ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ರಾಜ್ಯದ ಬಾಕಿ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ –ಸಿಎಂ ಬೊಮ್ಮಾಯಿ

Last Updated 20 ಜುಲೈ 2022, 6:38 IST
ಅಕ್ಷರ ಗಾತ್ರ

ಮೈಸೂರು: 'ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ವರಮಾನ ನಷ್ಟದ ಬಾಕಿ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಇತ್ತೀಚೆಗಷ್ಟೇ ₹8,800 ಕೋಟಿ ಬಿಡುಗಡೆಯಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಾಮುಂಡೇಶ್ವರಿ ವರ್ಧಂತಿ ಹಾಗೂ ಕಬಿನಿ- ಕೆಆರಸ್‌ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸಲು ನಗರಕ್ಕೆ ಬುಧವಾರ ಆಗಮಿಸಿದ್ದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

'ಜಿಎಸ್‌ಟಿ ಜಾರಿಗೊಳಿಸುವಾಗ ಐದು ವರ್ಷವಷ್ಟೇ ಪರಿಹಾರವನ್ನು ನೀಡಲಾಗುವುದೆಂದು ಕೇಂದ್ರ ಹೇಳಿತ್ತು. ಕೋವಿಡ್ ವೇಳೆ ತೆರಿಗೆ ಸಂಗ್ರಹ ನಿರೀಕ್ಷಿತವಾಗಿ ಆಗಿರಲಿಲ್ಲ. ಆದರೂ, ಕೇಂದ್ರವು ಪರಿಹಾರ ಹಣ ನೀಡಿದೆ' ಎಂದರು.

'ಜಿಎಸ್‌ಟಿ ಪರಿಹಾರ ನೀಡುವ ಅವಧಿಯನ್ನು ಇನ್ನೂ ಎರಡು ವರ್ಷಗಳಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಗಳು ಕೋರಿದ್ದವು. ಆದರೆ, ಕೇಂದ್ರವು ವಿಸ್ತರಣೆಗೆ ನಿರಾಕರಿಸಿದೆ. ರಾಜ್ಯದ ಪಾಲಿನ ಹಣ ಬರಲಿದ್ದು, ಯಾವುದೇ ತೊಂದರೆಯಿಲ್ಲ' ಎಂದು ತಿಳಿಸಿದರು.

'ಬಿಬಿಎಂಪಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್‌ಗೆ ಇದೇ 22ರಂದು ಮೀಸಲಾತಿ ವರದಿಯನ್ನು ನೀಡಲಾಗುವುದು. ಕೋರ್ಟ್ ನಿರ್ದೇಶನದ ಅನುಸಾರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಮೀಸಲಾತಿ ವರದಿ ಬಂದ ನಂತರವೇ ಮೇಯರ್ ಚುನಾವಣೆ ಪ್ರಕ್ರಿಯೆಯೂ ನಡೆಯಲಿದೆ' ಎಂದು ಮಾಹಿತಿ ನೀಡಿದರು.

ರಿಮೋಟ್ ಕಂಟ್ರೋಲ್ಸಿ.ಎಂ ಎಂಬ ಡಿ.ಕೆ.ಶಿವಕುಮಾರ್ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ಪಾಪ ಬಹಳ ವರ್ಷಗಳಿಂದ ಒದ್ದಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದಾರೆ. ಮೊದಲು ಅವರ ತಟ್ಟೆಯಲ್ಲಿ ಏನಿದೆ ಎಂಬುದನ್ನು ನೋಡಿಕೊಳ್ಳಲಿ' ಎಂದು ತಿರುಗೇಟು ನೀಡಿದರು.

'ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಹಲವು ಜಲಾಶಯಗಳು ತುಂಬಿವೆ. ರೈತರು ಉತ್ತಮ ಫಸಲು ತೆಗೆಯಲು ಅನುಕೂಲವಾಗಿದೆ. ಚಾಮುಂಡೇಶ್ವರಿ ವರ್ಧಂತಿಯಲ್ಲಿ ಭಾಗವಹಿಸುತ್ತಿದ್ದೇನೆ. ಕಾವೇರಿ, ಕಪಿಲೆಗೂ ಬಾಗಿನ ಅರ್ಪಿಸುತ್ತಿದ್ದೇನೆ' ಎಂದು ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರಾದ ಎಲ್.ನಾಗೇಂದ್ರ, ನಿರಂಜನ್ ಕುಮಾರ್, ಮೇಯರ್ ಸುನಂದಾ ಫಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT