ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಧರ್ಮ ಶಿಫಾರಸು ಹಿಂಪಡೆಯಿರಿ

ವಿಶ್ವ ವೀರಶೈವ ಲಿಂಗಾಯತ ಪದಾಧಿಕಾರಿಗಳಿಂದ ಐಜೂರು ವೃತ್ತದಲ್ಲಿ ಪ್ರತಿಭಟನೆ
Last Updated 29 ಮಾರ್ಚ್ 2018, 6:59 IST
ಅಕ್ಷರ ಗಾತ್ರ

ರಾಮನಗರ: ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ಐಜೂರು ವೃತ್ತದಲ್ಲಿ ಮಂಗಳವಾರ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ವೀರಶೈವ–ಲಿಂಗಾಯತ ಭೇದ ನಮಗಿಲ್ಲ. ಧರ್ಮ ಸ್ಥಾಪಕರು ಯಾರೆಂಬ ವಾದ–ವಿವಾದ ನಮಗೆ ಬೇಕಿಲ್ಲ. ಸಮಾಜ ಸಂಘಟನೆಯೇ ನಮ್ಮ ಗುರಿ. ಸಮಾಜ ಕಟ್ಟುವುದೇ ನಮ್ಮ ಕೆಲಸ ವಿನಹ ಒಡೆಯುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ವರ್ಷ ಇತಿಹಾಸ ಇರುವ ಸಮಾಜ ಒಡೆಯುವ ನಿರ್ಧಾರ ಸರಿಯಲ್ಲ. ಇದರಿಂದ ಒಟ್ಟಾಗಿ ಬಾಳುತ್ತಿರುವ ವೀರಶೈವ ಲಿಂಗಾಯತ ಸಮಾಜಕ್ಕೆ ನೋವಾಗಿದೆ. ರಾಜಕೀಯ ದುರುದ್ದೇಶಕ್ಕಾಗಿ ಲಿಂಗಾಯತ ಹಾಗೂ ವೀರಶೈವರ ನಡುವೆ ಭಿನ್ನಮತ ಸೃಷ್ಟಿ ಮಾಡುತ್ತಿದ್ದಾರೆಯೇ ಹೊರತು ಜನಾಂಗದ ಅಭಿವೃದ್ಧಿಗಲ್ಲ ಎಂದು ದೂರಿದರು.

ವೀರಶೈವ ಲಿಂಗಾಯತ ಸಮಾಜ ಒಂದೇ ಆಗಿದ್ದು, ಇತರೆ ಸಮಾಜಗಳಿಗಿಂತ ಬಲಿಷ್ಠವಾಗಿದೆ. ರಾಜಕೀಯ ದುರುದ್ದೇಶದಿಂದ ವೀರಶೈವ ಬೇರೆ, ಲಿಂಗಾಯತ ಸಮಾಜವೆ ಬೇರೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ವಿಕರ ಕಾಲದಿಂದಲೂ ಲಿಂಗಾಯತ ಹಾಗೂ ವೀರಶೈವ ಸಮಾಜ ಒಗ್ಗಟ್ಟಾಗಿದೆ. ಸಮಾಜದ ಧಾರ್ಮಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದ ಅವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸಮಗ್ರ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಸರ್ಕಾರ ಚುನಾವಣೆಯನ್ನು ಎದುರಿಗಿಟ್ಟುಕೊಂಡು ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯ  ಕಾಂಗ್ರೆಸ್‌ನ ಒಡೆದು ಆಳುವ ನೀತಿಯಾಗಿದೆ. ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ಶಿಫಾರಸು ತೆಗದುಕೊಂಡಿದ್ದು, ಈ  ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯ ರಾಜ್ಯ ಸಚಿವಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವನ್ನು ಹಲವು ವೀರಶೈವ ಧರ್ಮಗುರುಗಳು ತೀವ್ರವಾಗಿ ವಿರೋಧಿಸಿದ್ದಾರೆ. ಅಖಿಲ ಭಾರತೀಯ ವೀರಶೈವ ಮಹಾಸಭಾ ಇದನ್ನು ವಿರೋಧಿಸಿದೆ. ಮಹಾತ್ಮಾ ಬಸವೇಶ್ವರರ ಹೆಸರಿನಲ್ಲಿ ಧರ್ಮವನ್ನು ಒಡೆಯುವುದು ಯೋಗ್ಯವಲ್ಲ ಎಂದರು.

ಐಜೂರು ವೃತ್ತದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದವರೆಗೆ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ತೆರಳಿದರು. ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಶೇಖರ್, ಶಿವಕುಮಾರಸ್ವಾಮಿ, ನಟರಾಜು, ಎಂ.ಎಂ. ರಾಜಶೇಖರ್, ಶಿವಲಿಂಗಪ್ರಸಾದ್, ಶಂಕರ್, ಬಿ. ಲೋಹಿತ್, ರುದ್ರದೇವರು, ಎಸ್.ಆರ್. ನಾಗರಾಜು, ಮಂಜುನಾಥ್, ಬಸವರಾಜು, ಶೈಲಾಪ. ಶಿವಕುಮಾರಸ್ವಾಮಿ, ಶಿವಸ್ವಾಮಿ, ಚಂದ್ರಶೇಖರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT