ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿದಾರರ ಸೋಗಿನಲ್ಲಿ ಕುರಿ ಕಳ್ಳರು!

ನರಸಿಂಹರಾಜಠಾಣೆಯ ಪೊಲೀಸರಿಂದ ಮೂವರು ಕಳ್ಳರ ಬಂಧನ
Last Updated 2 ಆಗಸ್ಟ್ 2019, 5:48 IST
ಅಕ್ಷರ ಗಾತ್ರ

ಮೈಸೂರು: ಖರೀದಿದಾರರಂತೆ ನಟಿಸಿ ರಾತ್ರೋರಾತ್ರಿ ಎಲ್ಲ ಕುರಿಗಳನ್ನು ಕಳವು ಮಾಡುವ ಕುರಿ ಕಳ್ಳರ ಬೃಹತ್ ಜಾಲವನ್ನು ನರಸಿಂಹರಾಜಠಾಣೆ ಪೊಲೀಸರು ಭೇದಿಸಿದ್ದಾರೆ.

ನಗರದ ಉಸ್ಮಾನಿಯಾ ಬ್ಲಾಕ್ ನಿವಾಸಿ ಇದಾಯತ್ ಉಲ್ಲಾ (33), ಕಳಸ್ತವಾಡಿ ಗ್ರಾಮದ ನಿವಾಸಿ ನಿಶ್ಚಿತ್ (28) ಹಾಗೂ ಕಳವು ಮಾಡಿದ ಕುರಿಗಳೆಂದು ತಿಳಿದರೂ ಇವುಗಳನ್ನು ಖರೀದಿಸುತ್ತಿದ್ದ ಉಸ್ಮಾನಿಯಾ ಬ್ಲಾಕ್ ನಿವಾಸಿ ಮಹಮ್ಮದ್ ಅವೇಜ್‌ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹ 1.60ಲಕ್ಷ ಮೌಲ್ಯದ 16 ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಿಗ್ಗೆ ಹೊತ್ತು ವ್ಯಾಪಾರಿಗಳಂತೆ ನಟಿಸುತ್ತ ಗ್ರಾಮಗಳಿಗೆ ಈ ತಂಡವು ಭೇಟಿ ನೀಡುತ್ತಿತ್ತು. ಒಂದೆರಡು ಕುರಿಗಳನ್ನು ಹಣ ನೀಡಿ ಖರೀದಿಸುತ್ತಿದ್ದರು. ಈ ವೇಳೆ ಕುರಿಯನ್ನು ಕಟ್ಟಿ ಹಾಕಿರುವ ಜಾಗವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದೆರಡು ದಿನಗಳು ಕಳೆದ ಬಳಿಕ ರಾತ್ರೋರಾತ್ರಿ ಒಂದು ಟೆಂಪೊ ತಂದು ಎಲ್ಲ ಕುರಿಗಳನ್ನು ಕಳವು ಮಾಡಿ ಹೋಗುವ ತಂತ್ರಗಾರಿಕೆ ಇವರದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಕ್ರೀದ್ ಹಬ್ಬ ಹತ್ತಿರದಲ್ಲಿರುವುದರಿಂದ ಕುರಿಗಳ ಬೆಲೆ ದುಪ್ಪಟ್ಟಾಗಿದೆ. ಈ ಅವಕಾಶವನ್ನೇ ಬಳಸಿಕೊಳ್ಳುತ್ತಿರುವ ಕಳ್ಳರು ಇದೀಗ ಕುರಿ ಕಳವಿಗೆ ಕೈ ಹಾಕಿದ್ದಾರೆ.

ಖರೀದಿದಾರರೂ ಬಂಧನ:ಕಳವು ಮಾಡಿದವರನ್ನಷ್ಟೇ ಅಲ್ಲ ಕಳವು ವಸ್ತು ಹಾಗೂ ಕುರಿಗಳನ್ನು ಖರೀದಿಸುವವರನ್ನೂ ಈ ಬಾರಿ ಪೊಲೀಸರು ಬಿಟ್ಟಿಲ್ಲ. ಕೊಳ್ಳೇಗಾಲ ತಾಲ್ಲೂಕಿನ ಮಂಗಲ ಗ್ರಾಮದಿಂದ ಇದಾಯತ್ ಉಲ್ಲಾ ಹಾಗೂ ನಿಶ್ಚಿತ್ ಅವರು ಕಳವು ಮಾಡಿ ತಂದಿದ್ದ ಕುರಿಗಳನ್ನು ಮಹಮ್ಮದ್ ಅವೇಜ್‌ ಖರೀದಿಸಿದ್ದ. ಈತನಿಗೆ ಮೊದಲೇ ಇವು ಕಳವಾದವುಗಳೆಂದು ಗೊತ್ತಿತ್ತು. ಹಾಗಾಗಿ, ಈತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರಸಿಂಹರಾಜ ಠಾಣೆಯ ಇನ್‌ಸ್ಪೆಕ್ಟರ್ ಬಿ.ಬಸವರಾಜು, ಸಬ್‌ಇನ್‌ಸ್ಪೆಕ್ಟರ್ ಆನಂದ್, ಸಿಬ್ಬಂದಿಯಾದ ರಮೇಶ್, ಮಂಜುನಾಥ್, ಕೃಷ್ಣ, ರಮೇಶ ಮತ್ತು ಮಹೇಶ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT