ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆ; ಆದಿವಾಸಿಗಳ ಧರಣಿ

ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ತಾಲ್ಲೂಕಿನ ಸಂಘಟನೆಗಳು ಭಾಗಿ
Last Updated 6 ಮೇ 2019, 20:03 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಕೇಂದ್ರ ಸರ್ಕಾರವು 2012ರ ತಿದ್ದುಪಡಿಯಂತೆ ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟದ ಸಂಘಟನೆಗಳು ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಎದುರು ಅಹೋರಾತ್ರಿ ಧರಣಿ ಆರಂಭಿಸಿದವು.

ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ತಾಲ್ಲೂಕಿನ ಸಂಘಟನೆಗಳ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

‘ಜೇನುಕುರುಬ, ಯರವ, ಕಾಡುಕುರುಬ ಸೋಲಿಗ, ಹಕ್ಕಿಪಿಕ್ಕಿ, ಡೊಂಗ್ರಿ ಗೆರಾಸಿಯಾ ಬುಡಕಟ್ಟು ಜನರು ತಲತಲಾಂತರದಿಂದ ಅರಣ್ಯದ ಒಳಗಡೆ ವಾಸಮಾಡುತ್ತಿದ್ದು, ಇವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಹಾಗೂ ನುಗು, ತಾರಕ, ಕಬಿನಿ, ಅಣೆಕಟ್ಟುಗಳನ್ನು ಕಟ್ಟುವಾಗ ಯಾವುದೇ ಪುನರ್ವಸತಿ ಕಲ್ಪಿಸದೆ ಅತಂತ್ರ ಸ್ಥಿತಿಗೆ ತರಲಾಗಿದೆ’ ಎಂದು ಆದಿವಾಸಿ ಮುಖಂಡ ಶೈಲೇಂದ್ರ ಆರೋಪಿಸಿದರು.

‘ಆಶ್ರಮ ಶಾಲೆಗಳನ್ನು ಉನ್ನತೀಕರಿಸಿ ಅವುಗಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಬೇಕು ಎಂಬ ಸರ್ಕಾರದ ಆದೇಶವಿದ್ದರೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ನಿರ್ಲಕ್ಷ್ಯ ತೋರುತ್ತಿದೆ. ಇದನ್ನು ಕೂಡಲೇ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಆದಿವಾಸಿ ಯುವಜನರು ಕೊಡಗು, ಮೈಸೂರು ನಗರಗಳಲ್ಲಿ 10-12 ವರ್ಷಗಳಿಂದ ಕಡಿಮೆ ವೇತನಕ್ಕೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಕೂಡಲೇ ಖಾಯಂಗೊಳಿಸಬೇಕು. ಜೊತೆಗೆ ಡಿ.ಎಡ್, ಮತ್ತು ಬಿ.ಎಡ್ ತರಬೇತಿ ಪಡೆದು ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಆಶ್ರಮ ಶಾಲೆಗಳಿಗೆ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಈಚೆಗೆ ದೊಡ್ಡ ಭೈರನಕುಪ್ಪೆ ಗ್ರಾಮದಲ್ಲಿ ಸತ್ಯಾಗ್ರಹ ನಡೆಸಿದ್ದರ ಪರಿಣಾಮವಾಗಿ ಡಿ.ಬಿ.ಕುಪ್ಪೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಮನೆಗಳ ನಿರ್ಮಾಣಕ್ಕೆ ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಅರಣ್ಯ ಭೂಮಿ ಸರ್ವೆ ಹಾಗೂ ಮನೆ ನಿರ್ಮಾಣದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳು ಹಾಗೂ ಸರಗೂರು ತಾಲ್ಲೂಕಿನ ಬಿ.ಮಟಕೆರೆ ಪಂಚಾಯಿತಿ, ಎಂ.ಸಿ.ತಳಲು, ಹೆಗ್ಗನೂರು, ಹಾದನೂರು, ಮುಳ್ಳೂರು ಗ್ರಾಮ ಪಂಚಾಯಿತಿಗಳಲ್ಲಿ ವೈಯಕ್ತಿಕ ಅರಣ್ಯ ಹಕ್ಕು ಹಾಗೂ ಸಾಮೂಹಿಕ ಅರಣ್ಯ ಹಕ್ಕಿನ ಅರ್ಜಿಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಾನಕಮ್ಮ, ಪುಟ್ಟಬಸವ, ಕರಿಯಪ್ಪ, ಮಹದೇವ, ಈರಮ್ಮ, ಅಯ್ಯಪ್ಪ, ಮಹದೇವ, ಶಂಕರ್, ಜವರ, ವಾಣಿ, ಸತ್ಯ, ಗೌರಮ್ಮ, ಈಶ್ವರಿ, ಗೀತಾ, ಜಯಮ್ಮ, ಪುಟ್ಟಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT