ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಬಿಸಿಲ ಝಳ ಹೆಚ್ಚಳ: ತತ್ತರಿಸಿದ ಮೈಸೂರಿಗರು

ಒಂದು ವಾರದಲ್ಲಿ 2 ಡಿಗ್ರಿಯಷ್ಟು ಹೆಚ್ಚಳ, 3 ದಿನಗಳಲ್ಲಿ ಇನ್ನಷ್ಟು ಹೆಚ್ಚುವ ತಾಪಮಾನ
Last Updated 30 ಮಾರ್ಚ್ 2021, 5:00 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಬಿಸಿಲಿನ ತಾಪದಿನೇ ದಿನೇ ಏರುತ್ತಿದೆ. ಒಂದು ವಾರದ ಹಿಂದೆ ಮಾರ್ಚ್ 21ರಂದು ಗರಿಷ್ಠತಾಪಮಾನ 34 ಡಿಗ್ರಿ ಇದ್ದಿದ್ದು, ಈಗ 36ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಸೋಮವಾರ ಗರಿಷ್ಠ ತಾಪಮಾನ 35.1 ಡಿಗ್ರಿ ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದರೆ, ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ಉಸ್ತುವಾರಿ ಕೇಂದ್ರವು ಜಿಲ್ಲೆಯ ಕೆಲವೆಡೆ 35ರಿಂದ 37 ಡಿಗ್ರಿಯಷ್ಟು ಗರಿಷ್ಠ ತಾಪಮಾನ ಏರಿಕೆಯಾಗಿದೆ ಎಂದಿದೆ. ಖಾಸಗಿ ಹವಾಮಾನ ಸಂಸ್ಥೆ ‘ಆಕ್ಯೂವೆದರ್’, ಮುಂದಿನ 2 ದಿನಗಳಲ್ಲಿ ತಾಪಮಾನವು 38 ಡಿಗ್ರಿಗೆ ತಲುಪಬಹುದು ಎಂದು ಮುನ್ಸೂಚನೆ ನೀಡಿದೆ.

ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಜನಸಾಮಾನ್ಯರು ಬಸವಳಿಯುವಂತಾಗಿದೆ. ಎಲ್ಲೆಲ್ಲೂ ಪ್ರಖರ ಬಿಸಿಲು ಇದ್ದು, ಮನೆಯಿಂದ ಹೊರಬರುವುದೇ ಕಷ್ಟಕರವಾಗಿ ಪರಿಣಮಿಸಿದೆ.‌

ಮತ್ತೊಂದೆಡೆ ಪಕ್ಷಿಗಳೂ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕೊಳಗಳು, ಕೆರೆಗಳಲ್ಲಿ ನೀರಿನ ಪ್ರಮಾಣ ತೀವ್ರತರವಾಗಿ ಕುಸಿತ ಕಂಡಿದೆ. ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ನೀರಡಿಕೆಯೂ ಹೆಚ್ಚಾಗಿ ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ಅಲ್ಲಲ್ಲಿ ನಿಂತಿರುವ ನೀರುಗಳನ್ನೇ ಆಶ್ರಯಿಸಬೇಕಾದ ಸ್ಥಿತಿ ಪ್ರಾಣಿ, ಪಕ್ಷಿಗಳಿಗೆ ಒದಗಿದೆ.

ದನಕರುಗಳಿಗೆ ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ರೈತರು ವಿಶೇಷ ಗಮನಹರಿಸಬೇಕು ಎಂದು ಇಲ್ಲಿನ ನಾಗನಹಳ್ಳಿಯಲ್ಲಿರುವ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.

ಕೊಟ್ಟಿಗೆಯ ಮೇಲೆ ಹುಲ್ಲಿನ ಹೊದಿಕೆ ಹಾಕಿ ಮಧ್ಯಾಹ್ನ 2ರಿಂದ 3 ಬಾರಿ ನೀರು ಹಾಕಬೇಕು. ಕೊಟ್ಟಿಗೆಯ ನೆಲ ಮತ್ತು ಗೋಡೆಗೂ ನೀರು ಹೊಡೆಯಬೇಕು. ಇದರಿಂದ ಕೊಟ್ಟಿಗೆ ಉಷ್ಣಾಂಶವು ತಕ್ಕಮಟ್ಟಿಗೆ ತಂಪಾಗಿ ಉಳಿಯಲಿದೆ ಎಂದು ಸಲಹೆ ನೀಡಿದ್ದಾರೆ.

ಮನೆ ಮೇಲೆ, ಮುಂದೆ ನೀರು ಇಡಿ: ಮನೆ ತಾರಸಿಯ ಮೇಲೆ ಹಾಗೂ ಅಂಗಳದಲ್ಲಿ ಒಂದು ಮಣ್ಣಿನ ಕುಡಿಕೆಗಳಲ್ಲಿ ನೀರನ್ನು ಇಡುವ ಮೂಲಕ ಪಕ್ಷಿಗಳಿಗೆ ನೆರವಾಗಿ ಎಂದು ಪರಿಸರವಾದಿಗಳು ಸಲಹೆ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಿಸರವಾದಿ, ಗುಬ್ಬಚ್ಚಿ ಸಂರಕ್ಷಕರು, ಪೀಪಲ್ಸ್ ಫಾರ್ ಎನಿಮಲ್ಸ್‌ನ ಹುಬ್ಬಳ್ಳಿಯ ಟ್ರಸ್ಟಿ ಹಾಗೂ ಮೈಸೂರು ವಿಭಾಗ ಸಲಹೆಗಾರರಾದ ಕೋಕಿಲಾ ರಮೇಶ್‌ ಜೈನ್‌, ‘ಈ ದಿನಗಳಲ್ಲಿ ನೀರನ್ನು ಇಡುವುದು ತುಂಬಾ ಅಗತ್ಯ. ಪ್ಲಾಸ್ಟಿಕ್‌ ವಸ್ತುಗಳಲ್ಲಿ ಯಾವುದೇ ಕಾರಣಕ್ಕೂ ನೀರು ಇಡಬಾರದು. ಇದು ಬಿಸಿಯಾಗಿ ಕುಡಿಯಲು ಯೋಗ್ಯವಾಗುವುದಿಲ್ಲ. ಹಾಗಾಗಿ, ಮಣ್ಣಿನ ಪಾತ್ರೆಗಳನ್ನೇ ಇದಕ್ಕೆ ಬಳಕೆ ಮಾಡಬೇಕು. ಒಂದು ವೇಳೆ ಮಣ್ಣಿನ ವಸ್ತುಗಳು ಸಿಗದೇ ಇದ್ದರೆ, ತೆಂಗಿನ ಚಿಪ್ಪುಗಳಲ್ಲಿಯೂ ನೀರನ್ನು ಇಡಬಹುದು. ಆದರೆ, ದಿನವೂ ನೀರನ್ನು ಬದಲಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಅವರು ಹೇಳುತ್ತಾರೆ.

3 ದಿನಗಳಲ್ಲಿ 2 ಡಿಗ್ರಿಯಷ್ಟು ತಾಪ‍ಮಾನದಲ್ಲಿ ಏರಿಕೆ: ಮುಂದಿನ 3 ದಿನಗಳಲ್ಲಿ 1ರಿಂದ 2 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನಿರ್ದೇಶಕ ಚನ್ನಬಸನಗೌಡ ಎಸ್.ಪಾಟೀಲ ‘‍ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಮೈಸೂರು ಭಾಗದಲ್ಲಿ ಮೋಡಗಳು ಇಲ್ಲ. ಬಿರು ಬಿಸಿಲಿನ ವಾತಾವರಣ ಏಪ್ರಿಲ್ 3ರವರೆಗೂ ಮುಂದುವರಿಯಲಿದೆ. ಈ ಅವಧಿಯಲ್ಲಿ ಕನಿಷ್ಠ 1ರಿಂದ 2 ಡಿಗ್ರಿಯಷ್ಟು ತಾಪಮಾನದಲ್ಲಿ ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT