ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ‌ದಂಪತಿಯ ‘ಪರ್ಮಕಲ್ಚರ್’ ಪಾಠ

ಪರ್ಮಕಲ್ಚರ್‌; ಮೌಲ್ಯವರ್ಧನೆಯ ಮಾತುಕತೆ ನಾಳೆ
Last Updated 8 ನವೆಂಬರ್ 2019, 17:45 IST
ಅಕ್ಷರ ಗಾತ್ರ

ಶಾಶ್ವತ ಕೃಷಿ (ಪರ್ಮಕಲ್ಚರ್) ತೋಟ ಕಟ್ಟುವಿಕೆ, ನೈಸರ್ಗಿಕ ವಸ್ತುಗಳ ಮೌಲ್ಯವರ್ಧನೆ ಈಚೆಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸದ್ದು ಮಾಡಿದೆ.

ಆಹಾರ–ಹಣ್ಣು–ಅರಣ್ಯ–ತೋಟಗಾರಿಕೆ ಕಲ್ಪನೆಯ ಈ ಶಾಶ್ವತ ಕೃಷಿ (ಪರ್ಮಕಲ್ಚರ್) ತೋಟ ಥಾಯ್ಲೆಂಡ್‌ನಲ್ಲಿ ಹೆಚ್ಚು ಪ್ರಸಿದ್ಧಿ. ಈ ಕೃಷಿಯಲ್ಲಿ ಯಶಸ್ಸಿನ ಜತೆ, ಕೀರ್ತಿಯನ್ನು ಗಳಿಸಿರುವ ಥಾಯ್ಲೆಂಡ್‌ ದಂಪತಿ ಮೈಕೆಲ್–ಯೋಕ್ ಮೈಸೂರಿಗೆ ಬಂದಿದ್ದು, ಭಾನುವಾರ ಸ್ಥಳೀಯ ಆಸಕ್ತ ಕೃಷಿಕರೊಟ್ಟಿಗೆ ತೋಟ ಕಟ್ಟುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಕೆಆರ್‌ಎಸ್‌ ರಸ್ತೆಯ ಬೆಳಗೊಳದ ಬೆಳವಳ ಪರಿಸರ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಮಾತುಕತೆ ನಡೆಯಲಿದೆ.

ಗಾಂಧಿ ತತ್ವಗಳಿಂದ ಪ್ರೇರಿತರಾದ ಅಮೆರಿಕ ಮೂಲದ ಮೈಕೆಲ್‌ ಥಾಯ್ಲೆಂಡ್‌ಗೆ ಬಂದು ಸಾವಯವ ಕೃಷಿ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಶಾಶ್ವತ ಕೃಷಿ (ಪರ್ಮಕಲ್ಚರ್) ತೋಟ ನಿರ್ಮಿಸಿದ್ದಾರೆ. ಪತ್ನಿ ಯೋಕ್ ಜತೆಗೆ ನೈಸರ್ಗಿಕ ಪದಾರ್ಥಗಳ ಮೌಲ್ಯವರ್ಧನೆ ಮಾಡುವ ‘ಯು ಸಬೈ ಗಾರ್ಡನ್’ ಸೃಷ್ಟಿಸಿದ್ದಾರೆ. ವಾತಾವರಣದ ಬದಲಾವಣೆಯೊಂದಿಗೆ ಕೃಷಿ ಮಾಡುವ ವಿಧಾನಗಳ ಮಾದರಿ ರೂಪಿಸಿದ್ದಾರೆ. ಸಾವಯವ ಬೆಳೆಗಾರರ ‘ಗ್ರೀನ್ ನೆಟ್‘ ಗುಂಪಿನ ಜೊತೆಗೂಡಿ ರೈತರ ಮಾರುಕಟ್ಟೆಗಳನ್ನು ಸ್ಥಾಪಿಸಿದ್ದಾರೆ.

ಈ ಮಾರುಕಟ್ಟೆಗಳು ಥಾಯ್ಲೆಂಡ್‌ನಲ್ಲಿ ಖ್ಯಾತಿ ಗಳಿಸಿದ್ದು, ಅಲ್ಲಿ ಮೈಕೆಲ್‌–ಯೋಕ್‌ ದಂಪತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದೀಗ ದಂಪತಿ ಭಾರತಕ್ಕೆ ಭೇಟಿ ನೀಡಿದ್ದು, ಪರ್ಮಕಲ್ಚರ್‌ ಹಾಗೂ ನೈಸರ್ಗಿಕ ಉತ್ಪನ್ನಗಳ ಮೌಲ್ಯವರ್ಧನೆಯ ಪಾಠ ಹೇಳಿಕೊಡಲು ಮೈಸೂರಿಗೆಬಂದಿದ್ದಾರೆ.

ಸಹಜ ಸಮೃದ್ಧ, ಬೆಳವಳ ಫೌಂಡೇಷನ್‌, ಹೊನ್ನೇರು ಬಳಗ ಈ ಮಾತುಕತೆ ಆಯೋಜಿಸಿದ್ದು, 100ಕ್ಕೂ ಹೆಚ್ಚು ಆಸಕ್ತರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಮಾತುಕತೆಯಲ್ಲಿ ಮೈಕೆಲ್‌ ಶಾಶ್ವತ ಕೃಷಿ (ಪರ್ಮಕಲ್ಚರ್) ತೋಟ ಕಟ್ಟುವ ಬಗೆಯನ್ನು ತಿಳಿಸಲಿದ್ದಾರೆ. ಮೌಲ್ಯವರ್ಧನೆಯ ಜಾಣ್ಮೆಯನ್ನು ಯೋಕ್ ಕಲಿಸಿಕೊಡಲಿದ್ದಾರೆ.

‘ಯೋಕ್‌ ಎಮ್ಮೆ ಹಾಲನ್ನು ಮೌಲ್ಯವರ್ಧನೆಗೊಳಿಸಿ ತಯಾರಿಸುವ ಸೋಪು ಥಾಯ್ಲೆಂಡ್‌ನ ರೈತ ಮಾರುಕಟ್ಟೆಯಲ್ಲಿ ತುಂಬಾ ಹೆಸರುವಾಸಿ. ತಮ್ಮ ಜಮೀನಿನಲ್ಲೇ ಬೆಳೆಯುವ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಖ್ಯಾತಿ ಗಳಿಸಿದ್ದಾರೆ. ಇವರು ತಯಾರಿಸುವ ಸೋಪು, ಶ್ಯಾಂಪು ಸೇರಿದಂತೆ ಇನ್ನಿತರೆ ವಸ್ತುಗಳಿಗೆ ಭಾರಿ ಬೇಡಿಕೆಯಿದೆ’ ಎನ್ನುತ್ತಾರೆ ಸಹಜ ಸಮೃದ್ಧದ ನಿರ್ದೇಶಕ
ಕೃಷ್ಣಪ್ರಸಾದ್.

ಈಗಾಗಲೇ ಶಾಶ್ವತ ಕೃಷಿಯ ಮಾದರಿಯನ್ನು ಅಳವಡಿಸಿಕೊಂಡಿರುವ ಬಂಡೀಪುರ ಕಾಡಿನ ‘ಓಪನ್ ಷೆಲ್’ ಫಾರಂನ ಮಾಳವಿಕ ಸೊಲಂಕಿ ಶಾಶ್ವತ ಕೃಷಿಯ ತಮ್ಮ ಅನುಭವವನ್ನು ಇದೇ ಮಾತುಕತೆಯಲ್ಲಿ ಹಂಚಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಮಾಹಿತಿಗೆ ಆಶಾ ಕುಮಾರಿ-9481438887 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT