮನ ಇಡಬೇಕು ಎಂದು ಕಿವಿಮಾತು ಹೇಳಿದರು.

ಶಸ್ತ್ರಚಿಕಿತ್ಸೆ ಪ್ರಮಾಣದಲ್ಲಿ ಇಳಿಮುಖ: ಕೋವಿಡ್‌ ಆರಂಭವಾದ ಬಳಿಕ ಕಣ್ಣಿನ ಶಸ್ತ್ರಚಿಕಿತ್ಸೆಯ ಪ್ರಮಾಣ ಕಡಿಮೆಯಾಗಿದೆ. ಜನರು ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಿದ್ದಾರೆ. ಕೋವಿಡ್‌ಗಿಂತ ಮುನ್ನ ಕೆ.ಆರ್‌.ಆಸ್ಪತ್ರೆಯಲ್ಲಿ ಪ್ರತಿದಿನ 20–30 ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಈಗ 5–6 ಶಸ್ತ್ರಚಿಕಿತ್ಸೆಗಳು ಮಾತ್ರ ನಡೆಯುತ್ತಿವೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಆದ್ದರಿಂದ ಕೆಲವರು ಹಿಂಜರಿಯುವರು. 2–3 ತಿಂಗಳು ಕಳೆದ ಬಳಿಕ ಬರೋಣ ಎಂದು ವಾಪಸ್‌ ಹೋಗುತ್ತಾರೆ. ಆದರೆ, ಜಿಲ್ಲೆಯ ಇತರ ಕಡೆಗಳಲ್ಲಿ ಕಣ್ಣು ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸೆ ಎಂದಿನಂತೆ ನಡೆಯುತ್ತಿವೆ ಎಂದರು.

ನಾಟಿ ವೈದ್ಯರ ಬಳಿ ಹೋಗಬೇಡಿ: ಕಣ್ಣಿನ ಸಮಸ್ಯೆಗಳಿಗೆ ನಾಟಿ ವೈದ್ಯರ ಬಳಿಗೆ ಹೋಗಬೇಡಿ. ತಜ್ಞರ ಬಳಿಯೇ ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣು ಕೆಂಪಗಾಗುವುದಕ್ಕೆ ಹಲವು ಕಾರಣಗಳು ಇರಬಹುದು. ಸೂಕ್ತ ಪರೀಕ್ಷೆಯ ಬಳಿಕವೇ ಅದನ್ನು ಪತ್ತೆಹಚ್ಚಲು ಸಾಧ್ಯ. ಮೈಕ್ರೋಸ್ಕೋಪ್‌ ಮೂಲಕ ಪರೀಕ್ಷೆ ಮಾಡಿದರೆ ನಿಜವಾದ ಕಾರಣ ತಿಳಿಯಬಹುದು. ನಾಟಿ ವೈದ್ಯರಿಂದ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿಲ್ಲ ಎಂದರು.

ಮಧುಮೇಹಿಗಳು ಕಣ್ಣುಗಳ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ತಜ್ಞವೈದ್ಯರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ. ಮಧುಮೇಹ ಪ್ರಮಾಣ ಜಾಸ್ತಿ ಇದ್ದರೆ ಕಣ್ಣಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅಲ್ಲದೆ, ಮಧ್ಯವಯಸ್ಸಿಗೆ ಕಣ್ಣಿನ ಪೊರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆರಂಭದ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಂಡರೆ ಸಮಸ್ಯೆಯಿಂದ ಹೊರಬರಬಹುದು ಎಂದು ಸಲಹೆ ನೀಡಿದರು.

ಕಣ್ಣಿನ ಸ್ನಾನವೂ ಮುಖ್ಯ

ತಲೆ, ದೇಹಕ್ಕೆ ಸ್ನಾನ ಮಾಡಿದರಷ್ಟೆ ಸಾಲದು, ಕಣ್ಣಿನ ಸ್ನಾನ ಕೂಡ ಮುಖ್ಯ. ತಲೆಗೆ ಹಾಕಿರುವ ಶಾಂಪೂ, ಎಣ್ಣೆ ಅಥವಾ ತಲೆಹೊಟ್ಟು ಸ್ನಾನದ ವೇಳೆ ಕಣ್ಣಿನೊಳಗೆ ಸೇರಿಕೊಳ್ಳುತ್ತದೆ. ಇದರಿಂದ ಕಣ್ಣು ಕೆಂಪಾಗುತ್ತದೆ.

ಕೆಲವರಿಗೆ ಸ್ನಾನ ಮುಗಿಸಿ ಅರ್ಧ ಗಂಟೆಯ ವರೆಗೂ ಕಣ್ಣು ಉರಿ ಇರುತ್ತದೆ. ಕೆಲವು ರೀತಿಯ ಶಾಂಪೂಗಳು ಕಣ್ಣಿಗೆ ಕಿರಿಕಿರಿ ಉಂಟು ಮಾಡುತ್ತವೆ. ಆದ್ದರಿಂದ ಸ್ನಾನದ ಬಳಿಕ ಉಗುರು ಬೆಚ್ಚ ನೀರಿನಲ್ಲಿ ಕಣ್ಣುಗಳನ್ನು ಚೆನ್ನಾಗಿ ತೊಳೆಯಿರಿ.

ವಿಟಮಿನ್‌ ‘ಎ’ ಕೊರತೆಯಾಗದಿರಲಿ

ಕಣ್ಣಿನ ಆರೋಗ್ಯ ಕಾಪಾಡಲು ವಿಟಮಿನ್‌ ‘ಎ’ ಅಧಿಕವಿರುವ ಆಹಾರ ಸೇವಿಸಬೇಕು. ಕೆಂಪು ಮತ್ತು ಹಳದಿ ಬಣ್ಣದ ಹಣ್ಣುಗಳಲ್ಲಿ ವಿಟಮಿನ್‌ ‘ಎ’ ಹೇರಳವಾಗಿರುತ್ತದೆ. ಪಪ್ಪಾಯ, ಮಾವು ಅಲ್ಲದೆ ಕ್ಯಾರೆಟ್‌, ಗೆಣಸು, ಸಿಹಿ ಗೆಣಸು ತಿನ್ನುವುದು ಒಳ್ಳೆಯದು.

ಕೆಲವು ವಿಧದ ಮೀನುಗಳು, ಮೊಟ್ಟೆ, ಮಾಂಸ ಸೇವನೆಯೂ ಉತ್ತಮ. ವಿಟಮಿನ್‌ ‘ಎ’ ಜತೆಗೆ ಬೀಟಾ ಕ್ಯಾರೊಟಿನ್ ಅಂಶ ಇರುವ ಆಹಾರ ಸೇವನೆ ಕಣ್ಣಿನ ಆರೋಗ್ಯಕ್ಕೆ ಅಗತ್ಯ. ಅದಕ್ಕಾಗಿ ನಿತ್ಯದ ಅಹಾರದಲ್ಲಿ ಲೆಟ್ಯೂಸ್, ಬ್ರೊಕೋಲಿ, ನುಗ್ಗೆಸೊಪ್ಪು ಸೇವಿಸಬೇಕು ಎಂದು ಸಲಹೆ ನೀಡಿದರು.

‘20–20–20 ನಿಯಮ’ ಪಾಲಿಸಿ

ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ನಿರಂತರ ಕೆಲಸ ಮಾಡುವವರು 20–20–20 ನಿಯಮ ಅನುಸರಿಸಬೇಕು. ಕಂಪ್ಯೂಟರ್‌ ಪರದೆಯನ್ನು ನಿರಂತರ 20 ನಿಮಿಷಕ್ಕಿಂತ ಹೆಚ್ಚು ನೋಡಬೇಡಿ. ಕಣ್ಣನ್ನು ಬೇರೆಡೆ ಹೊರಳಿಸಿ. ಸುಮಾರು 20 ಅಡಿಗಿಂತ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳವರೆಗೆ ನೋಡಿ. ಆ ಬಳಿಕ ಮತ್ತೆ ಕೆಲಸ ಮುಂದುವರಿಸಿ.

ಆನ್‌ಲೈನ್‌ ಪಾಠ ಕೇಳುವ ಮಕ್ಕಳು ಕೂಡ ಇದೇ ಸೂತ್ರ ಪಾಲಿಸಬೇಕು. ಪ್ರತಿ 20 ನಿಮಿಷಕ್ಕೆ ಕುಳಿತಲ್ಲಿಂದ ಎದ್ದುಹೋಗಿ ಹೊರಗೆ ದೃಷ್ಟಿ ಹಾಯಿಸಿ. ಆಗ ಕಣ್ಣುಗಳಿಗೆ ಅಗತ್ಯವಿರುವ ವಿಶ್ರಾಂತಿ ಸಿಗುತ್ತದೆ.

ಪ್ರಶ್ನೋತ್ತರ

l ಪದೇ ಪದೇ ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರ ನಿವಾರಣೆ ಹೇಗೆ? – ಜಯಂತಿ, ಬೆಟ್ಟದಪುರ, ರಂಗಸ್ವಾಮಿ ತಲಕಾಡು

ಒಂದು ಕಣ್ಣಿನಲ್ಲಿ ದೃಷ್ಟಿ ಚೆನ್ನಾಗಿದ್ದು, ಇನ್ನೊಂದರಲ್ಲಿ ಸಮಸ್ಯೆಯಿದ್ದರೆ ಈ ರೀತಿಯ ಸಮಸ್ಯೆ ಕಂಡುಬರುತ್ತದೆ. ಕಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗಲೂ ಈ ರೀತಿ ಆಗುತ್ತದೆ. ನಡು ನಡುವೆ ಕಣ್ಣಿನ ರೆಪ್ಪೆ ಮುಚ್ಚಿ, ತೆಗೆಯುವ ಕೆಲಸ ಮಾಡಬೇಕು. ಅಗತ್ಯಬಿದ್ದರೆ ತಜ್ಞ ವೈದ್ಯರನ್ನು ಭೇಟಿಯಾಗಿ.

l ಸಮೀಪ ದೃಷ್ಟಿದೋಷ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದೆಯೇ?

– ಮಧುಕುಮಾರ್‌, ಮಂಡ್ಯ

ವಂಶಪಾರಂಪರ್ಯವಾಗಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಭಯಪಡಬೇಕಿಲ್ಲ. ಸರ್ಜರಿ ಮೂಲಕ ಸರಿಪಡಿಸಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿಯೇ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುತ್ತದೆ.

l ಕಣ್ಣಿನ ಹುಬ್ಬಿನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ...

–ಮುರಳಿಕೃಷ್ಣ, ನಂಜನಗೂಡು

ಸಮೀಪ ದೃಷ್ಟಿ, ಗ್ಲಾಕೊಮಾ ಇದ್ದರೆ ಇಂತಹ ಸಮಸ್ಯೆ ಕಾಣಬಹುದು. ತೊಂದರೆ ಇದ್ದರೆ ಪರೀಕ್ಷಿಸಿಕೊಳ್ಳಿ. ಸರಿಪಡಿಸಲು ಸಾಧ್ಯವಿದೆ.

l ಆನ್‌ಲೈನ್‌ ಪಾಠ ಶುರುವಾದಾಗಿನಿಂದ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿದೆ...

–ಮಲ್ಲಿಗೆ, ಶಿಕ್ಷಕಿ, ಹುಣಸೂರು

ನಿರಂತರ ಕಂಪ್ಯೂಟರ್‌ ವೀಕ್ಷಣೆಯಿಂದ ಕಣ್ಣಿನಲ್ಲಿ ದೋಷ ಕಂಡುಬಂದಿರಬಹುದು. ಒಂದೇ ಕಡೆ ದೃಷ್ಟಿ ನೆಟ್ಟರೆ ಕಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ.

l ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಉರಿಯಾಗುತ್ತವೆ ಏಕೆ?

– ನಿತ್ಯಾನಂದ ಹಾಗೂ ಪ್ರಶಾಂತ್, ಬೆಟ್ಟದಪುರ

ಕಣ್ಣುಗಳನ್ನು ಮುಚ್ಚುವುದು–ತೆರೆಯುವುದು ಮಾಡದಿದ್ದರೆ ಕಣ್ಣಿನ ತೇವಾಂಶ ಕೊರತೆಯಿಂದ ಉರಿ ಉಂಟಾಗುವ, ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್‌ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

l ಕಣ್ಣು ಕೆಂಪಗಾಗುತ್ತದೆ. ಇದಕ್ಕೆ ಪರಿಹಾರವೇನು?

–ರಾಧಾ ಹಾಗೂ ಆನಂದ್‌, ತಿ.ನರಸೀಪುರ

l ದೀರ್ಘ ಪ್ರಯಾಣ, ಸ್ನಾನ ಆದ ಮೇಲೂ ಕಣ್ಣುಗಳು ಕೆಂಪಗಾಗುತ್ತವೆ. ಸ್ನಾನ ಆದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಮಧುಮೇಹ, ಅಲರ್ಜಿ ಇದ್ದರೂ ಈ ಸಮಸ್ಯೆ ಇರಬಹುದು. ಪರೀಕ್ಷೆ ಬಳಿಕ ಖಚಿತವಾಗಿ ಸಮಸ್ಯೆ ಬಗ್ಗೆ ತಿಳಿಸಬಹುದು.

l ಕಣ್ಣಿನಲ್ಲಿ ಸುಡುವ ಸಂವೇದನೆ ಆಗುತ್ತಿದೆ...

–ನಂದಿನಿ, ವಿದ್ಯಾರ್ಥಿನಿ, ಹುಣಸೂರು

ದೀರ್ಘಕಾಲ ಮೊಬೈಲ್‌, ಲ್ಯಾಪ್‌ಟಾಪ್‌ ನೋಡಬೇಡಿ. ನಡುವೆ ವಿರಾಮವಿರಲಿ. ಆಸ್ಪತ್ರೆಗೆ ಭೇಟಿ ಕೊಟ್ಟು ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಿ ಕಾರಣ ತಿಳಿಯಬಹುದು.‌

l ಕಣ್ಣಿನ ದೂರ ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿದೆ... –ಉಮೇಶ್‌, ತಿ.ನರಸೀಪುರ

ಕಣ್ಣಿನ ಮಸೂರದಲ್ಲಿ ಸಮಸ್ಯೆ ಇರುವ ಸಾಧ್ಯತೆಯಿದ್ದು, ಹೊಲಿಗೆರಹಿತ ಶಸ್ತ್ರಚಿಕಿತ್ಸೆ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

l ಅಂಗವಿಕಲ ಪ್ರಮಾಣಪತ್ರಕ್ಕೆ ಮಾನದಂಡ ಯಾವುದು?

– ಬೆಸಗರಹಳ್ಳಿ ಮಧುಕುಮಾರ್

ಶೇ 40ಕ್ಕಿಂತಲೂ ಹೆಚ್ಚು ಅಂಧರಾಗಿದ್ದರೆ ಅಂತಹವರಿಗೆ ಅಂಗವಿಕಲ ಪ್ರಮಾಣಪತ್ರ ನೀಡಲಾಗುವುದು. ಆದರೆ, ಒಂದು ಕಣ್ಣು ಸಂಪೂರ್ಣ ಕಾಣುತ್ತಿದ್ದು, ಇನ್ನೊಂದು ಕಣ್ಣು ಸಂಪೂರ್ಣ ಅಂಧತ್ವ ಇದ್ದರೆ ಅಂತಹವರಿಗೆ ಈ ಪ್ರಮಾಣಪತ್ರ ಸಿಗುವುದಿಲ್ಲ. ವಿವಿಧ ಪರೀಕ್ಷೆಗಳ ಮೂಲಕ ಅಂಧತ್ವದ ಪ್ರಮಾಣವನ್ನು ಗುರುತಿಸಿ ಪ್ರಮಾಣಪತ್ರ ನೀಡಲಾಗುವುದು.

l ದೃಷ್ಟಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. 3 ವರ್ಷಗಳ ಹಿಂದೆ ಪರೀಕ್ಷೆ ಮಾಡಿಸಿದ್ದೆ, ಮತ್ತೆ ಮಾಡಿಸಬೇಕೇ? – ಉಮೇಶ್, ತಿ.ನರಸೀಪುರ

ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣುಗಳ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ಪ್ರತಿ ಬಾರಿಯೂ ದೃಷ್ಟಿಯ ಪ್ರಮಾಣ ಬದಲಾಗುತ್ತಿರುತ್ತದೆ. ಕಣ್ಣಿನ ಮಸೂರದಲ್ಲಿ ಸಮಸ್ಯೆ ಆಗಿದ್ದರೆ ಹೊಲಿಗೆರಹಿತ ಶಸ್ತ್ರಚಿಕಿತ್ಸೆ ಮಾಡಬಹುದು.

l ಮೊಬೈಲ್‌ಗಳಲ್ಲಿ ಇರುವ ‘ಐ ಪ್ರೊಟೆಕ್ಷನ್ ಆಪ್ಶನ್’ನಿಂದ ಲಾಭ ಇದೆಯೇ?

– ಜಗದೀಶ್, ಕೆಬ್ಬೆಕೊಪ್ಪಲು

ಸ್ವಲ್ಪಮಟ್ಟಿನ ಲಾಭ ಆಗುತ್ತದೆ. ಕತ್ತಲಿನ ಕೋಣೆಯಲ್ಲಿದ್ದಾಗ ಬ್ರೈಟ್‌ನೆಸ್ (ಪ್ರಕಾಶಮಾನ) ಹೆಚ್ಚಿಗೆ ಮಾಡಿಕೊಳ್ಳಬೇಕು. ಹೆಚ್ಚು ಪ್ರಕಾಶಮಾನವಾದ ಬೆಳಕಿನಲ್ಲಿದ್ದಾಗ ಕಡಿಮೆ ಮಾಡಿಕೊಳ್ಳಬೇಕು.

ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ, ಮಕ್ಕಳಿಗೆ ಆನ್‌ಲೈನ್‌ ತರಗತಿಯಿಂದ ಕಣ್ಣಿನ ಮೇಲಾಗುವ ತೊಂದರೆಗಳ ನಿವಾರಣೆ ಹೇಗೆ ಎಂಬ ಬಗ್ಗೆ ಕಿಕ್ಕೇರಿಯ ಕವಿತಾ, ಹನಗೋಡಿನ ರವಿಚಂದ್ರ, ನಂಜನಗೂಡಿನ ನಿಶಾಂತ್‌, ಕೆ.ಆರ್‌.ನಗರದ ಶ್ವೇತಾ, ಹುಣಸೂರಿನ ದಾಕ್ಷಾಯಿಣಿ, ಕಮಲಾಕ್ಷಿ, ಬಿಎಸ್‌ಎಲ್‌ಎಲ್‌ ಲೇಔಟ್‌ನ ಸವಿತಾ ಮತ್ತು ದಿಲೀಪ್‌ ಅವರು ಪ್ರಶ್ನೆಗಳನ್ನು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT