ಮೈಸೂರು: ಹುಲಿ ಸಾವಿನ ಸುತ್ತ ಅನುಮಾನಗಳ ಹುತ್ತ

7
ಈ ವರ್ಷದಲ್ಲಿ ನಾಗರಹೊಳೆಯಲ್ಲಿ ಸಂಭವಿಸಿದ 3ನೇ ಹುಲಿ ಸಾವಿನ ಪ್ರಕರಣ

ಮೈಸೂರು: ಹುಲಿ ಸಾವಿನ ಸುತ್ತ ಅನುಮಾನಗಳ ಹುತ್ತ

Published:
Updated:
Deccan Herald

ಮೈಸೂರು: ನಾಗರಹೊಳೆಯಲ್ಲಿ ಈ ವರ್ಷ 3ನೇ ಹುಲಿ ಸಾವು ಸಂಭವಿಸಿದೆ. ಕಳೆದ ಎರಡು ಬಾರಿ ಸಂಭವಿಸಿದ ಹುಲಿಗಳ ಸಾವು ಸಹಜವಾದುದಾಗಿತ್ತು. ಆದರೆ, ಬುಧವಾರ ಕಬಿನಿ ಹಿನ್ನೀರಿನಲ್ಲಿ ಪತ್ತೆಯಾದ ಹುಲಿಯ ಮೃತದೇಹ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ಹುಲಿಯ ಕಾಲಿನ ಸ್ವಲ್ಪ ಭಾಗವನ್ನು ಕತ್ತರಿಸಿ ಅದರಲ್ಲಿರುವ ಎಲ್ಲ ಉಗುರುಗಳನ್ನು ಕಿತ್ತು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಮತ್ತೆ ಆ ಕವರ್‌ನ್ನು ಹುಲಿಯ ಕಾಲಿಗೆ ಕಟ್ಟಿ ನದಿಗೆ ಎಸೆದಿರುವುದು ಪೊಲೀಸರಿಗೂ, ಅರಣ್ಯ ಅಧಿಕಾರಿಗಳಿಗೂ ಅಚ್ಚರಿ ತಂದಿದೆ.

ತಂತಿ ಬೇಲಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ವಿದ್ಯುತ್ ಆಘಾತದಿಂದ ಹುಲಿ ಸಾವನ್ನಪ್ಪಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ, ಹುಲಿಯ ಉಗುರುಗಳನ್ನು ಕತ್ತರಿಸಿದವರು ಯಾರು ಮತ್ತು ಏಕೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಹುಲಿಯ ಉಗುರುಗಳನ್ನು ಸಾಮಾನ್ಯ ರೈತ ಅಥವಾ ಆದಿವಾಸಿ ಕತ್ತರಿಸಿರುವ ಕುರುಹು ಇಲ್ಲ. ವೃತ್ತಿಪರ ಬೇಟೆಗಾರರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಉಗುರು ಕತ್ತರಿಸಿರುವ ಶೈಲಿಯಲ್ಲೇ ತಿಳಿಯುತ್ತದೆ. ಹಾಗಿದ್ದರೆ, ಬೇಟೆಗಾರ ಹುಲಿಯ ಉಗುರುಗಳನ್ನು ತೆಗೆದುಕೊಂಡು ಹೋಗದೇ ಕಾಲಿಗೆ ಪ್ಲಾಸ್ಟಿಕ್ ಕವರ್‌ಗೆ ಹಾಕಿ ಕಟ್ಟಿದ್ದು ಏಕೆ ಎಂಬುದು ನಿಗೂಢವಾಗಿಯೇ ಉಳಿದಿದೆ.‌

ವಿದ್ಯುತ್‌ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಹುಲಿಯನ್ನು ಜಮೀನಿನ ಮಾಲೀಕರು ನದಿಗೆ ಎಸೆದ ಬಳಿಕ ಬೇಟೆಗಾರರು ಈ ಕೃತ್ಯ ಎಸಗಿರಬಹುದು. ಎಲ್ಲ ಉಗುರುಗಳನ್ನು ಕತ್ತರಿಸಿ ಪ್ಲಾಸ್ಟಿಕ್‌ ಕವರ್‌ಗೆ ಹಾಕಿದ ನಂತರ ಅರಣ್ಯ ಇಲಾಖೆಯ ಗಸ್ತಿನ ಸಿಬ್ಬಂದಿ ಬರುತ್ತಿರುವ ಸುಳಿವರಿತು ಆತ ಭಯದಿಂದ ಕಾಲಿಗೆ ಕಟ್ಟಿ ನದಿಗೆ ಎಸೆದಿರಬಹುದು. ಒಂದು ವೇಳೆ ಸಿಬ್ಬಂದಿ ತಪಾಸಣೆ ನಡೆಸಿದರೆ ಉಗುರುಗಳ ಸಮೇತ ಸಿಕ್ಕಿ ಬೀಳುವ ಸಾಧ್ಯತೆ ಇದೆ ಎಂಬ ಭಯಕ್ಕೆ ಆತ ಹೀಗೆ ಮಾಡಿರುವ ಸಾಧ್ಯತೆ ಇದೆ. ಸಿಬ್ಬಂದಿ ಹೋದ ನಂತರ ಮರಳಿ ಹಿನ್ನೀರಿನ ತೀರಕ್ಕೆ ಬರುವಷ್ಟರಲ್ಲಿ ನೀರಿನ ಸೆಳೆತಕ್ಕೆ ಹುಲಿಯ ದೇಹ ಬಹಳಷ್ಟು ದೂರ ಹೋಗಿರುವ ಸಂಭವ ಇದೆ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಟೆಗಾರರು ಬಹಿರಂಗವಾಗಿ ಎಸೆದಿರುವ ಸವಾಲೂ ಇರಬಹುದು ಎಂಬ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸ್ಥಳಕ್ಕೆ ಬಂಡೀಪುರದಿಂದ ‘ಟೈಗರ್ ಸ್ಪೆಷಲಿಸ್ಟ್’ ಖ್ಯಾತಿಯ ನಾಯಿ ‘ರಾಣಾ’ನನ್ನು ಕರೆಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.

ವೈದ್ಯ ಡಾ.ಮುಜೀಬ್‌ ರೆಹಮಾನ್ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ರವಿಶಂಕರ್, ಎಸಿಎಫ್‌ಗಳಾದ ಪೌಲ್, ಎಸ್‌.ಪರಮೇಶ್ವರ್, ಪರಮೇಶ್, ಡಿವೈಎಸ್‌ಪಿ ಭಾಸ್ಕರ್ ರೈ, ನಾಗರಹೊಳೆ ವಾರ್ಡನ್ ಕೃತಿಕಾ ಆಲನಹಳ್ಳಿ, ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಧು, ಸುಬ್ರಹ್ಮಣ್ಯ, ಕೆ.ಸಿ.ವಿನಯ, ಸಂತೋಷ್, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 3

  Sad
 • 0

  Frustrated
 • 7

  Angry

Comments:

0 comments

Write the first review for this !