ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವಿಗೆ ಕಾಯುತ್ತಿರುವ ಮರಗಳು

ನಗರದ ವಿವಿಧೆಡೆ ರಸ್ತೆಗೆ ಬಾಗಿದ ವೃಕ್ಷಗಳು; ಸಾರ್ವಜನಿಕರಿಂದ ದೂರು
Last Updated 24 ಏಪ್ರಿಲ್ 2019, 20:23 IST
ಅಕ್ಷರ ಗಾತ್ರ

ಮೈಸೂರು: ನಗರದ ವಿವಿಧೆಡೆ ಒಣಗಿದ ಮರಗಳು ಮತ್ತು ರೆಂಬೆಗಳ ಸಂಖ್ಯೆ ಹೆಚ್ಚಿದ್ದು, ಅ‍ಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿರುವುದರಿಂದ ಮೈಸೂರು ಮಹಾನಗರ ಪಾಲಿಕೆ ಒಣಗಿದ ಮರಗಳ ತೆರವು ಕಾರ್ಯಾಚರಣೆ ಚುರುಕುಗೊಳಿಸಿದೆ.

ಏಪ್ರಿಲ್‌ ಬಳಿಕ ನಗರದಲ್ಲಿ ನಾಲ್ಕೈದು ಸಲ ಗಾಳಿ ಸಹಿತ ಮಳೆ ಬಿದ್ದಿದೆ. ಗಾಳಿಯ ರಭಸಕ್ಕೆ ಕೆಲವೆಡೆ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಕೋರಿ ಮಹಾನಗರ ಪಾಲಿಕೆಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ.

ಪ್ರಯಾಣಿಕರು ಮತ್ತು ಪಾದಚಾರಿಗಳ ಪ್ರಾಣಕ್ಕೆ ಅಪಾಯ ತಂದೊಡ್ಡುವ ಮರಗಳು ಮತ್ತು ರೆಂಬೆಗಳನ್ನು ತೆರವುಗೊಳಿಸುವುದು ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ. ತೆರವು ಕಾರ್ಯಾಚರಣೆಗೆ ಪಾಲಿಕೆ ಬಳಿ ಎರಡು (ಲ್ಯಾಡರ್‌ ಜೀಪ್) ವಾಹನಗಳಿವೆ. ಆದರೆ ಈ ಎರಡು ವಾಹನಗಳಿಂದ 65 ವಾರ್ಡ್‌ಗಳಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟವೆನಿಸಿದೆ.

‘ಲ್ಯಾಡರ್‌ ಜೀಪುಗಳನ್ನು ಬಳಸಿ ಒಣಗಿದ ರೆಂಬೆಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಸಣ್ಣಪುಟ್ಟ ರೆಂಬೆಗಳನ್ನು ನಾವಾಗಿಯೇ ತೆರವುಗೊಳಿಸುತ್ತಿದ್ದೇವೆ. ಆದರೆ ಒಣಗಿರುವ ದೊಡ್ಡ ಮರಗಳನ್ನು ಕತ್ತರಿಸಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು’ ಎಂದು ಪಾಲಿಕೆ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಸದಾಶಿವ ಕೆ.ಚಟ್ನಿ ತಿಳಿಸಿದರು.

‘ದೊಡ್ಡಕೆರೆ ಮೈದಾನದ ಬಳಿ ಬೃಹತ್‌ ಗಾತ್ರದ ಮರವೊಂದು ಒಣಗಿದೆ. ಪಾಲಿಕೆಯ ವಾಹನ, ಯಂತ್ರಗಳನ್ನು ಬಳಸಿ ಅದನ್ನು ಕತ್ತರಿಸುವುದು ಕಷ್ಟ. ಆದ್ದರಿಂದ ಖಾಸಗಿ ಏಜೆನ್ಸಿಯವರನ್ನು ಕರೆಸಿ ತೆರವುಗೊಳಿಸಲು ನಿರ್ಧಿರಿಸಿದ್ದೇವೆ. ಮರ ತೆರವುಗೊಳಿಸಲು ಈಗಾಗಲೇ ಅರಣ್ಯ ಇಲಾಖೆಯ ಅನುಮತಿ ದೊರೆತಿದೆ’ ಎಂದರು.

ಹುಣಸೂರು ರಸ್ತೆಯಲ್ಲಿರುವ ಕೆಲವು ಮರಗಳು ಅಪಾಯದ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆಯವರು ಕೆಲವನ್ನು ತೆರವುಗೊಳಿಸಿದ್ದಾರೆ. ಇನ್ನುಳಿದವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಪಾಲಿಕೆಗೆ ಅನುಮತಿ ನೀಡಿದೆ. ತಕ್ಷಣದಲ್ಲೇ ಒಣಗಿದ ಮರಗಳ ತೆರವು ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

‘ಪಾಲಿಕೆಯ ಒಂಬತ್ತು ವಲಯಗಳ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿರುವ ಒಣಗಿದ ಮರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅದೇ ರೀತಿ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಧರಿಸಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದರು.

ಸಮನ್ವಯದ ಕೊರತೆ: ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಕೆಲವೆಡೆ ಮರಗಳ ತೆರವು ಪ್ರಕ್ರಿಯೆ ತಡವಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೆಂಬೆಗಳನ್ನು ತ್ವರಿತವಾಗಿ ತೆರವು ಮಾಡದಿದ್ದರೆ ಸಂಭವಿಸಬಹುದಾದ ಅನಾಹುತಕ್ಕೆ ಪಾಲಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಮರಗಳ ತೆರವಿಗೆ ಪಾಲಿಕೆಯು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಈ ಸಂಬಂಧ ಪ್ರಕ್ರಿಯೆ ಪೂರ್ಣಗೊಂಡು ಅನುಮತಿ ಲಭಿಸಲು ಕೆಲವು ದಿನಗಳು ಬೇಕಾಗುತ್ತದೆ. ಇದರಿಂದ ತೆರವು ಕೆಲಸ ತಡವಾಗುತ್ತಿದೆ. ಮರಗಳ ತೆರವಿಗೆ ಅನುಮತಿ ಕೋರಿ ಸಲ್ಲಿಸಿರುವ ಹಲವು ಅರ್ಜಿಗಳು ಇನ್ನೂ ಅರಣ್ಯ ಇಲಾಖೆ ಮುಂದಿವೆ.

‘ಅರ್ಜಿ ಹಾಕಿ ಅನುಮತಿಗೆ ಕಾಯ್ದು ಕುಳಿತರೆ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ನೀವೇ ಬಂದು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ’ ಎಂದು ಪಾಲಿಕೆಯು ಈ ಹಿಂದೆ ಅರಣ್ಯ ಇಲಾಖೆಗೆ ಮನವಿ ಮಾಡಿತ್ತು.

ಕೆಆರ್‌ಎಸ್‌ ರಸ್ತೆ, ಹುಣಸೂರು ರಸ್ತೆ, ನೀಲಗಿರಿ ರಸ್ತೆ, ಬನ್ನಿಮಂಟಪ, ನಜರಾಬಾದ್‌ನ ಮಿನಿ ವಿಧಾನಸೌಧದ ಅಸುಪಾಸಿನಲ್ಲಿ ಹಲವು ಮರಗಳಲ್ಲಿ ಒಣಗಿದ ರೆಂಬೆಗಳು ಇನ್ನೂ ಉಳಿದುಕೊಂಡಿವೆ. ಪಾಲಿಕೆಯ ಜತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಅರಣ್ಯ ಇಲಾಖೆ ಕೈಜೋಡಿಸಿದರೆ ಮರಗಳ ತೆರವು ಪ್ರಕ್ರಿಯೆ ವೇಗ ಪಡೆದುಕೊಳ್ಳಬಹುದು.

ಮರ ಹಾಗೂ ಬೃಹತ್ ಗಾತ್ರದ ರೆಂಬೆ ಬಿದ್ದು ಪ್ರಾಣಹಾನಿ ಸಂಭವಿಸಿದ ಹಲವು ಘಟನೆಗಳು ನಗರದಲ್ಲಿ ಈ ಹಿಂದೆ ನಡೆದಿವೆ. ಎರಡು ದಿನಗಳ ಹಿಂದೆ ಬೀಸಿದ ಗಾಳಿಗೆ ಕೆಆರ್‌ಎಸ್‌ ರಸ್ತೆಯಲ್ಲಿ ಮರವೊಂದು ಬಿದ್ದಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಕೆಆರ್‌ಎಸ್‌ ರಸ್ತೆಯ ಇಎಸ್‌ಐ ಆಸ್ಪತ್ರೆ ಮುಂಭಾಗ ಮರವೊಂದು ಆಟೊ ಮೇಲೆ ಉರುಳಿ ಯುವತಿ ಬಲಿಯಾಗಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT