ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಿರ್ಮಾಣ ಹಂತದ ಕಟ್ಟಡದಲ್ಲೂ ಕಳವು!

ರಾತ್ರೋರಾತ್ರಿ ಬಾಗಿಲಿನ ಪಟ್ಟಿ, ಕಿಟಕಿಗಳು ನಾಪತ್ತೆ
Last Updated 11 ಫೆಬ್ರುವರಿ 2022, 9:04 IST
ಅಕ್ಷರ ಗಾತ್ರ

ಮೈಸೂರು: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನೂ ಬಿಡದ ಕಳ್ಳರು ಅಲ್ಲೂ ಕಳವು ಆರಂಭಿಸಿದ್ದಾರೆ.

ಮನೆಗಳ ಬಾಗಿಲಿಗೆ, ಕಿಟಕಿಗೆ ಅಳವಡಿಸಿರುವ ಪಟ್ಟಿಗಳು, ಬೆಲೆಬಾಳುವ ಬಾಗಿಲುಗಳು, ಕಿಟಕಿಗಳನ್ನೇ ಮೀಟಿ ತೆಗೆದುಕೊಂಡು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ.

ಆರ್‌.ಟಿ.ನಗರ, ಸೋಮನಾಥನಗರ, ಡಿ.ಸಾಲುಂಡಿ ಬಳಿಯ ಕೆಎಚ್‌ಬಿ ಬಡಾವಣೆ, ಜಯಪುರ ಹರಿಹರ ಬಡಾವಣೆ, ಜಿಎಸ್‌ಎಸ್‌ ಬಡಾವಣೆ, ಕೆಂಚಲಗೂಡು ಸಮೀಪದ ಟ್ರಯಾಂಗಲ್, ದೊಡ್ಡಹುಂಡಿಯ ವಿಶ್ವವಿದ್ಯಾನಿಲಯ ಬಡಾವಣೆ, ವಸಂತನಗರ, ಪೊಲೀಸ್‌ ಬಡಾವಣೆ, ಕೆಎಸ್‌ಆರ್‌ಟಿಸಿ ಬಡಾವಣೆ, ಮಾನಸಿ ನಗರ, ಎನ್‌ಕ್ಲೈವ್, ಮಹರ್ಷಿ ಬಡಾವಣೆ, ಐಪಿಎಸ್ ಶ್ರೀನಿವಾಸ ಬಡಾವಣೆ, ಗಿರಿದರ್ಶಿನಿ ಬಡಾವಣೆ ಸೇರಿದಂತೆ ಸುಮಾರು 500ಕ್ಕೂ ಅಧಿಕ ಬಡಾವಣೆಗಳು ಮೈಸೂರಿನ ಹೊರವಲಯದಲ್ಲಿದ್ದು, ‌ಅಲ್ಲಿ ಮನೆ ಕಟ್ಟುವವರು ಆತಂಕಕ್ಕೆ ಒಳಗಾಗಿದ್ದಾರೆ.

ತೇಗದಂತಹ ಬೆಲೆ ಬಾಳುವ ಮರಗಳ ಬಾಗಿಲು, ಪಟ್ಟಿಗಳು, ಕಿಟಕಿಗಳು ಕಳವಾದಾಗ ಮಾತ್ರ ಸಾರ್ವಜನಿಕರು ಪೊಲೀಸರಿಗೆ ದೂರು ನೀಡುತ್ತಾರೆ. ಇಲ್ಲದೇ ಹೋದರೆ ದೂರು ನೀಡುವುದಿಲ್ಲ. ಪರಿಣಾಮವಾಗಿ ಹೆಚ್ಚಿನ ಪ್ರಕರಣಗಳೂ ಬೆಳಕಿಗೆ ಬರುವುದಿಲ್ಲ.

ಬಾಗಿಲನ್ನು ಅಳವಡಿಸುವ ಮೊದಲಿಗೆ ಹಾಕುವ ಪಟ್ಟಿಯೇ ಕನಿಷ್ಠ ₹ 20 ಸಾವಿರದಿಂದ ₹ 1 ಲಕ್ಷವರೆಗೂ ಇದೆ. ಬಾಗಿಲಿನ ಮೌಲ್ಯ ಮತ್ತಷ್ಟು ಹೆಚ್ಚು. ಇದರಿಂದ ಸಾಲ ಮಾಡಿ ಮನೆ ಕಟ್ಟುವವರು ನಷ್ಟಕ್ಕೆ ಒಳಗಾಗಿದ್ದಾರೆ.

ವಸಂತನಗರದಲ್ಲಿ ನಡೆದಿರುವ ಕಳವು ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಗರದ ನಿವಾಸಿ ಪುಟ್ಟಸ್ವಾಮಿ, ‘ಇತ್ತೀಚೆಗೆ ಕಳ್ಳರು ನಗರದ ಹೊರವಲಯದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಪೊಲೀಸರೂ ಜಾಗೃತರಾಗಬೇಕು’ ಎಂದು ಒತ್ತಾಯಿಸಿದರು.

ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಲು ಒತ್ತಾಯ

‘ಲಕ್ಷಾಂತರ ಹಣ ವ್ಯಯಿಸಿ ಮನೆ ನಿರ್ಮಿಸುವವರು ದುಬಾರಿ ಬಾಗಿಲುಗಳನ್ನೇ ಅಳವಡಿಸುತ್ತಾರೆ. ಕನಿಷ್ಠ ಪಕ್ಷ ರಾತ್ರಿ ವೇಳೆ ಭದ್ರತಾ ಸಿಬ್ಬಂದಿಯೊಬ್ಬರನ್ನು ಮನೆ ಕಟ್ಟುವವರು ನೇಮಿಸಿಕೊಳ್ಳಲು ಸಾಧ್ಯವಿಲ್ಲವೇ?’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

‘ರೂಪಾನಗರದಲ್ಲಿ ಬಡಾವಣೆಯ ನಿವಾಸಿಗಳೆಲ್ಲ ಸೇರಿ ತಾವೇ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡರು. ಆ ಬಳಿಕ ಅಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಇಳಿಮುಖವಾಯಿತು. ಮಾತ್ರವಲ್ಲ, ಬಡಾವಣೆಯ ನಿವಾಸಿಗಳಲ್ಲೂ ಭದ್ರತಾ ಭಾವನೆ ಮೂಡಿತು. ಸಾರ್ವಜನಿಕರು ಇದೇ ಬಗೆಯಲ್ಲಿ ಪೊಲೀಸರ ಜತೆ ಕೈಜೋಡಿಸಬೇಕು’ ಎಂದರು.

‘ಖಾಲಿ ನಿವೇಶನಗಳಿರುವ, ಕೆಲವೇ ಮನೆಗಳು ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಗಸ್ತು ಕಾರ್ಯ ಮಾಡಲು ಸಿಬ್ಬಂದಿ ಕೊರತೆ ಇದೆ’ ಎಂದು ಪ್ರತಿಕ್ರಿಯಿಸಿದರು.

ಗಸ್ತು ಹೆಚ್ಚಳ; ಚೆಕ್‌ಪೋಸ್ಟ್ ರಚನೆ

‘ಮೈಸೂರಿನ ಹೊರವಲಯದಲ್ಲಿ ನಿರ್ಮಾಣ ಹಂತದ ಕಟ್ಟಡಗಳಿಂದ ಬಾಗಿಲು, ಕಿಟಿಕಿ, ಮರದ ಪಟ್ಟಿಗಳು ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಕಳವು ತಡೆಯಲು ಗಸ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳವಾದ ವಸ್ತುಗಳನ್ನು ಸರಕು ಸಾಗಣೆ ಆಟೊ, ಟೆಂಪೊಗಳಲ್ಲೇ ಸಾಗಿಸುವುದರಿಂದ ಜಯಪುರ, ಇಲವಾಲ, ವರುಣಾ ಭಾಗಗಳಲ್ಲಿ ವಿಶೇಷ ಚೆಕ್‌ಪೋಸ್ಟ್ ತೆರೆಯಲಾಗಿದೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಬಡಾವಣೆಗಳಲ್ಲೇ ಹೆಚ್ಚು

‘ನಗರದ ರಿಂಗ್‌ರಸ್ತೆಗೆ ಹೊಂದಿಕೊಂಡ ಬಡಾವಣೆಗಳಲ್ಲಿಯೇ ಕಟ್ಟಡ ಸಾಮಗ್ರಿ ಕಳವು ಹೆಚ್ಚಿದೆ. ವಾಹನಗಳಲ್ಲಿ ಸಾಮಗ್ರಿ ತುಂಬಿಕೊಂಡು ಕಳ್ಳರು ಸುಲಭವಾಗಿ ರಿಂಗ್‌ರಸ್ತೆಯಲ್ಲಿ ಪರಾರಿಯಾಗುತ್ತಾರೆ. ಕೋವಿಡ್‌ ಸಂಕಷ್ಟದಿಂದ ಕಳ್ಳತನಕ್ಕೆ ಹೊಸದಾಗಿ ಇಳಿದಿರುವ ಸಣ್ಣ ಗುಂಪುಗಳು ಅಲ್ಲಲ್ಲಿ ಕಾರ್ಯಾಚರಿಸುತ್ತಿರುವ ಕುರಿತು ಶಂಕೆ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT