ಕಳ್ಳರಿಗೆ ವರದಾನವಾದ ಪಾಲಿಕೆಯ ನಿರ್ಲಕ್ಷ್ಯ

ಮಂಗಳವಾರ, ಏಪ್ರಿಲ್ 23, 2019
31 °C
ಅಪಘಾತ, ಅಪರಾಧಕ್ಕೂ ಕಾರಣವಾದ ಬೀದಿ ದೀಪಗಳ ಕೊರತೆ

ಕಳ್ಳರಿಗೆ ವರದಾನವಾದ ಪಾಲಿಕೆಯ ನಿರ್ಲಕ್ಷ್ಯ

Published:
Updated:
Prajavani

ಮೈಸೂರು: ಬೀದಿ ದೀಪಗಳು ಉರಿಯದಿರುವುದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ನಗರದಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಬಹಳಷ್ಟು ದುಷ್ಕೃತ್ಯಗಳಿಗೆ ಬೀದಿ ದೀಪಗಳು ಉರಿಯದೇ ಇರುವುದು ಪ್ರಧಾನ ಕಾರಣ ಎನಿಸಿದೆ. ಕತ್ತಲೆಯ ರಾತ್ರಿಯು ಸರಗಳ್ಳರು ತಮ್ಮ ಕೆಲಸಗಳನ್ನು ಸಲೀಸಾಗಿ ಮಾಡುವಂತಾಗಿದೆ.

ದಿನದಿಂದ ದಿನಕ್ಕೆ ನಗರದಲ್ಲಿ ಸರಗಳ್ಳತನ ಹೆಚ್ಚುತ್ತಿದೆ. ನಡೆದಿರುವ ಸರಗಳ್ಳತನಗಳಲ್ಲಿ ಹೆಚ್ಚಿನವು ಬೀದಿದೀಪಗಳು ಕೆಟ್ಟಿರುವೆಡೆ ಅಥವಾ ಬೀದಿದೀಪಗಳೇ ಇಲ್ಲದಿರುವ ಕಡೆ ನಡೆದಿದೆ ಎಂದು ಪೊಲೀಸರು ಹೇಳುತ್ತಾರೆ. ಕತ್ತಲು ಆವರಿಸಿರುವುದು ಅಥವಾ ಸಮರ್ಪಕವಾದ ಬೆಳಕಿನ ಕೊರತೆ ಇರುವುದರಿಂದ ಅತ್ಯಂತ ನಾಜೂಕಾಗಿ ತಮ್ಮ ಕೆಲಸವನ್ನು ಸರಗಳ್ಳರು ಮುಗಿಸುತ್ತಿದ್ದಾರೆ.

ಬೀದಿ ದೀಪಗಳಿಲ್ಲದಿರುವ ಕಡೆ ಸರಗಳ್ಳರಿಗೆ ಹೆಲ್ಮೆಟ್‌ನ ಅಗತ್ಯವೇ ಬೀಳದು. ಕತ್ತಲಿನಲ್ಲಿ ಯಾರೂ ಅವರ ಚಹರೆಯನ್ನು ಸುಲಭವಾಗಿ ಗುರುತಿಸಲಾಗದು. ಜತೆಗೆ, ಸರ ಕಳೆದುಕೊಂಡವರಿಗೆ ಆಗುವ ಆಘಾತವನ್ನು ಕತ್ತಲೆಯು ಇಮ್ಮಡಿಗೊಳಿಸುತ್ತದೆ. ಒಂದು ವಿಧದ ಭಯ ಆವರಿಸುತ್ತದೆ. ಕತ್ತಲಲ್ಲಿ ಏನು ಮಾಡಬೇಕೆಂದು ತೋಚದೆ ಬಹಳಷ್ಟು ಸಲ ಮನಸ್ಸು ‘ಬ್ಲಾಂಕ್’ ಆಗುತ್ತದೆ. ಹೀಗಾಗಿ, ಕೂಗುವುದು, ಸರಗಳ್ಳರನ್ನು ಬೆನ್ನತ್ತುವುದು ಅಥವಾ ಅವರ ವಾಹನದ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವುದು ಯಾವುದೂ ಮಾಡಲಾಗದ ಸ್ಥಿತಿಯನ್ನು ತಲುಪುತ್ತಾರೆ. ಇವೆಲ್ಲವೂ ಸರಗಳ್ಳರಿಗೆ ‘ಪ್ಲಸ್’ ಪಾಯಿಂಟ್ ಎನಿಸಿದೆ.

ಫೆಬ್ರುವರಿ 6ರಂದು ಆರ್.ಎಸ್.ನಾಯ್ಡು ನಗರದ ದೋಬಿಘಾಟ್ ರಸ್ತೆಯಲ್ಲಿ ರಾತ್ರಿ 8.30ರ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೋಸ್ಟನ್‌ ಪಿಂಟೊ (74) ಎಂಬ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಅಪಹರಿಸಿದ್ದರು. ಇಲ್ಲಿ ಬೀದಿದೀಪಗಳು ಇರಲಿಲ್ಲ. ಕತ್ತಲೆ ಆವರಿಸಿತ್ತು. ಜನವರಿ 4ರಂದು ಸಂಜೆ ಇಲ್ಲಿನ ಹಂಚ್ಯಾ ಮತ್ತು ಸಾತಗಳ್ಳಿ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದ ಭಾರತೀ ಎಂಬುವವರಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ರಸ್ತೆಯಲ್ಲಿ ಬೀದಿದೀಪ ಇಲ್ಲದಿರುವುದರಿಂದಲೇ ಕಳ್ಳತನ ಸಂಭವಿಸಿದೆ ಎಂದು ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದರು.

ಅಪಘಾತಕ್ಕೂ ಕಾರಣ:

ಬೀದಿ ದೀಪಗಳು ಉರಿಯದೇ ಇರುವುದು ಕೇವಲ ಸರಗಳ್ಳತನಕ್ಕೆ ಮಾತ್ರ ಕಾರಣವಾಗಿಲ್ಲ, ಇದರ ಜತೆಗೆ ಪ್ರಾಣಕ್ಕೆ ಎರವಾಗಬಲ್ಲ ಅಪಘಾತಗಳಿಗೂ ಕಾರಣವಾಗಿದೆ. ರಿಂಗ್‌ ರಸ್ತೆಯಲ್ಲಿ ನಡೆಯುವ ಬಹಳಷ್ಟು ಅಪಘಾತಗಳಿಗೆ ಇದೇ ಪ್ರಮುಖ ಕಾರಣ ಎನಿಸಿದೆ. ಈ ಕುರಿತು ಪೊಲೀಸ್ ಇಲಾಖೆ ಸಾಕಷ್ಟು ಬಾರಿ ಪಾಲಿಕೆಗೆ ಪತ್ರ ಬರೆದು ಸಮರ್ಪಕವಾದ ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿದೆ. ಆದರೂ ದೀಪ ಅಳವಡಿಸಿಲ್ಲ. ಅಪಘಾತಗಳೂ ನಿಂತಿಲ್ಲ.

ಸಾಕಷ್ಟು ವಾಹನಗಳಿಗೆ ದೀಪಗಳು ಇರುವುದಿಲ್ಲ. ಇದ್ದರೂ ಹೆಡ್‌ಲೈಟಿನ ಪ್ರಖರ ಬೆಳಕಿಗೆ ಬರುತ್ತಿರುವ ವಾಹನ ಯಾವುದು ಎಂದು ತಿಳಿಯುವುದಿಲ್ಲ. ಇದು ಅಪಘಾತಕ್ಕೆ ಬಹುಮುಖ್ಯ ಕಾರಣ. ಸೈಕಲ್‌, ಪಾದಚಾರಿಗಳಂತೂ ಕಾಣುವುದೇ ಇಲ್ಲ. ಇದರಿಂದ ಎಲ್ಲೆಲ್ಲಿ ಕತ್ತಲು ಆವರಿಸಿದೆಯೊ ಅವೆಲ್ಲವೂ ಅಪಘಾತಗಳ ತಾಣವಾಗಿ ಬದಲಾಗಿವೆ.

ಹೊಂಚು ಹಾಕುವ ಕಳ್ಳರಿಗೂ ಲಾಭ

ಹೊಂಚು ಹಾಕುವ ಕಳ್ಳರಿಗೂ ಬೀದಿ ದೀಪಗಳ ಕೊರತೆ ಲಾಭ ತರಿಸಿದೆ. ಸಾಮಾನ್ಯವಾಗಿ ಕಳ್ಳರು ಒಮ್ಮಿಂದೊಮ್ಮೆಗೆ ಕಳ್ಳತನ ಮಾಡುವುದಿಲ್ಲ. ಸಾಕಷ್ಟು ಬಾರಿ ಹೊಂಚು ಹಾಕಿದ ನಂತರವಷ್ಟೇ ಕನ್ನ ಹಾಕಲು ಮುಂದಾಗುತ್ತಾರೆ. ಬಾಗಿಲು ಮುಚ್ಚಿರುವ ಮನೆಗೆ ಸಂಜೆ ಮೇಲೆ ಯಾರಾದರೂ ಬರಬಹುದು ಎಂದು ಒಬ್ಬರು ಅಥವಾ ಇಬ್ಬರು ಗಮನ ಹರಿಸುತ್ತಾರೆ. ಈ ವೇಳೆ ಇವರಿಗೆ ಕತ್ತಲು ಪ್ರದೇಶ ಸಹಾಯಕ್ಕೆ ಬರುತ್ತದೆ. ಕತ್ತಲಿರುವ ಕಡೆ ಕೂತು ಬೀದಿಯಲ್ಲಿ ಓಡಾಡುವವರನ್ನು ಗಮನಿಸುತ್ತಾರೆ, ತಾವು ನಿಗಾ ಇರಿಸಿದ ಮನೆಯ ಮೇಲೂ ಹದ್ದಿನ ಕಣ್ಣಿರಿಸುತ್ತಾರೆ. ಕತ್ತಲಿರುವುದರಿಂದ ಸಹಜವಾಗಿಯೇ ಸಾರ್ವಜನಿಕರ ಗಮನಕ್ಕೆ ಇದು ಬರುವುದಿಲ್ಲ. ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !