ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರ್ಲೆಯಲ್ಲೂ ತಾಲ್ಲೂಕು ಕಚೇರಿ: ಸಾ.ರಾ.ಮಹೇಶ್‌

ಎರಡೂ ಊರಿನ ಅಭಿವೃದ್ಧಿಗೆ ಸಮಾನ ಆದ್ಯತೆ: ಗ್ರಾಮಸ್ಥರಿಗೆ ಭರವಸೆ ನೀಡಿದ ಶಾಸಕ
Last Updated 22 ಜುಲೈ 2021, 13:39 IST
ಅಕ್ಷರ ಗಾತ್ರ

ಮೈಸೂರು: ‘ಮಿರ್ಲೆ–ಸಾಲಿಗ್ರಾಮದ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುವೆ’ ಎಂದು ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಗುರುವಾರ ಇಲ್ಲಿ ತಿಳಿಸಿದರು.

ನಗರದಲ್ಲಿನ ತಮ್ಮ ಕಚೇರಿಯಲ್ಲಿ ಮಿರ್ಲೆ ಗ್ರಾಮಸ್ಥರ ನಿಯೋಗದೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಶಾಸಕರು, ಗ್ರಾಮಸ್ಥರ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

‘ಮಿರ್ಲೆ–ಸಾಲಿಗ್ರಾಮ ಹಿಂದಿನಿಂದಲೂ ಅವಳಿ ಗ್ರಾಮಗಳು. ಸಾಲಿಗ್ರಾಮ ತಾಲ್ಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿದೆ. ಇನ್ಮುಂದೆ ಮಿರ್ಲೆ ಜಿಲ್ಲಾ ಪಂಚಾಯಿತಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ. ಎರಡೂ ಊರಿನ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಶಾಸಕರು ಗ್ರಾಮಸ್ಥರ ನಿಯೋಗಕ್ಕೆ ಅಭಯ ನೀಡಿದರು.

ಗ್ರಾಮಸ್ಥರ ಜೊತೆ ಮಾತುಕತೆ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್‌, ‘ತಾಲ್ಲೂಕು ಕೇಂದ್ರವಾಗಿ ಸಾಲಿಗ್ರಾಮ ಘೋಷಿಸಲ್ಪಟ್ಟಿದ್ದರೂ; ಮಿರ್ಲೆಯಲ್ಲೂ ತಾಲ್ಲೂಕು ಕಚೇರಿ ಆರಂಭಿಸಲಾಗುವುದು’ ಎಂದು ಹೇಳಿದರು.

‘ತಾಲ್ಲೂಕಿಗೊಂದು ನೀಡುವ ಮಾದರಿ ಆಸ್ಪತ್ರೆ, ₹ 1 ಕೋಟಿ ವೆಚ್ಚದಲ್ಲಿ ಉಪ ನೋಂದಣಾಧಿಕಾರಿ ಕಚೇರಿ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳು ಹಾಗೂ ಡಿಪ್ಲೊಮಾ ಕಾಲೇಜೊಂದನ್ನು ಮಿರ್ಲೆ ಗ್ರಾಮದಲ್ಲಿ ಸ್ಥಾಪಿಸಲಾಗುವುದು. ಸಾಲಿಗ್ರಾಮದಲ್ಲಿ ಐಟಿಐ ಕಾಲೇಜು ನಿರ್ಮಿಸಲಾಗುವುದು’ ಎಂದು ಶಾಸಕರು ತಿಳಿಸಿದರು.

‘₹ 200 ಕೋಟಿ ವೆಚ್ಚದಲ್ಲಿ ಮಿರ್ಲೆ ಭಾಗದ ನಾಲೆಗಳ ಆಧುನೀಕರಣ ಕಾಮಗಾರಿ ನಡೆದಿದೆ. ಮಿರ್ಲೆ ಗ್ರಾಮಸ್ಥರು ಸೂಕ್ತ ಜಾಗ ಕೊಡುವ ಜೊತೆಗೆ, ತಮ್ಮೂರಿಗೆ ಯಾವ ಕಚೇರಿ ಬೇಕು ಎಂಬ ಬೇಡಿಕೆ ಸಲ್ಲಿಸಿದರೆ, ಆ ತಾಲ್ಲೂಕು ಕಚೇರಿಯನ್ನು ಸ್ಥಾಪಿಸಲು ಶ್ರಮಿಸುವೆ. ಸಾಲಿಗ್ರಾಮದ ಅಭಿವೃದ್ಧಿ ಜೊತೆಗೆ ಮಿರ್ಲೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಸಾ.ರಾ.ಮಹೇಶ್‌ ಹೇಳಿದರು.

ಜಿಟಿಡಿ ಸಾರಥ್ಯದಲ್ಲೇ ಚುನಾವಣೆ

‘ಜಿ.ಟಿ.ದೇವೇಗೌಡರು ನಮ್ಮ ನಾಯಕರು. ಇನ್ನೂ ಒಂದು ಮುಕ್ಕಾಲು ವರ್ಷ ಜೆಡಿಎಸ್‌ ಶಾಸಕರು. ಜಿಟಿಡಿ ನಾಯಕತ್ವದಲ್ಲೇ ಜಿಲ್ಲೆಯಲ್ಲಿ ಜಿಲ್ಲಾ–ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸುತ್ತೇವೆ. ಜಿಲ್ಲಾ ಪಂಚಾಯಿತಿಯಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತೇವೆ’ ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

‘ಜಿಲ್ಲಾ–ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಈಗಾಗಲೇ ಚಾಮುಂಡಿ ಗೆಸ್ಟ್‌ಹೌಸ್‌ನಲ್ಲಿ ಜಿ.ಟಿ.ದೇವೇಗೌಡರ ಜೊತೆ ಚರ್ಚಿಸಿರುವೆ. ಆ ಮಾತುಕತೆಯ ವಿವರವನ್ನೇ ನಿಮಗೆ ನೀಡಿರೋದು’ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಕ್ಷ ಸಂಘಟನೆಗಾಗಿ ರಾಜ್ಯ ಘಟಕದ ಅಧ್ಯಕ್ಷರು ಸೂಚಿಸಿದ್ದಾರೆ. ತಾಲ್ಲೂಕು ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿದ್ದೇವೆ. ಡಿಸೆಂಬರ್‌ಗೆ ಜಿಲ್ಲಾ–ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಬಹುದು. ಆ ವೇಳೆಗೆ ಸಂಘಟನೆಯ ಕೆಲಸ ಪೂರ್ಣಗೊಳಿಸಲಾಗುವುದು’ ಎಂದು ಮಹೇಶ್‌ ಮಾಹಿತಿ ನೀಡಿದರು.

ಮಿರ್ಲೆ ಅಭಿವೃದ್ಧಿಗೆ ಬದ್ಧ

ಪಂಚಾಯಿತಿ ಚುನಾವಣೆಗೆ ಸಿದ್ಧ

ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT