ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳವು

ಬುಧವಾರ, ಏಪ್ರಿಲ್ 24, 2019
27 °C
₹11 ಲಕ್ಷ ನಗದು, 30 ವಾಚುಗಳನ್ನು ಕದ್ದೊಯ್ದ ಕಳ್ಳರು

ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳವು

Published:
Updated:

ಮೈಸೂರು: ಇಲ್ಲಿನ ವಿಜಯನಗರದ 4ನೇ ಹಂತದ ಮನೆಯೊಂದರ ಬಾಗಿಲು ಮೀಟಿದ ಕಳ್ಳರು ಮನೆಯಲ್ಲಿದ್ದ ₹ 1 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳು, ₹ 11 ಲಕ್ಷ ನಗದು ಮತ್ತು 30 ವಾಚುಗಳನ್ನು ಕಳವು ಮಾಡಿದ್ದಾರೆ.

ರಾಜೀವ್‌ ಎಂಬುವವರು ತಮ್ಮ ಮನೆಗೆ ಬೀಗ ಹಾಕಿ ವಿದೇಶದಿಂದ ಬರುತ್ತಿದ್ದ ತಮ್ಮ ತಂದೆಯನ್ನು ಕರೆತರಲು ಬೆಂಗಳೂರಿಗೆ ಮಂಗಳವಾರ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ವಾ‍ಪಸ್ ಗುರುವಾರ ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ.

ಮನೆಯ ಮುಖ್ಯದ್ವಾರ ಭದ್ರಪಡಿಸಿಕೊಂಡು ಅವರು ತೆರಳಿದ್ದರು. ಆದರೆ, ಅದರ ಪಕ್ಕ ಇದ್ದ ಸಣ್ಣ ಕಬ್ಬಿಣದ ದ್ವಾರವನ್ನು ಮೀಟಿ ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದಾಗ್ಯೂ ಅವುಗಳನ್ನು ಮಾಲೀಕರು ಆಫ್ ಮಾಡಿದ್ದರಿಂದ ಕಳ್ಳರ ಸುಳಿವು ಪತ್ತೆಯಾಗಿಲ್ಲ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಕಳ್ಳತನ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.

ಹೆಚ್ಚಿನ ಮೊತ್ತದ ಚಿನ್ನಾಭರಣಗಳು ಹಾಗೂ ನಗದನ್ನು ಬ್ಯಾಂಕಿನಲ್ಲಿರಿಸಿಕೊಳ್ಳಬೇಕು. ಒಂದು ವೇಳೆ ಮನೆಯಲ್ಲೇ ಇಡಬೇಕಾದ ಪರಿಸ್ಥಿತಿ ಬಂದರೆ ಸಾರ್ವಜನಿಕರು ಅದಕ್ಕೆ ಸೂಕ್ತ ಭದ್ರತಾ ಲಾಕರ್ ಮಾಡಿಸಬೇಕು. ಮನೆಯಿಂದ ಹೊರ ಹೋಗುತ್ತಿರುವ ಸುಳಿವನ್ನು ಬಿಡಬಾರದು. ಹ್ಯಾಂಗಿಂಗ್ ಲಾಕ್‌ ಅಥವಾ ಹೊರಗಿನಿಂದ ಚಿಲಕ ಹಾಕುವುದು, ದಿನಪತ್ರಿಕೆಗಳನ್ನು ಹಾಗೆಯೇ ಆವರಣದಲ್ಲಿ ಬಿಡುವುದು ಇತ್ಯಾದಿ ಕ್ರಮಗಳಿಂದ ಕಳ್ಳರಿಗೆ ಸುಲಭವಾಗಿ ಮನೆಯಲ್ಲಿ ಯಾರೂ ಇಲ್ಲ ಎಂಬುದು ತಿಳಿಯುತ್ತದೆ. ಹಾಗಾಗಿ, ಮನೆಗೆ ಬೀಗ ಹಾಕಿ ಹೊರಹೋಗುವವರು ಸೂಕ್ತ ಮುಂಜಾಗ್ರತೆ ವಹಿಸಬೇಕು ಮತ್ತು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !