ಭಾನುವಾರ, ಮಾರ್ಚ್ 7, 2021
31 °C
ಸ್ಪರ್ಧೆಯಲ್ಲಿ ದೇಶ, ವಿದೇಶದ 110 ಸೈಕ್ಲಿಸ್ಟ್‌ಗಳು ಭಾಗಿ

‘ಟೂರ್‌ ಆಫ್‌ ನೀಲಗಿರೀಸ್‌’ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ‘ರೈಡ್‌ ಎ ಸೈಕಲ್‌ ಪ್ರತಿಷ್ಠಾನ’ ವತಿಯಿಂದ ಆಯೋಜಿಸಿರುವ ಟೂರ್ ಆಫ್‌ ನೀಲಗಿರೀಸ್‌‍ನ 11ನೇ ಆವೃತ್ತಿಯ ಸೈಕ್ಲಿಂಗ್‌ ರ‍್ಯಾಲಿಗೆ ಭಾನುವಾರ ಬೆಳಿಗ್ಗೆ ನಗರದಲ್ಲಿ ಚಾಲನೆ ಲಭಿಸಿತು.

18 ಮಹಿಳೆಯರೂ ಸೇರಿದಂತೆ 110 ಸೈಕ್ಲಿಸ್ಟ್‌ಗಳು ಬೆಳಿಗ್ಗೆ 7 ಗಂಟೆಗೆ ಸ್ಪರ್ಧೆ ಆರಂಭಿಸಿದರು. ವಿದೇಶದ 29 ಸೈಕ್ಲಿಸ್ಟ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸ್ಪರ್ಧಿಗಳು ಎಂಟು ದಿನಗಳಲ್ಲಿ ಒಟ್ಟು 950 ಕಿ.ಮೀ. ಪ್ರಯಾಣಿಸಲಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಿಸಿರುವ ನೀಲಗಿರೀಸ್ ಬೆಟ್ಟಗಳ ಶ್ರೇಣಿಯಲ್ಲಿ ಸ್ಪರ್ಧಿಗಳು ಸಾಗಲಿದ್ದಾರೆ. ಡೆನ್ಮಾರ್ಕ್‌ನ 7, ಅಮೆರಿಕದ 5, ಇಂಗ್ಲೆಂಡ್‌ನ 3, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ ಮತ್ತು ಜರ್ಮನಿಯ ತಲಾ ಇಬ್ಬರು ಕಣದಲ್ಲಿದ್ದಾರೆ.

ಮೊದಲ ದಿನ 125 ಕಿ.ಮೀ. ದೂರ ಸೈಕ್ಲಿಂಗ್‌ ನಡೆಸಲಿರುವ ಸ್ಪರ್ಧಿಗಳು ಕೆ.ಆರ್‌.ನಗರ, ಹೊಳೆನರಸೀಪುರ ಮಾರ್ಗವಾಗಿ ಹಾಸನ ತಲುಪಲಿದ್ದಾರೆ. ಎರಡನೇ ದಿನ ಹಾಸನದಿಂದ ಕುಶಾಲನಗರಕ್ಕೆ ತೆರಳಲಿದ್ದಾರೆ. ಆ ಬಳಿಕ ಸುಲ್ತಾನ್ ಬತ್ತೇರಿ, ಊಟಿ, ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮತ್ತೆ ಮೈಸೂರಿಗೆ ಮರಳುವುದರೊಂದಿಗೆ ರ‍್ಯಾಲಿ ಕೊನೆಗೊಳ್ಳಲಿದೆ.

ಸುಲ್ತಾನ್ ಬತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್‌ಗಳು, ಕಲ್ಪಟ್ಟಿ ಘಾಟ್ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್ ಹಾದಿಗಳಲ್ಲಿ ಒಂದಾಗಿದೆ.

ಕಳೆದ ಬಾರಿಯ ಚಾಂಪಿಯನ್‌ ಡೆನ್ಮಾರ್ಕ್‌ನ ನಿಲ್ಸ್ ಎಜಿಲ್ ಬ್ರಾಡ್‌ಬರ್ಗ್‌ ಅಲ್ಲದೆ ಪ್ರಮುಖ ಸೈಕ್ಲಿಸ್ಟ್‌ಗಳಾದ ಕಿರಣ್‌ ಕುಮಾರ್ ರಾಜು, ನವೀನ್‌ ಜಾನ್‌, ಅಲೆಕ್ಸಿ ಗ್ರೆವಾಲ್‌ ಪಾಲ್ಗೊಂಡಿದ್ದಾರೆ.

ಬೆಂಗಳೂರಿನ ತನ್ಮಯ ಬೆಕ್ಕಳಲೆ ಅವರು ಇಕ್ಷಾ ಫೌಂಡೇಷನ್‌ಗಾಗಿ ಹಣ ಸಂಗ್ರಹಿಸಲು ಈ ಬಾರಿಯ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳ ಕಣ್ಣಿನ ಕ್ಯಾನ್ಸರ್‌ ಚಿಕಿತ್ಸೆಗಾಗಿ ₹ 10 ಲಕ್ಷ ಸಂಗ್ರಹಿಸುವ ಗುರಿಯನ್ನು ಅವರು ಹೊಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು