ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ಭಿಕ್ಷೆಯಲ್ಲ; ರೈತರ ಹಕ್ಕು: ಯೋಗೇಂದ್ರ ಯಾದವ್

Last Updated 13 ಏಪ್ರಿಲ್ 2022, 3:12 IST
ಅಕ್ಷರ ಗಾತ್ರ

ಮೈಸೂರು: ‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ನಾವು ಭಿಕ್ಷೆ ಬೇಡುತ್ತಿಲ್ಲ. ಅದು ನಮ್ಮ ಹಕ್ಕು. ಅದಕ್ಕಾಗಿ ರೈತರು ಒಗ್ಗಟ್ಟಿನ ಹೋರಾಟ ನಡೆಸಬೇಕು. ಸರ್ಕಾರವನ್ನು ಎಚ್ಚರಿಸಿ ಎಂಎಸ್‌ಪಿಯನ್ನು ಕಾನೂನುಬದ್ಧ ಗೊಳಿಸಿಕೊಳ್ಳಬೇಕು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಯೋಗೇಂದ್ರ ಯಾದವ್ ಆಗ್ರಹಿಸಿದರು.

ರೈತರ ಬೆಳೆಗಳಿಗೆ ಬೆಲೆ ಖಾತರಿಗೊಳಿ ಸಲು ಒತ್ತಾಯಿಸಿ ಮಂಗಳವಾರ ರಾಜ್ಯ ರೈತ ಸಂಘ-ಸಂಯುಕ್ತ ಹೋರಾಟ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‌‘ಆರು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ 2016ರಲ್ಲಿ ಹೇಳಿದ್ದರು. ಎಲ್ಲಿ ಆದಾಯ ದ್ವಿಗುಣಗೊಂಡಿದೆ? ಬದ ಲಾಗಿ ಆದಾಯ ಕುಸಿತ ಕಂಡಿದೆ. ರೈತರ ಆದಾಯ, ಅಗತ್ಯ ವಸ್ತುಗಳ ದರ ಏರಿಕೆ, ನಿರುದ್ಯೋಗ, ಕಾರ್ಮಿಕರು ಹಾಗೂ ರೈತರ ಸಮಸ್ಯೆಗಳನ್ನು ಮರೆಮಾ ಚಲು ಹಿಜಾಬ್‌ನಂಥ ವಿಚಾರ ಕೈಗೆತ್ತಿಕೊಂ ಡಿದೆ’‌ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತ ನಾಡಿ, ‘ದೆಹಲಿ ಗಡಿಯಲ್ಲಿ ನಡೆದ ಹೋರಾಟದಲ್ಲಿ ರೈತರ ವಿರುದ್ಧ ದಾಖ ಲಿಸಿದ್ದ ಪ್ರಕರಣ ವಾಪಸ್ ಪಡೆದಿಲ್ಲ. ರೈತ, ದಲಿತ, ಕಾರ್ಮಿಕ, ಮಹಿಳೆಯರು, ವಿದ್ಯಾರ್ಥಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸಬೇಕು. ಸಮಾಜವಾದಿ, ಎಡ ಪಂಥೀಯರು ಹೋರಾಟಕ್ಕೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಸಾಮರಸ್ಯ ಮೂಡಬೇಕು’ ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರ ಗೋಡು, ‘ರೈತ ಚಳವಳಿದಾರರನ್ನು ಕೇಂದ್ರ ಸರ್ಕಾರ ಅನಾಗರಿಕವಾಗಿ, ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ‌ಜಮೀನು ಕಿತ್ತುಕೊಂಡು ರೈತರನ್ನು ಕೊಳೆಗೇರಿಯಲ್ಲಿ ಇರಿಸಲು ಹುನ್ನಾರ ನಡೆಸಿದೆ. ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಪ್ರಶ್ನೆಯನ್ನೇ ಮಾಡದಂಥ ಅಸಹಾಯಕ ಪರಿಸ್ಥಿತಿಗೆ ರೈತರನ್ನು ದೂಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಸರ್ಕಾರವೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಕೆ ಹಾಗೂ ವಿತರಣೆ ಮಾಡಬಹುದು. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ವಿಚಾರವಾಗಿ ಸರ್ಕಾರಕ್ಕೆ ವರದಿ ನೀಡಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೆಂಬಲ ಬೆಲೆಗೆ ಶಾಸನ ಸ್ವರೂಪ ನೀಡಬೇಕು’ ಎಂದು ಒತ್ತಾಯಿಸಿದರು.

‘ದೇಶದಲ್ಲಿ ಒಡೆದು ಹಾಳುವ ಮೂಲಕ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡಬಾ ರದು. ಎಷ್ಟೇ ಪ್ರತಿಭಟನೆ ಮಾಡಿದರೂ ಮತಪೆಟ್ಟಿಗೆಯಲ್ಲಿ ವಿರೋಧ ವ್ಯಕ್ತವಾಗದಿ ದ್ದರೆ ಪ್ರಯೋಜನವಿಲ್ಲ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬೈಯಾರೆಡ್ಡಿ ಮಾತನಾಡಿ, ‘ಕಾರ್ಖಾನೆಗಳ ಜಮೀನಿನಲ್ಲಿ ಮಾಲ್‌ಗಳು ತಲೆ ಎತ್ತುತ್ತಿವೆ. ಮುಂದೆ ಎಪಿಎಂಸಿಗಳಲ್ಲಿಯೇ ದೊಡ್ಡ ಮಾಲ್‌ಗಳು ನಿರ್ಮಿಸುವ ಸಾಧ್ಯತೆ ಇದೆ' ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ ಎಸ್‌.ಆರ್‌.ಹಿರೇಮಠ, ‘ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೆಹಲಿ ರೈತರ ಹೋರಾಟ ಪ್ರೇರಣೆ ಆಗಬೇಕು. ಸಮಗ್ರ ಪರಿವರ್ತನೆ ಆರಂಭ ವಾಗಬೇಕು. ರೈತರಿಗೆ ಘನತೆಯ ಜೀವನ ಕಟ್ಟಿ ಕೊಡಲು ಪ್ರಯತ್ನಿಸಬೇಕು. ಇದಕ್ಕೆ ‌ದೃಢ‌ ಸಂಕಲ್ಪ‌ ಮಾಡಬೇಕು’ ಎಂದರು.

ಲೇಖಕ ದೇವನೂರ ಮಹಾದೇವ, ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ಸಮಾಜವಾದಿ ಪ.ಮಲ್ಲೇಶ್‌, ಎಸ್‌ಡಿಪಿಐನ ಅಮ್ಜದ್‌ ಖಾನ್‌, ರೈತ ಮುಖಂಡರಾದ ಪ್ರಸನ್ನ ಎನ್‌.ಗೌಡ, ಆರ್‌.ಮಲ್ಲಿಗೆ, ದೇವಿ, ಹೊಸಕೋಟೆ ಬಸವರಾಜು, ಆಲಗೂಡು ಶಿವಕುಮಾರ್‌, ವಕೀಲ ಪುನೀತ್‌, ಮಹೇಶ್‌ ಪ್ರಭು ಪಾಲ್ಗೊಂಡಿದ್ದರು.

‘ಹೆಚ್ಚಿನ ಅನುದಾನಕ್ಕೆ ಮನವಿ’

‘ರಾಗಿಯನ್ನು ಈ ಬಾರಿ ಸಂಪೂರ್ಣವಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಅನುದಾನ ನೀಡುವಂತೆ ಕೋರಿದ್ದೇವೆ. ಈ ವಿಚಾರವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜೊತೆಯೂ ಮಾತನಾಡಿದ್ದೇನೆ. ಕೆಲವೇ ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಖಂಡಿತ ಮೋಸ ಮಾಡುವುದಿಲ್ಲ. ನಿಗದಿತ ದರದಲ್ಲೇ ಖರೀದಿ ಮಾಡಲಾಗುವುದು. ಸಣ್ಣ ಹಾಗೂ ಮಧ್ಯಮ ರೈತರು ಬೆಳೆದ 20 ಕ್ವಿಂಟಲ್‌ವರೆಗಿನ ರಾಗಿ ಹಾಗೂ 40 ಕ್ವಿಂಟಲ್‌ವರೆಗಿನ ಭತ್ತ ಖರೀದಿಸಲಾಗುತ್ತದೆ’ ಎಂದು ಸಂಸದ ಪ್ರತಾಪಸಿಂಹ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT