ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಗೋಡು: ಹುಲಿ ದಾಳಿ; ಮೇಕೆ ಸಾವು

ಗುಂಪುಗೂಡಿದ ಜನ; ಕಾರ್ಯಾಚರಣೆಗೆ ಅಡ್ಡಿ
Last Updated 6 ಮೇ 2021, 3:52 IST
ಅಕ್ಷರ ಗಾತ್ರ

ಹನಗೋಡು: ನಾಗರಹೊಳೆ ಉದ್ಯಾನ ದಂಚಿನ ಹನಗೋಡು ಬಳಿಯ ದೊಡ್ಡಹೆಜ್ಜೂರಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಬುಧವಾರ ಹಾಡ ಹಗಲೇ ಮೇಕೆಯೊಂದನ್ನು ಕೊಂದು ಹಾಕಿದೆ. ಹುಲಿಯು ಸ್ಥಳದಲ್ಲಿ ಕಾಣಿಸಿಕೊಂಡಿದೆ.

ದೊಡ್ಡಹೆಜ್ಜೂರಿನ ಹಳೇ ಊರು ಹನುಮಂತಪುರದ ಅಂಗಳದಲ್ಲಿ ಬುಧವಾರ ಮದ್ಯಾಹ್ನದ ವೇಳೆ ಮೇಯು ತ್ತಿದ್ದ ಮೇಕೆ ಹಿಂಡಿನ ಮೇಲೆ ಹುಲಿ ದಾಳಿ ನಡೆಸಿದೆ. ಆಡು ದೊಡ್ಡಹೆಜ್ಜೂರು ಗ್ರಾ.ಪಂ.ಸದಸ್ಯ ನಟರಾಜ ಅವರಿಗೆ ಸೇರಿದ್ದು, ಆಡು ಮೇಯಿಸುತ್ತಿದ್ದ ಶಿವೇಗೌಡ, ಮಂಜು ಪಾರಾಗಿದ್ದಾರೆ.

ಸೋಮವಾರ ಮಧ್ಯರಾತ್ರಿ ಪಕ್ಕದ ದಾಸನಪುರದ ದೇವರಾಜ ಅವರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಹಾಕಿತ್ತು. ಇದೇ ಹುಲಿ ವಾರದಿಂದೀಚೆಗೆ ಈ ಭಾಗದಲ್ಲಿ ನಾಲ್ಕಾರು ಹಸುಗಳನ್ನು ಕೊಂದಿದೆ.

ಹುಲಿ ದಾಳಿಯಿಂದ ತಪ್ಪಿಸಿಕೊಂಡು ಬಂದ ದನಗಾಹಿಗಳು ಊರಿಗೆ ವಿಷಯ ಮುಟ್ಟಿಸುತ್ತಿದಂತೆ ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು. ಜನರನ್ನು ಕಂಡು ಗಾಬರಿಗೊಂಡ ಹುಲಿ ಪಕ್ಕದ ಪೊದೆಯೊಳಗೆ ಸೇರಿಕೊಂಡು ಹಲವು ಬಾರಿ ಘರ್ಜಿಸಿತು.

ಕೃಷಿ ಚಟುವಟಿಕೆ ಆರಂಭವಾಗಿದ್ದು, ವ್ಯವಸಾಯ ಮಾಡಲು ಜಮೀನಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವಂತೆ ಎಪಿಎಂಸಿ ಅಧ್ಯಕ್ಷ ಮುದಗನೂರು ಸುಭಾಷ್, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್‌ ಒತ್ತಾಯಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಎ.ಸಿ.ಎಫ್.ಸತೀಶ್, ಆರ್‌ಎಫ್‌ಒ ನಮನ್ ನಾರಾಯಣ ನಾಯಕ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮಂದಿ ಹುಲಿಯನ್ನು ಪತ್ತೆ ಮಾಡಿ ಕಾಡಿಗಟ್ಟಲು ಮುಂದಾಗುತ್ತಿದ್ದಂತೆ ಸ್ವಲ್ಪ ದೂರದಲ್ಲೇ ಹುಲಿ ಕಾಣಿಸಿಕೊಂಡಿತು. ಅರಣ್ಯ ಸಿಬ್ಬಂದಿಯೊಂದಿಗೆ ಬಂದಿದ್ದ ಇನ್ನೂರಕ್ಕೂ ಹೆಚ್ಚು ಜನರನ್ನು ಕಂಡು ಹುಲಿ ಗಾಬರಿಯಿಂದ ಪೊದೆಯೊಳಗೆ ಮರೆಯಾಯಿತು. ಜನರು ಸ್ಥಳದಿಂದ ತೆರಳದೆ ಇದ್ದುದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು.

ದಾಸನಪುರದ ಹಸು ಕೊಂದ ಸ್ಥಳದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಕ್ಯಾಮೆರಾ ಟ್ರಾಪಿಂಗ್‌ನಲ್ಲಿ ಹುಲಿಯ ಚಿತ್ರ ಪತ್ತೆಯಾಗಿದೆ. ಸಾಕಾನೆಗಳ ಸಹಾಯದಿಂದ ಹುಲಿಯನ್ನು ಪಕ್ಕದ ನಾಗರಹೊಳೆ ಉದ್ಯಾನಕ್ಕೆ ಓಡಿಸಲು ಕ್ರಮವಹಿಸಲಾಗುವುದು. ಆದರೆ ಗ್ರಾಮಸ್ಥರ ಗುಂಪುಗೂಡುವಿಕೆಯಿಂದ ಹುಲಿ ಬೆದರಿದ್ದು, ಕಾರ್ಯಾಚರಣೆಗೆ ತೊಂದರೆಯಾಗಿದೆ. ಹುಲಿಯನ್ನು ಕಾಡಿಗಟ್ಟಲು ಸಾಧ್ಯವಾಗದಿದ್ದರೆ ಹಿರಿಯ ಅಧಿಕಾರಗಳ ಮಾರ್ಗದರ್ಶನದಂತೆ ಕ್ರಮವಹಿಸಲಾಗುವುದೆಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT