ಭಾನುವಾರ, ಸೆಪ್ಟೆಂಬರ್ 22, 2019
22 °C
ತಂದೆಗೆ ನೀಡಿದ್ದ ಸಾಲ ವಾಪಸ್ ಬಾರದೇ ಇದ್ದುದ್ದಕ್ಕೆ ಬೇಸರ

ಸಾಲಗಾರರಿಗೆ ಹೆದರಿ ಶಿಕ್ಷಕಿ ಆತ್ಮಹತ್ಯೆ

Published:
Updated:

ಮೈಸೂರು: ‘ಸಾಲ ಮಾಡಿ ನೀಡಿದ ಹಣವನ್ನು ತಂದೆ ಸೇರಿದಂತೆ ವಾಪಸ್ ಮಾಡದೇ ಎಲ್ಲರೂ ಮೋಸಗೊಳಿಸಿದ್ದಾರೆ. ನನ್ನ ಮೃತದೇಹವನ್ನು ಪೊಲೀಸರೇ ಅಂತ್ಯ ಸಂಸ್ಕಾರ ಮಾಡಬೇಕು’ ಎಂದು ಡೆತ್‌ನೋಟ್‌ ಬರೆದಿಟ್ಟ ಶಿಕ್ಷಕಿಯೊಬ್ಬರು ಇಲ್ಲಿನ ಲಷ್ಕರ್‌ಮೊಹಲ್ಲಾದ ಕೇಶವ ಅಯ್ಯಂಗಾರ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ತಮ್ಮ ಹೆಸರನ್ನು ಕೆ.ನಿರ್ಮಲಾ (50) ರಾಜಾಜಿನಗರದ ನಿವಾಸಿ ಎಂದು ಬರೆದುಕೊಂಡಿದ್ದಾರೆ. ಆದರೆ, ಪೊಲೀಸರು ಪರಿಶೀಲನೆ ನಡೆಸಿದಾಗ ಇವರು ರಾಜಾಜಿನಗರದಲ್ಲಿ ವಾಸವಾಗಿಲ್ಲ ಎಂದು ಗೊತ್ತಾಗಿದೆ. ಹೆಸರೂ ಖಚಿತಗೊಂಡಿಲ್ಲ.

‘ಅಪಾರ ಮೊತ್ತವನ್ನು ಸಾಲ ಮಾಡಿ ತಂದೆಗೆ ನೀಡಿದ್ದೆ. ಆದರೆ, ಸಾಲವನ್ನು ಅವರು ತೀರಿಸಿಲ್ಲ. ಇದರಿಂದ ಸಾಲ ಕೊಟ್ಟವರ ಉಪಟಳ ಹೆಚ್ಚಾಗಿದೆ. ನನ್ನ ಮುಖವನ್ನು ಯಾರಿಗೂ ತೋರಿಸದೇ ಪೊಲೀಸರೇ ಅಂತ್ಯ ಸಂಸ್ಕಾರ ನೆರವೇರಿಸಬೇಕು. ನನ್ನ ಮೃತದೇಹದ ಮುಖವನ್ನು ಸಂಬಂಧಿಕರಿಗೆ ತೋರಿಸಲು ಇಷ್ಟ ಇಲ್ಲ’ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ‌

ಇವರು ಸುಮಾರು 60 ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ವಸತಿಗೃಹದ ಮೂರನೇ ಅಂತಸ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಕೆಳಕ್ಕೆ ಇಳಿಸಲು ಹರಸಾಹಸಪಟ್ಟರು. ಆದರೆ, ಸುತ್ತ ಗುಂಪುಗಟ್ಟಿ ನೋಡುತ್ತಿದ್ದ ನೂರಾರು ಮಂದಿಯಲ್ಲಿ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.‌

ಚಾಣಾಕ್ಷತೆ ಮೆರೆದ ಪೊಲೀಸ್ ಸಿಬ್ಬಂದಿ:

ಬೆಳಿಗ್ಗೆ 8.15ಕ್ಕೆ ಮಹಿಳೆಯ ಶವ ದೊರಕಿತು. ನಂತರ, ಇವರ ವಿಳಾಸ ಪತ್ತೆ ಹಚ್ಚುವ ಸವಾಲಿನ ಕೆಲಸವನ್ನು ಲಷ್ಕರ್‌ ಇನ್‌ಸ್ಪೆಕ್ಟರ್ ಮುನಿಯಪ್ಪ, ಎಎಸ್‌ಐಗಳಾದ ದೊಡ್ಡಯ್ಯ, ಮಹದೇವಯ್ಯ ಹಾಗೂ ಸಿಬ್ಬಂದಿ ರಮೇಶ್ ಅವರು ವಹಿಸಿಕೊಂಡರು. ಸೋಮವಾರ ರಾತ್ರಿ ಡೆತ್‌ನೋಟ್‌ನ ಮೇಲೆ ಕೆಳಗೆ, ಹಿಂದಿನ ಪುಟದಲ್ಲಿ ಬಿಡಿಬಿಡಿಯಾಗಿ ಬರೆದಿದ್ದ ಸಂಖ್ಯೆಗಳನ್ನು ಒಟ್ಟಿಗೆ ಸೇರಿಸಿ ಡಯಲ್ ಮಾಡಿದಾಗ ಅದು ಮಹಿಳೆಯ ಪರಿಚಿತರೊಬ್ಬರನ್ನು ಸಂಪರ್ಕಿಸಿತು. ಸದ್ಯ, ಇವರು ಬೆಂಗಳೂರಿನವರು ಇವರಿಗೆ ಪತಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ತಡೆದಿದ್ದಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ‌

ಮೈಸೂರು: ಕಾರು ತಡೆದುದಕ್ಕೆ ಚಾಲಕ ಅಯಾಜ್‌ ಷರೀಫ್ ಎಂಬಾತ ಚಾಮುಂಡಿಬೆಟ್ಟದ ಭದ್ರತಾ ಸಿಬ್ಬಂದಿ ಮಹೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ದೂರು ಇಲ್ಲಿನ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ಅಯಾಜ್ ಷರೀಫ್ ಗೇಟಿಗೆ ಅಡ್ಡಲಾಗಿ ಕಾರು ನಿಲ್ಲಿಸಿದಾಗ ಮಹೇಶ್ ತೆರವುಗೊಳಿಸಲು ಸೂಚಿಸಿದ್ದಾರೆ. ಇದರಿಂದ ಕೆರಳಿದ ಅಯಾಜ್ ಷರೀಫ್ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Post Comments (+)