ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸಂಚಾರ ನಿರಂತರ ಸವಾಲು

Last Updated 29 ಜನವರಿ 2018, 6:56 IST
ಅಕ್ಷರ ಗಾತ್ರ

ರಾಮನಗರ: ಕೆಲವೇ ವರ್ಷಗಳ ಹಿಂದೆ ಸಾಮಾನ್ಯ ನಗರವಾಗಿದ್ದ ರಾಮನಗರ ಇಂದು ಸರಿಸುಮಾರು 1.25 ಲಕ್ಷ ಜನಸಂಖ್ಯೆಯನ್ನು ತನ್ನೊಡಲೊಳಗೆ ಪೋಷಿಸುತ್ತಿದೆ. ಅದಕ್ಕೆ ತಕ್ಕಂತೆ ವಾಹನಗಳ ಸಂಚಾರವೂ ದಟ್ಟವಾಗಿದೆ. ಆದರೆ, ಸಂಚಾರ ವ್ಯವಸ್ಥೆ ಮಾತ್ರ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ.

ನಗರಕ್ಕೆ ಕಳಸ ಪ್ರಾಯದಂತೆ ಇರುವುದು ಬೆಂಗಳೂರು–ಮೈಸೂರು ರಸ್ತೆ. ಈ ರಸ್ತೆಯೊಂದರಲ್ಲೇ ಹಲವು ವೃತ್ತಗಳು ಇವೆ. ಪ್ರಸ್ತುತ ಎರಡು ವೃತ್ತಗಳಲ್ಲಿ ಸಿಗ್ನಲ್‌ ಲೈಟ್‌ಗಳಿವೆ. ಇನ್ನೂ ಹಲವು ವೃತ್ತಗಳಲ್ಲಿ ಸಿಗ್ನಲ್‌ ಲೈಟ್‌ಗಳ ಅಗತ್ಯವಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸಂಚಾರ ಪೋಲಿಸ್ ಠಾಣೆ ಆರಂಭವಾಗಿದ್ದರೂ, ಬೆಂಗಳೂರು- ಮೈಸೂರು ಹೆದ್ದಾರಿ ಸೇರಿದಂತೆ ನಗರ ಪ್ರದೇಶದ ಒಳಗೆ ಸುಗಮ ರಸ್ತೆ ಸಂಚಾರ ವ್ಯವಸ್ಥೆ ಇದುವರೆಗೆ ಸಾಧ್ಯವಾಗಿಲ್ಲ.

ವಾಹನ ಚಾಲಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಸದ್ಯ ವಾಹನ ನಿಂತಲ್ಲೇ ಪಾರ್ಕಿಂಗ್, ಜನ ಹತ್ತಿದಲ್ಲೇ ಬಸ್ ನಿಲ್ದಾಣ, ಬಂಡಿ ಇಟ್ಟಲ್ಲೇ ವ್ಯಾಪಾರ ಸಾಗಿದೆ. ಸುಗಮ ಸಂಚಾರಕ್ಕಾಗಿ ನಗರದ ಯಾವುದೇ ರಸ್ತೆಯನ್ನು ಏಕಮುಖವಾಗಿ ಮಾಡಿಲ್ಲ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಬೆಂಗಳೂರು- ಮೈಸೂರು ಹೆದ್ದಾರಿ ದಾಟಲು ಹರಸಾಹಸ ಪಡಬೇಕಾಗಿದೆ.

ಅಂಗಡಿಯವರು ರಸ್ತೆ ಒತ್ತುವರಿ ಮಾಡಿಕೊಂಡಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಫುಟ್‍ ಪಾತ್ ವ್ಯಾಪಾರಿಗಳು, ಹಣ್ಣು, ತರಕಾರಿ ವ್ಯಾಪಾರಿಗಳು, ತಳ್ಳು ಗಾಡಿಗಳು, ಹೋಟೆಲ್‍ ಗಳು ಸಂಪೂರ್ಣವಾಗಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ನಗರಸಭೆ ತನ್ನ ವ್ಯಾಪ್ತಿಯಲ್ಲಿ ಪುಟ್‌ಪಾತ್‌ ರಸ್ತೆ ನಿರ್ಮಿಸದೆ ಇರುವುದರಿಂದ ಪಾದಚಾರಿಗಳು ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ನಡೆದಾಡಬೇಕಾಗಿದೆ.

ನಂಬರ್ ಪ್ಲೇಟ್ ಇಲ್ಲದ ವಾಹನ ಸಂಚಾರ, ಅಧಿಕ ಡೆಸಬಲ್ ಹಾರ್ನ್, ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವ ಖಾಸಗಿ ಬಸ್, ಆಟೋಗಳ ಹಾವಳಿ ಇದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಸಂಚಾರಿ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಾದ ಮಾಗಡಿ ರಸ್ತೆ, ಜಾಲಮಂಗಲ ರಸ್ತೆ, ಸ್ಟೇಷನ್ ರಸ್ತೆ, ನಗರಸಭೆ ರಸ್ತೆ, ಎಂಜಿ ರಸ್ತೆ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಚಾಲಕರು ಮತ್ತು ಪಾದಚಾರಿಗಳು ಜೀವ ಬಿಗಿ ಹಿಡಿದು ಸಾಗಬೇಕಾಗಿದೆ ಎನ್ನುತ್ತಾರೆ ಎ.ಎಸ್. ಶಿವಕುಮಾರ್.

ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಮಾರುಕಟ್ಟೆಯಲ್ಲಿ ಸಮರ್ಪಕವಾದ ವಾಹನ ನಿಲ್ದಾಣ ವ್ಯವಸ್ಥೆ ಇಲ್ಲ. ಇದರಿಂದ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ವಾಹನ ಚಾಲಕರಂತೂ ಕೆಎಸ್‍ಆರ್‍ ಟಿಸಿ ಬಸ್ ನಿಲ್ದಾಣದ ಒಳಗೆ ಬಸ್ ನಿಲ್ಲಿಸುವ ಜಾಗದಲ್ಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ. ಇಂತಹ ವಾಹನ ಸವಾರರಿಗೆ ದಂಡ ಹಾಕುವ ಅಥವಾ ವಾಹನ ನಿಲ್ಲಿಸದಂತೆ ಎಚ್ಚರಿಕೆ ನೀಡುವ ಕಾರ್ಯವನ್ನು ಬಸ್‍ನಿಲ್ದಾಣದ ಸಿಬ್ಬಂದಿ ಮಾಡುತ್ತಿಲ್ಲ ಎನ್ನುತ್ತಾರೆ ಪಿ. ಶಬರಿ.

ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಆಟೋರಿಕ್ಷಾಗಳ ಹಾವಳಿ ಹೆಚ್ಚಿದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಚಾಲಕರು ನಿಯಮ ಮೀರಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಆಟೊ ನಿಲ್ಲಿಸುತ್ತಾ, ನಿಧಾನಗತಿಯಲ್ಲಿ ಚಲಿಸುವುದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ವಿಕಾಸ್ ದೂರುತ್ತಾರೆ.

ಕೆಎಸ್‍ಆರ್‍ ಟಿಸಿ ಬಸ್ ನಿಲ್ದಾಣದ ಬಳಿ ಖಾಸಗಿ ಬಸ್‍ ಗಳ ನಿಲುಗಡೆಗೆ ಅವಕಾಶವಿಲ್ಲ ಆದರೂ ಈ ನಿಯಮ ಪಾಲನೆ ಆಗುತ್ತಿಲ್ಲ ಎಂದು ತಿಳಿಸಿದರು. ಐಜೂರು ವೃತ್ತದಲ್ಲಿ ಮೈಸೂರು ಕಡೆ ಹೋಗುವ ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಲ್ಲುತ್ತಿವೆ. ಬೆಂಗಳೂರಿನಿಂದ ಬರುವ ಈ ಬಸ್‍ ಗಳು ಪ್ರಯಾಣಿಕರು ಭರ್ತಿಯಾಗುವವರೆಗೆ ಹೋಗುವುದೇ ಇಲ್ಲ. ಹಗಲು ಹೊತ್ತಿನಲ್ಲಿ ಖಾಸಗಿ ಬಸ್‍ ಗಳ ಜತೆಗೆ ಆಪೆ ಆಟೋಗಳ ಉಪಟಳ ಹೆಚ್ಚಾಗಿದೆ. ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಎನ್ನುವುದು ಗಗನಕುಸುಮವಾಗಿದೆ ಎಂದು ಜಯಮ್ಮ ಬೇಸರ ವ್ಯಕ್ತಪಡಿಸಿದರು.

ಖಾಸಗಿ ಬಸ್‌ನಿಲ್ದಾಣ ಎಂಬ ನರಕ : ನಗರಕ್ಕೆ ನಿತ್ಯವೂ 100ಕ್ಕೂ ಹೆಚ್ಚು ಖಾಸಗಿ ಬಸ್‌ ಬಂದುಹೋದರೂ, ಸುಸಜ್ಜಿತ ನಿಲ್ದಾಣವಿಲ್ಲ. ಇರುವ ಚಿಕ್ಕನಿಲ್ದಾಣದಲ್ಲೇ ಇರುವೆಯಂತೆ ಬಸ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಅಲ್ಲಿ ಸ್ವಲ್ಪ ಎಡವಟ್ಟಾದರೂ, ಸದಾ ಕಿಕ್ಕಿರಿದು ನಿಂತಿರುವ ಜನರ ಜೀವಕ್ಕೆ ಸಂಚಕಾರ ತಪ್ಪಿದ್ದಲ್ಲ.

ಪಾರ್ಕಿಂಗ್‌ ಸಮಸ್ಯೆ

ರಾಷ್ಟ್ರೀಯ ಕಟ್ಟಡ ನಿಯಮಾವಳಿ ಪ್ರಕಾರ 15 ಮೀಟರ್, (50 ಅಡಿಗಳಿಗಿಂತ ಎತ್ತರ)ದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಪರವಾನಗಿ ಕಡ್ಡಾಯ ಹೀಗಾಗಿ ಕಟ್ಟಡದ ಮುಂದೆ ಹಾಗೂ ಸುತ್ತ ನಿರ್ದಿಷ್ಟ ಪ್ರಮಾಣದ ಪ್ರಮಾಣದ ಜಾಗ ಬಿಟ್ಟಿರಬೇಕು. ಅಲ್ಲದೆ ವಾಹನ ಪಾರ್ಕಿಂಗ್ ಜಾಗವೂ ಕಡ್ಡಾಯ. ಆದರೆ ರಾಮನಗರ ಪಟ್ಟಣದಲ್ಲಿ ಕಟ್ಟಿರುವ ಬಹುಮಹಡಿ ಕಟ್ಟಡಗಳ ಮಾಲೀಕರು ಕೆಳಮಹಡಿಯನ್ನು ಪಾರ್ಕಿಂಗ್‍ ಗೆ ಮೀಸಲಿಟ್ಟಿಲ್ಲ ಎಂದು ಪಲ್ಲವಿ ಹೇಳುತ್ತಾರೆ.

ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಸಮಗ್ರ ಕಾರ್ಯ ಯೋಜನೆ ರೂಪಿಸಿ ನಗರದ ಜನತೆ ಸುರಕ್ಷಿತವಾಗಿ ಸಂಚಾರ ಮಾಡುವ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ.

* * 

ಮೈಸೂರು ಕಡೆ ಹೋಗುವ ಬಸ್ ಗಳಿಗೆ ನಿಲ್ದಾಣವೆ ಇಲ್ಲ. ಹಾಗೆಯೇ ಖಾಸಗಿ ಬಸ್‌ಗಳಿಗೂ ನಿಲ್ದಾಣ ಇಲ್ಲ
ವಿಕಾಸ್‌
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT