ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿಧ್ವನಿ

ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ; ಕ್ರಮಕ್ಕೆ ಆಗ್ರಹ
Last Updated 22 ಸೆಪ್ಟೆಂಬರ್ 2021, 5:07 IST
ಅಕ್ಷರ ಗಾತ್ರ

ಹುಣಸೂರು: ನಗರಸಭೆಯಲ್ಲಿ ಪ್ರಭಾರ ಅಧ್ಯಕ್ಷ ದೇವನಾಯಕ ನೇತೃತ್ವದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿಧ್ವನಿಸಿತು.

‘ವಾರ್ಡ್ 27ರಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ಪರಿಹರಿಸಿಲ್ಲ. ಜನರ ಕೆಂಗಣ್ಣಿಗೆ ನಾನು ಗುರಿಯಾಗುವಂತಾಗಿದೆ’ ಎಂದು ಸದಸ್ಯೆ ರಾಧಾ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಾರ್ಡ್ 21ರ ಸದಸ್ಯೆ ರಾಣಿ ಪೆರುಮಾಳ್, ‘ಪೌರಕಾರ್ಮಿಕರ ಕಾಲೊನಿಗೆ ಕಲುಷಿತ ನೀರು ಪೂರೈಸಲಾಗುತ್ತಿದೆ. ಕ್ರಮ ವಹಿಸುವಂತೆ ಎಂಜಿನಿಯರ್‌ಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ನಗರ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳುವ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ’ ಎಂದು ಹರಿಹಾಯ್ದರು.

22ನೇ ವಾರ್ಡ್‌ ಸದಸ್ಯ ಜಬಿವುಲ್ಲಾ ಖಾನ್ ಮಾತನಾಡಿ, ‘ರೆಹಮತ್ ಮೊಹಲ್ಲಾ ಬಡಾವಣೆಗೆ ಲಕ್ಷ್ಮಣತೀರ್ಥ ನದಿ ನೀರು ಪೂರೈಸಲಾಗುತ್ತಿದೆ. ಆದರೆ, ತ್ಯಾಜ್ಯ ನೀರು ನದಿ ಸೇರುತ್ತಿರುವುದರಿಂದ ಸ್ಥಳೀಯರಿಗೆ ಆತಂಕ ಸೃಷ್ಟಿಯಾಗಿದೆ. ಹೀಗಾಗಿ, ಕಾವೇರಿ ನೀರು ಪೂರೈಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ನಗರಸಭೆ ಎಇಇ ಮಂಜುನಾಥ್, ‘27ನೇವಾರ್ಡ್‌ಗೆ ಶುದ್ಧ ಕುಡಿಯುವ ನೀರು ಪೂರೈಸಲು 10 ಲಕ್ಷ ಲೀಟರ್‌ ಸಾರ್ಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ಕೆಯುಡಬ್ಲ್ಯುಎಸ್‌ಗೆ ₹1.06 ಕೋಟಿ ಪಾವತಿಸಿದ್ದೇವೆ. 21ನೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ಕ್ರಮವಹಿಸಿದ್ದು, ಟ್ಯಾಂಕ್, ಕೊಳವೆಬಾವಿ ಶುಚಿಗೊಳಿಸಲಾಗಿದೆ’ ಎಂದರು.

‘ವಾಣಿಜ್ಯ ಮಳಿಗೆ ಪರವಾನಗಿ ನವೀಕರಣ ಮತ್ತು ಕಂದಾಯದಲ್ಲಿ ಘನತ್ಯಾಜ್ಯ ಸೆಸ್‌ ವಿಧಿಸಲಾಗುತ್ತಿದ್ದು, ನಾಗರಿಕರಿಗೆ ಹೊರೆಯಾಗುತ್ತಿದೆ’ ಎಂದು ಸದಸ್ಯ ಮಾಲಿಕ್ ಪಾಷಾ ಗಮನ ಸೆಳೆದರು. ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ಅಧಿಕಾರಿ ರೂಪಾ ಉತ್ತರಿಸಿ, ‘ಸರ್ಕಾರದ ಸುತ್ತೋಲೆ ಪ್ರಕಾರ ತೆರಿಗೆ ಸಂಗ್ರಹಿಸಲಾಗಿದೆ. 2020–21ನೇ ಸಾಲಿಗೆ ₹4 ಲಕ್ಷ ತೆರಿಗೆ ಸಂಗ್ರಹ ಗುರಿ ನೀಡಿದ್ದು, ಕಂದಾಯದಿಂದ ₹2 ಲಕ್ಷ ಮತ್ತು ವಾಣಿಜ್ಯ ಮಳಿಗೆ ಪರವಾನಗಿ ನವೀಕರಣದಿಂದ ₹1 ಲಕ್ಷ ಸಂಗ್ರಹವಾಗಿದೆ’ ಎಂದು ವಿವರಿಸಿದರು.

ಗುರುಗಳಕಟ್ಟೆ ಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸಲು ಸಭೆ ತೀರ್ಮಾನಿಸಿತು.

ನಗರಸಭೆ ವ್ಯಾಪ್ತಿಗೆ ನ್ಯಾಯಾಧೀಶರ ಕಾಲೊನಿ ಸೇರಿಲ್ಲವಾದ್ದರಿಂದ ಬೀದಿದೀಪ ನಿರ್ವಹಣೆ ಅಸಾಧ್ಯ. ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ₹5 ಲಕ್ಷ ಮೀಸಲಿಡಲು ಸಭೆ ನಿರ್ಧರಿಸಿತು.

ಕಂದಾಯ ಹೆಚ್ಚಳ: ಸುಲಿಗೆ ಆರೋಪ

‘ನಗರಸಭೆಯು ಶೇ 30ರಷ್ಟು ಕಂದಾಯ ಹೆಚ್ಚಿಸಿ ನಾಗರಿಕರನ್ನು ಸುಲಿಗೆ ಮಾಡುತ್ತಿದೆ’ ಎಂದು ಹೂಡಾ ಅಧ್ಯಕ್ಷ ಗಣೇಶ್ ದೂರಿದರು.

ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ ನಂಜುಂಡಸ್ವಾಮಿ, ‘ಸರ್ಕಾರದ ಆದೇಶದಂತೆ 2004ರ ಅನ್ವಯ 3 ವರ್ಷಕ್ಕೊಮ್ಮೆ ಶೇ 30ರಷ್ಟು ಕಂದಾಯ ಹೆಚ್ಚಿಸಬೇಕಿದೆ. ಇತ್ತೀಚಿನ ಆದೇಶದಂತೆ ಪ್ರತಿವರ್ಷವೂ ಶೇ 10ರಷ್ಟು ಕಂದಾಯ ಹೆಚ್ಚಿಸಲು ಸೂಚಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT