ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳು ಸನ್ಮಾರ್ಗ ತೋರಲಿ

ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಯ
Last Updated 25 ಮೇ 2019, 19:49 IST
ಅಕ್ಷರ ಗಾತ್ರ

ಮೈಸೂರು: ಜನಸಾಮಾನ್ಯರಿಗೆ ದೇವಸ್ಥಾನಗಳು ಸನ್ಮಾರ್ಗವನ್ನು ತೋರಲಿ. ದಾರಿ ತಪ್ಪಿ ನೋವುಣ್ಣುತ್ತಿರುವವರಿಗೆ ಮಾರ್ಗದರ್ಶನ ನೀಡಲಿ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಕೃಷ್ಣಧಾಮವು ಹಮ್ಮಿಕೊಂಡಿರುವ ರಜತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದ್ರದಲ್ಲಿ ದಿಕ್ಕು ತಪ್ಪಿರುವ ಹಡಗುಗಳಿಗೆ ಕಿನಾರೆಯಲ್ಲಿರುವದೀಪಸ್ತಂಭ ದಾರಿ ತೋರುವ ಹಾಗೆ, ದೇವಸ್ಥಾನಗಳು ಭಕ್ತರಿಗೆ ಬದುಕಿನ ದಾರಿ ತೋರಬೇಕು. ಭಗವಂತ ಭಕ್ತನಿಂದ ನಿರೀಕ್ಷಿಸುವುದು ಕರ್ತವ್ಯ ಪ್ರಜ್ಞೆ ಹಾಗೂ ಭಕ್ತಿ ಮಾತ್ರ. ಇವನ್ನು ರೂಢಿಸಿಕೊಂಡರೆ ಜೀವನ ಸರಳವೂ ಸುಂದರವೂ ಆಗಿರುವುದು ಎಂದು ಅವರು ಅಭಿಪ್ರಾಯಪಟ್ಟರು.

‘ಜ್ಞಾನ ಹಾಗೂ ಭಕ್ತಿ ನಮ್ಮ ಎರಡು ಕಣ್ಣುಗಳಿದ್ದಂತೆ. ಆದರೆ, ವ್ಯಕ್ತಿಗೆ ವಯಸ್ಸಾದಂತೆ ಭಯ ಹೆಚ್ಚಳವಾಗುವುದು. ಆದರೆ, ಸಂಸ್ಥೆಗೆ ವಯಸ್ಸಾದಂತೆ ಧೈರ್ಯ ಹೆಚ್ಚುವುದು. ಭಯವನ್ನು ಗೆಲ್ಲಬೇಕಾದರೆ ಸ್ವಂತ ಯೋಜನೆ ಕಡಿಮೆಯಾಗಬೇಕು. ನಮಗಾಗಿ ಚಿಂತಿಸದೇ ಸಮಾಜದ ಒಳಿತಿಗೆ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರೂ ಅರ್ಜುನನಂತೆ ಕಾರ್ಯನಿರ್ವಹಿಸಿದರೆ ಸಮಾಜ ಶೋಭಿಸುವುದರಲ್ಲಿ ಸಂದೇಹವೇ ಬೇಡ’ ಎಂದು ಅವರು ವಿಶ್ಲೇಷಿಸಿದರು.

‘ವಿದ್ಯಾಕೇಂದ್ರಗಳಲ್ಲಿ ಜ್ಞಾನ ಹಾಗೂ ಅಧ್ಯಾತ್ಮವೆರಡನ್ನೂ ಸಮಾನವಾಗಿ ಬೋಧಿಸುವಂತಾಗಬೇಕು. ಅಧ್ಯಾತ್ಮ ಹಾಗೂ ಲೌಕಿಕ ವಿದ್ಯೆಗಳೆರಡನ್ನೂ ಸಮಾನವಾಗಿ ಹೇಳಿಕೊಟ್ಟಾಗ ಮಾತ್ರ ವಿದ್ಯಾರ್ಥಿಯು ಜೀವನದಲ್ಲಿ ಸಾಧನೆಯ ಮೆಟ್ಟಿಲನ್ನು ಏರಬಲ್ಲ. ಇದನ್ನು ವಿಶ್ವವಿದ್ಯಾಲಯಗಳು ಗಂಭೀರವಾಗಿ ಪರಿಗಣಿಸಲಿ’ ಎಂದು ಅವರು ಕಿವಿಮಾತು ಹೇಳಿದರು.

ಕಮಲ ಅರಳಲು ಬೇಕು ಬೆಳಕು: ‘ವಿದ್ಯುತ್‌ ದೀಪ ಬೆಳಕು ನೀಡುತ್ತದೆ. ಬತ್ತಿಯ ದೀಪವೂ ಬೆಳಕು ನೀಡುತ್ತದೆ. ಆದರೆ, ಸೂರ್ಯನ ಬೆಳಕು ತಾಗಿದರೆ ಮಾತ್ರ ತಾವರೆ ಅರಳುತ್ತದೆ. ಭಾರತದ ಕಮಲ ಅರಳುವಂಥ ಸೂರ್ಯನ ಬೆಳಕೇ ಬೇಕು’ ಎಂದು ಅವರು ವಿವರಿಸಿದರು.

ವ್ಯಾಸರಾಜಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಅಧ್ಯಾತ್ಮ, ದೈವ ಭಕ್ತಿ ಬೋಧನೆಯನ್ನು ಪ್ರತಿಗಾಮಿಯೆಂದು ಗುರುತಿಸುವ ಸ್ವಭಾವವಿದೆ. ಇದನ್ನು ಬದಲಿಸಿ ಪ್ರೀತಿ ಮೂಡಿಸುವ ಕೆಲಸವಾಗಲಿ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷರಾದ ಪಿ.ಜಯರಾಮ ಭಟ್ಟ, ಜಿ.ಎಲ್‌.ಅನಂತ ತಂತ್ರಿ, ಕಾರ್ಯದರ್ಶಿ ಎಚ್‌.ವಿ.ರಾಘವೇಂದ್ರ ಭಟ್‌, ಶ್ರೀಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಪಿ.ಎಸ್.ಚಂದ್ರಶೇಖರ್‌, ಕಾರ್ಯದರ್ಶಿ ಪಿ.ಜಿ.ಪ್ರವೀಣ, ಶ್ರೀನಿವಾಸ ಭಟ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT