ಬುಧವಾರ, ನವೆಂಬರ್ 20, 2019
25 °C

9 ವರ್ಷ ಬಳಿಕ ತೆರೆದ ದೇವಸ್ಥಾನ: ಅಸ್ಪೃಶ್ಯತೆ ಸೋಂಕಿನಲ್ಲಿ ನಲುಗಿದ್ದ ಬಿಳಿಗೆರೆ

Published:
Updated:
Prajavani

ಹುಣಸೂರು: ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ 9 ವರ್ಷದ ಹಿಂದೆ ಅಸ್ಪೃಶ್ಯತೆ ಸೋಂಕಿನಿಂದ ಬಾಗಿಲು ಮುಚ್ಚಿದ್ದ ಬಸವೇಶ್ವರ ದೇವಸ್ಥಾನ ನ. 18ರಂದು ತೆರೆಯಲು ಬುಧವಾರ ನಡೆದ ಶಾಂತಿ ಸಭೆಯಲ್ಲಿ ಸರ್ವ ಜನಾಂಗದವರು ಸಮ್ಮತಿಸಿದರು.

ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಕರೆದಿದ್ದ ಶಾಂತಿ ಸಭೆಯಲ್ಲಿ ಗ್ರಾಮದ ದಲಿತ ಮುಖಂಡರು ಮತ್ತು ಕುರುಬ ಸಮಾಜದ ಮುಖಂಡರು ಮುಕ್ತವಾಗಿ ಚರ್ಚಿಸಿದರು.

ಕುರುಬ ಸಮಾಜದ ಮುಖಂಡ ಶಿವಲಿಂಗೇಗೌಡ ಮಾತನಾಡಿ, 9 ವರ್ಷದ ಹಿಂದೆ ತಮ್ಮದಲ್ಲದ ತಪ್ಪಿಗೆ ಪ್ರವೇಶಿಸಿ ಜಾತಿ ಪಟ್ಟ ಕಟ್ಟಿ ದೇವಸ್ಥಾನಕ್ಕೆ ಬೀಗ ಹಾಕಿಸಿ ಗ್ರಾಮದಲ್ಲಿ ನೆಮ್ಮದಿಯ ಬದುಕು ಕಳೆದು ಹೋಯಿತು ಎಂದರು.

ವಾಡಿಕೆಯಂತೆ ಗ್ರಾಮದ ಸರ್ವ ಸಮಾಜದ ತೀರ್ಮಾನದಂತೆ ಉತ್ಸವ ನಡೆದಿದ್ದು, ದಲಿತ ಭಕ್ತರ ಹಣ್ಣು ಕಾಯಿ ದೇವರಿಗೆ ಒಪ್ಪಿಸುವ ಕೆಲಸ ಸವರ್ಣೀಯರ ಪೂಜೆ ನಂತರದಲ್ಲಿ ನಡೆದಿತ್ತು. ಆದರೆ, ಕೆಲವರ ಕುಮ್ಮಕ್ಕಿನಿಂದ ಗ್ರಾಮದಲ್ಲಿದ್ದ ಜಾತೀಯತೆ ವಿಷ ಬೀಜ ಬಿತ್ತಿ ಸಾಮರಸ್ಯ ಕದಡಿ, ಜಾತ್ರೆ, ದೇವರ ಪೂಜೆ ಸ್ಥಗಿತಗೊಂಡಿತ್ತು ಎಂದು ಸ್ವಾಮಿಗೌಡ ಹೇಳಿದರು.

ಗ್ರಾಮದ ದಲಿತ ಮುಖಂಡ ಸಣ್ಣಯ್ಯ ಮಾತನಾಡಿ, ‘ಗ್ರಾಮದಲ್ಲಿ ಒಂದೇ ಬೀದಿಯಲ್ಲಿ ದಲಿತರು ಮತ್ತು ಕುರುಬರು ವಾಸವಿದ್ದೇವೆ. ದೇವರ ಉತ್ಸವಕ್ಕೆ ಸಂಬಂಧಿಸಿದಂತೆ ಪೂಜೆಗೆ ಆದ್ಯತೆ ದಲಿತರಿಗೆ ನೀಡಲಿಲ್ಲ’ ಎಂದು ಪ್ರತಿಪಾದಿಸಿದರು. ತಹಶೀಲ್ದಾರ್ ಬಸವರಾಜ್ ಮಾತನಾಡಿ, 9 ವರ್ಷದಿಂದ ಈ ಗೊಂದಲದಿಂದಲೇ ಗ್ರಾಮದ ದೇವಸ್ಥಾನ ಬಾಗಿಲು ಹಚ್ಚಲಾಗಿದೆ. ಈ ಸಮಸ್ಯೆಗೆ ಅಂತ್ಯ ಹಾಡಲು ನಿಮ್ಮಗಳ ಸಹಕಾರ ಅಗತ್ಯವಿದೆ ಎಂದರು.

ತಹಶೀಲ್ದಾರ್ ಎರಡು ಸಲಹೆಯನ್ನು ಸಭೆಯಲ್ಲಿ ಮಂಡಿಸಿ, ಚರ್ಚಿಸಲು ಸೂಚಿಸಿದರು. ಸಭೆ ದೇವರ ಗುಡಿ ತೆರೆದು ಪೂಜೆ ಆರಂಭಿಸಲು ಸಮ್ಮತಿಸಿ, ಕಾರ್ತೀಕ ಸೋಮವಾರ ನ. 18ರಂದು ಅಧಿಕೃತವಾಗಿ ಚಾಲನೆ ನೀಡಲು ತೀರ್ಮಾನಿಸಿದರು.

ಉತ್ಸವ: ಗ್ರಾಮದ ಬಸವೇಶ್ವರ ದೇವಸ್ಥಾನ, ತಿಮ್ಮಪ್ಪನ ದೇವಸ್ಥಾನ ಮತ್ತು ಮಾಗಡಿ ಬಸಪ್ಪ ದೇವರ ಉತ್ಸವ ನಡೆಸುವ ಮುನ್ನ ಎರಡೂ ಸಮುದಾಯದವರು ಪ್ರತ್ಯೇಕ ಸಭೆ ನಡೆಸಿ ಒಮ್ಮತಕ್ಕೆ ಬಂದ ಬಳಿಕ ತಾಲ್ಲೂಕು ಆಡಳಿತ ಪೂಜಾ ಕೈಂಕರ್ಯ ನಡೆಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈಗ ಉತ್ಸವದ ಚರ್ಚೆ ಅನಗತ್ಯ ಎಂದು ತಹಶೀಲ್ದಾರ್ ಸಭೆಗೆ ಉತ್ತರಿಸಿದರು.

ಬಿಳಿಗೆರೆ ಶಾಂತಿ ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ್ ಮಲ್ಲಾಡಿ, ಶಿವಣ್ಣ, ಮತ್ತು ಕುರುಬ ಸಮಾಜದ ಪರವಾಗಿ ಬಿಳಿಗೆರೆ ಮಂಜು, ಸ್ವಾಮಿಗೌಡ ಮಾತನಾಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್, ಗ್ರಾಮಾಂತರ ಪಿಎಸ್‌ಐ ಶಿವಪ್ರಕಾಶ್‌, ಉಪ ತಹಶೀಲ್ದಾರ್ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಕುಮಾರ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)