ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾಡು ಪ.ಪಂ. ಆಸೆಗೆ ಎಳ್ಳುನೀರು; ನನಸಾಗದ ಗ್ರಾಮಸ್ಥರ ಬಹು ವರ್ಷಗಳ ಕನಸು

ನನಸಾಗದ ಗ್ರಾಮಸ್ಥರ ಬಹು ವರ್ಷಗಳ ಕನಸು
Last Updated 30 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ತಲಕಾಡು: ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಪ್ರಸಿದ್ಧ ದೇವಾಲಯ, ಪ್ರವಾಸಿತಾಣವಾಗಿರುವ ತಲಕಾಡು ಇನ್ನೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ.

2020ರಲ್ಲಿ ತಲಕಾಡು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರುವುದು ಎಂದು ಕನಸು ಕಾಣುತ್ತಿದ್ದ ಜನರ ಆಸೆಗೆ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆಗೆ ವಾರ್ಡ್ ಮೀಸಲಾತಿ ಪ್ರಕಟಣೆ ನಿರಾಸೆ ಉಂಟು ಮಾಡಿದೆ.

ಗ್ರಾಮ ಪಂಚಾಯಿತಿಯಲ್ಲಿ 25 ಜನ ಸದಸ್ಯರಿದ್ದು ದೊಡ್ಡ ಪಂಚಾಯಿತಿಯಾಗಿದೆ. ವಿಶ್ವಮಟ್ಟದ ಪ್ರವಾಸಿ ಸ್ಥಳವಾಗಿರುವ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿಸಲು 1999 ರಿಂದಲೂ ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಸ್ಥಳೀಯ ಪಟ್ಟಭದ್ರರ ಕಪಿಮುಷ್ಠಿಗೆ ಸಿಲುಕಿ ಶಾಪಗ್ರಸ್ತವಾಗಿದೆ.

ಕ್ರಿ. ಶ. 1868ರಲ್ಲಿ ತಲಕಾಡು ತಾಲ್ಲೂಕು ಕೇಂದ್ರವಾಗಿತ್ತು. ಸ್ವಾತಂತ್ರ್ಯದ ನಂತರ ತಲಕಾಡು ಟೌನ್ ಪಂಚಾಯಿತಿಯಾಗಿ, ಮಂಡಲ ಪಂಚಾಯಿತಿಯಾಗಿ ನಂತರ ಗ್ರಾಮ ಪಂಚಾಯಿತಿಯಾಗಿ ಹಿಂಬಡ್ತಿ ಪಡೆದಿದೆ.

‘ಪ್ರಸ್ತುತ ತಲಕಾಡಿನ ಜನಸಂಖ್ಯೆ 24,000 ಮೀರಿದ್ದು ಒಟ್ಟು ಮತದಾರರ ಸಂಖ್ಯೆ 10,650 ಇದೆ. ಸದ್ಯ ಗ್ರಾಮ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅನುದಾನದ ಕೊರತೆಯಿಂದಾಗಿ ಸಮರ್ಪಕವಾದ ನಿರ್ವಹಣೆ ಅಸಾಧ್ಯವಾಗಿದೆ’ ಎನ್ನುತ್ತಾರೆ ಪಿಡಿಒ ಧರಣೇಶ್.

‘ಕಳೆದ ವಿಧಾನಸಭೆ ಅಧಿವೇಶನದಲ್ಲಿ ತಲಕಾಡನ್ನು ಟೂರಿಸಂ ಹಬ್ ಮಾಡುವ ಮೂಲಕ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ವಿಧಾನಸಭೆಯ ಸಭೆಯಲ್ಲಿ ಚರ್ಚಾ ವಿಷಯವಾಗಿ ಮಂಡಿಸಿ ಸರ್ಕಾರದ ಗಮನಕ್ಕೆ ತರಲಾಯಿತು. ಆದರೂ ಪ್ರಯೋಜವಾಗಿಲ್ಲ’ ಎಂದರು ಶಾಸಕ ಅಶ್ವಿನ್ ಕುಮಾರ್.

‘ತಲಕಾಡಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ತುಂಬಾ ಅವಶ್ಯಕವಾಗಿದ್ದು ಪ್ರಸ್ತುತ ರಾಜಕೀಯ ಬೆಳವಣಿಗೆಯಿಂದ ಪಟ್ಟಣ ಪಂಚಾಯಿತಿ ಆಗುವ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT