ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಅಡಿ ಎತ್ತರದ ಜೀವಂತ ಅರಳಿ ಮರ ಸ್ಥಳಾಂತರ

ಅಗ್ರಹಾರದ ಮರ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಆವರಣಕ್ಕೆ ರವಾನೆ
Last Updated 30 ನವೆಂಬರ್ 2019, 10:23 IST
ಅಕ್ಷರ ಗಾತ್ರ

ಮೈಸೂರು: ಕೊಡಲಿಗೆ ಬಲಿಯಾಗುತ್ತಿದ್ದ ನಗರದಲ್ಲಿನ 30 ಅಡಿ ಎತ್ತರದ ಅರಳಿಮರವೊಂದನ್ನು ಶುಕ್ರವಾರ ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ.

ಪುಟ್ಟಮಾದಯ್ಯ ಎಂಬುವವರು ಅಗ್ರಹಾರದ ತಮ್ಮ ಹಳೆಯ ಮನೆಯನ್ನು ಕೆಡವುತ್ತಿದ್ದರು. ಇಲ್ಲಿ ಮನೆಯೊಳಗೆ 11 ವರ್ಷ ವಯಸ್ಸಿನ ಅರಳಿಮರವೊಂದು ಬೆಳೆದಿತ್ತು. ಇದನ್ನು ಕಡಿಯಲು ಮನಸ್ಸಾಗದ ಅವರು ‘ಒ2’ ಎಂಬ ಸ್ವಯಂಸೇವಾ ಸಂಸ್ಥೆಯೊಂದರ ನೆರವನ್ನು ಕೇಳಿದರು.

ಬೇರೆ ಎಲ್ಲಿಯಾದರು 40x40 ಅಡಿ ವಿಸ್ತೀರ್ಣದ ಜಾಗ ದೊರೆತರೆ ಯಶಸ್ವಿಯಾಗಿ ಮರವನ್ನು ಸ್ಥಳಾಂತರ ಮಾಡಬಹುದು ಎಂದು ಸಂಸ್ಥೆಯವರು ತಿಳಿಸಿದರು. ಜಾಗಕ್ಕಾಗಿ ಪುಟ್ಟಮಾದಯ್ಯ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಅವರ ಮೊರೆ ಹೊಕ್ಕರು.

ಮಂಜನಾಥ್ ಅವರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ್ ಜಾಗ ನೀಡಲು ಸಮ್ಮತಿಸಿದರು. ಸಂಸ್ಥೆಯ ಆವರಣದಲ್ಲಿ ಮೊದಲಿಗೆ ಗುಂಡಿ ತೆಗೆದು ನಂತರ ಮರದ ಬೇರುಗಳನ್ನು ಬಿಡಿಸುವ ಕೆಲಸವನ್ನು ಆರಂಭಿಸಲಾಯಿತು.

ಸತತ ಮೂರು ದಿನಗಳ ಕಾಲ ಸಂಸ್ಥೆಯ ಸಿಬ್ಬಂದಿ ಮರಗಳ ಬೇರುಗಳನ್ನು ಮಣ್ಣಿನಿಂದ ಬಿಡಿಸಿ, ಅದನ್ನು ಗೋಣಿಚೀಲದಲ್ಲಿ ಸುತ್ತಿಟ್ಟು ನಿರಂತರವಾಗಿ ನೀರು ಹಾಕಿದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಜೆಸಿಬಿ ಮತ್ತು ಕ್ರೇನ್‌ ಯಂತ್ರಗಳ ಸಹಾಯದಿಂದ ಮರವನ್ನು ಬುಡಸಮೇತ ತೆಗೆದು ಇದಕ್ಕಾಗಿಯೇ ತರಿಸಿದ್ದ 80 ಅಡಿ ಉದ್ದದ ಬೃಹತ್ ಲಾರಿಯ ಮೇಲೆ ಹಾಕಿಕೊಂಡು ಸಂಸ್ಥೆಯ ಆವರಣದಲ್ಲಿ ತೆಗೆದಿದ್ದ ಗುಂಡಿಯಲ್ಲಿ ಯಶಸ್ವಿಯಾಗಿ ನೆಡಲಾಯಿತು.

ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಮಂಜುನಾಥ್, ‘ಇದು ಮೈಸೂರು ನಗರದಲ್ಲಿ ನಡೆದ ಮೊದಲ ಯಶಸ್ವಿ ಮರದ ಸ್ಥಳಾಂತರ. ಮರವಿದ್ದ ಜಾಗದ ಮಣ್ಣನ್ನು ತೆಗೆದು ಹೊಸ ಜಾಗದಲ್ಲಿ ಹಾಕಲಾಗಿದೆ. ಇದರಿಂದ ಬೇರುಗಳು ಸುಲಭವಾಗಿ ಮಣ್ಣಿನೊಂದಿಗೆ ಬೆರೆತುಕೊಳ್ಳುತ್ತವೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ತಂತ್ರಜ್ಞಾನ ಬಳಸಿ ಮರಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT