ಮಂಗಳವಾರ, ಅಕ್ಟೋಬರ್ 27, 2020
28 °C
ಕೋವಿಡ್‌ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಅನಿವಾರ್ಯ: ಸೋಮಶೇಖರ್

ಮೈಸೂರು: ಆಫ್ರಿಕನ್ ಚೀತಾ ವೀಕ್ಷಣೆಗೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಕ್ಷಿಣ ಆಫ್ರಿಕಾದಿಂದ ಮೈಸೂರು ಮೃಗಾಲಯಕ್ಕೆ ಕರೆ ತಂದಿರುವ ಮೂರು ಚೀತಾಗಳ ಸಾರ್ವಜನಿಕರ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಹಸಿರು ನಿಶಾನೆ ತೋರಿದರು.

ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಎರಡು ಹೆಣ್ಣು ಚೀತಾಗಳನ್ನು ಆ.17ರಂದು ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಕರೆ ತರಲಾಗಿತ್ತು. ದೇಶದಲ್ಲಿ ಹೈದರಾಬಾದ್ ಬಿಟ್ಟರೆ ಮೈಸೂರಿನಲ್ಲಿ ಮಾತ್ರ ಚೀತಾಗಳಿರುವುದು ವಿಶೇಷ.

ಚೀತಾಗಳ ವೀಕ್ಷಣೆಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಸಚಿವ ಸೋಮಶೇಖರ್‌, ‘ಈ ಬಾರಿ ದಸರಾವನ್ನು ಸರಳವಾಗಿ ಮಾತ್ರ ಆಚರಿಸಲಾಗುವುದು. ಶುಕ್ರವಾರ ಸಂಜೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೈಸೂರಿಗೆ ಬರಲಿದ್ದಾರೆ. ಶನಿವಾರ ಬೆಳಿಗ್ಗೆ ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿದೆ’ ಎಂದು ಹೇಳಿದರು.

‘ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬರುವ ಸಾಧ್ಯತೆ ಇರುವುದರಿಂದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ತಂಡ ನೀಡಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಕೋವಿಡ್‌ ಉಲ್ಬಣಿಸುತ್ತಿರುವುದರಿಂದ ಸಾರ್ವಜನಿಕರ ಪ್ರವೇಶ ನಿರ್ಬಂಧ ಅನಿವಾರ್ಯ. ಕೆಲವು ಕಟ್ಟುನಿಟ್ಟಿನ ಕ್ರಮಗಳು ಸಹ ಅನಿವಾರ್ಯವಾಗಿವೆ’ ಎಂದು ಸಚಿವ ಸೋಮಶೇಖರ್ ತಿಳಿಸಿದರು.

‘ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಸುವ ವೇಳೆ ನಾನು ಉಪಸ್ಥಿತನಿದ್ದೆ. 30 ಸಾವಿರದಿಂದ 40 ಸಾವಿರ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಹಕಾರ ಸಚಿವರು ಉತ್ತರಿಸಿದರು.

‘ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಸಿಗಲು ನಾನು ಸಹ ಬಹಳಷ್ಟು ಪ್ರಯತ್ನಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ’ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಭವಿಷ್ಯ ರೂಪಿಸಿದ ಜೆಎಸ್‌ಎಸ್‌: ಸೋಮಶೇಖರ್

ಮೈಸೂರು: ‘ಜೆಎಸ್‌ಎಸ್ ವಿದ್ಯಾ ಸಂಸ್ಥೆಗಳಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಇಲ್ಲಿ ಅಭ್ಯಾಸ ಮಾಡಿದ ಎಲ್ಲರೂ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ’ ಎಂದು ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ಜೆಎಸ್ಎಸ್ ಸಂಸ್ಥೆಗಳಿಗೆ ಕ್ಯೂಎಸ್-ಐ ಗೇಜ್ ಭಾರತೀಯ ಕಾಲೇಜು ಮತ್ತು ವಿಶ್ವವಿದ್ಯಾಲಯ ರೇಟಿಂಗ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ನಿರ್ವಹಣೆ ಬಗ್ಗೆ ಸಭೆ ನಡೆಸಿದಾಗ ಸ್ವಾಮೀಜಿ ಮೈಸೂರಿನಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ತೆಗೆದುಕೊಂಡ ಹಲವು ಉತ್ತಮ ಕ್ರಮ ಚರ್ಚೆಯಾಗಿವೆ’ ಎಂದು ಸಚಿವರು ತಿಳಿಸಿದರು.

‘ಸ್ವಾಮೀಜಿ ಸೂಚನೆಯಂತೆ ಜನರಿಗೆ ಯಾವುದೇ ತೊಂದರೆಯಾಗದಂತೆ ದಸರಾ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರೂ ಸಹ ಇದಕ್ಕೆ ಸಹಕಾರ ನೀಡಿ, ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಸೋಮಶೇಖರ್ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು