ಉಜ್ವಲ, ಆಯುಷ್ಮಾನ್‌ ಯೋಜನೆಯಿಂದ ಅನುಕೂಲ: ಸಂಸದ ಪ್ರತಾ‍ಪ ಸಿಂಹ

7

ಉಜ್ವಲ, ಆಯುಷ್ಮಾನ್‌ ಯೋಜನೆಯಿಂದ ಅನುಕೂಲ: ಸಂಸದ ಪ್ರತಾ‍ಪ ಸಿಂಹ

Published:
Updated:

ಮೈಸೂರು: ಸಾಮಾನ್ಯ ವರ್ಗದವರೂ ಸೇರಿದಂತೆ ಬಿಪಿಎಲ್ ಕಾರ್ಡ್‌ದಾರರು ಹಾಗೂ ಎಸ್ಸಿ, ಎಸ್ಟಿ ವರ್ಗದವರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಸಂಸದ ಪ್ರತಾ‍ಪ ಸಿಂಹ ಹೇಳಿದರು.

ಆಧಾರ್‌ ಕಾರ್ಡ್ ಹಾಗೂ ಬ್ಯಾಂಕ್‌ ಖಾತೆ ದಾಖಲೆ ನೀಡಿದರೆ ಯಾರಿಗೆ ಬೇಕಾದರೂ ಅನಿಲ ಸಂಪರ್ಕ ನೀಡಲಾಗುವುದು. ಉಚಿತವಾಗಿ ಸಂಪರ್ಕ ಹಾಗೂ ಸ್ಟೌ ನೀಡಲಾಗುವುದು. ಮಿಕ್ಕಂತೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2014ರವರೆಗೆ ದೇಶದಲ್ಲಿ 13 ಕೋಟಿ ಅನಿಲ ಸಂಪರ್ಕವನ್ನು ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ನಾಲ್ಕೂವರೆ ವರ್ಷಗಳಲ್ಲಿ 12 ಕೋಟಿ ಅನಿಲ ಸಂಪರ್ಕ ನೀಡಲಾಗಿದೆ. ಅಲ್ಲದೇ, ಉಜ್ವಲ ಯೋಜನೆಯಲ್ಲಿ 4 ಕೋಟಿ ಬಡ ವರ್ಗದವರಿಗೂ ಅನಿಲ ಸಂಪರ್ಕವನ್ನು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 90 ಸಾವಿರ ಅನಿಲ ಸಂಪರ್ಕ ನೀಡಲಾಗಿದೆ. ಅದರಲ್ಲಿ 37 ಸಾವಿರ ಎಸ್ಸಿ, ಎಸ್ಟಿಗಳಿಗೆ ಸಂಪರ್ಕ ನೀಡಲಾಗಿದೆ. ಬರುವ ಏಪ್ರಿಲ್‌ ಒಳಗೆ ಎಲ್ಲ ಕುಟುಂಬಗಳಲ್ಲೂ ಅನಿಲ ಸಂಪರ್ಕವನ್ನು ನೀಡುವುದು ನಮ್ಮ ಗುರಿ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದಲ್ಲಿ 10 ಕೋಟಿ ಕುಟುಂಬಗಳಿಗೆ ತಲಾ ₹ 5 ಲಕ್ಷದಂತೆ ಆಯುಷ್ಮಾನ್ ಭಾರತ ಯೋಜನೆಯ ಅಡಿಯಲ್ಲಿ ವಿಮೆ ಸೌಲಭ್ಯ ಸಿಗಲಿದೆ ಎಂದರು.

ದೇಶದ 50 ಕೋಟಿ ಜನ ಇದರ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದಲ್ಲಿ 1.55 ಕೋಟಿ ಮಂದಿ ಇದರ ಲಾಭ ಅನುಭವಿಸಬಹುದು. ಶೇ 60ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ 40ರಷ್ಟು ರಾಜ್ಯ ಸರ್ಕಾರ ಇದರಲ್ಲಿ ಪಾಲುದಾರಿಕೆ ಹೊಂದಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

₹ 25.76 ಲಕ್ಷ ಪುಟಗೋಸಿಯೇ!
ಮೈಸೂರು: ಸಚಿವ ಪುಟ್ಟರಂಗಶೆಟ್ಟಿ ಕಚೇರಿಯ ಟೈಪಿಸ್ಟ್‌ ಬಳಿ ಪತ್ತೆಯಾಗಿರುವ ₹ 25.76 ಲಕ್ಷ ‍ಪುಟಗೋಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡುವುದು ಸರಿಯೇ. ನೂರಾರು ಕೋಟಿ ರೂಪಾಯಿ ಅವ್ಯವಹಾರ ಮಾಡುವ ಅವರಿಗೆ ಇವೆಲ್ಲಾ ಯಾವ ಲೆಕ್ಕ? ಎಂದು ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದರು.

ಆಂಜನೇಯ ಅವರು ಸಚಿವರಾಗಿದ್ದಾಗ ಪತ್ನಿ ಮೂಲಕ ಲಂಚ ಪಡೆಯುತ್ತಿದ್ದದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅವರಿಂದ ರಾಜೀನಾಮೆ ಪಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ₹25.75 ಲಕ್ಷ ಅವರ ದೃಷ್ಟಿಯಲ್ಲಿ ಪುಟಗೋಸಿಯೇ ಇರಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಪಣೀಶ್, ಬಿಜೆಪಿ ಮುಖಂಡ ಎಂ.ರಾಜೇಂದ್ರ, ನಗರಪಾಲಿಕೆ ಸದಸ್ಯ ವೇದಾವತಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !