ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ ರಸ್ತೆಯಲ್ಲಿ ಅಂಡರ್‌ಪಾಸ್‌

Last Updated 28 ಜನವರಿ 2019, 20:00 IST
ಅಕ್ಷರ ಗಾತ್ರ

ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಚಾಮರಾಜೇಂದ್ರ ಮೃಗಾಲಯ ಸುತ್ತ ಸದಾ ವಾಹನ ದಟ್ಟಣೆ. ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಮತ್ತಷ್ಟು ಕಿರಿಕಿರಿ. ಇದರಿಂದ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ಪ್ರವಾಸಿ ತಾಣಗಳಿಗೆ ಹೋಗುವವರಿಗೆ ತೊಂದರೆಯಾಗಿ ಪರಿಣಮಿಸಿದೆ.

ಮೃಗಾಲಯ ಸಮೀಪ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಬೇಕೇ ಅಥವಾ ಪಾರ್ಕಿಂಗ್‌ ತಾಣವನ್ನು ಬೇರೆಡೆ ಮಾಡಬೇಕೇ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ, ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಇಷ್ಟಾದರೂ ಸಮಸ್ಯೆ ಬಗೆಹರಿಯಲಿಲ್ಲ. ಜನರು ರಸ್ತೆ ದಾಟಲು ಕಷ್ಟಕರವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾರ್ಕಿಂಗ್‌ ಸ್ಥಳದಿಂದ ಮೃಗಾಲಯಕ್ಕೆ ಸಂಪರ್ಕ ಕಲ್ಪಿಸಲು ಅಂಡರ್‌ಪಾಸ್‌ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ.

ಮುಂಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಸಬ್‌ವೇ ನಿರ್ಮಿಸಲಿದ್ದು, 125 ವರ್ಷಗಳ ಇತಿಹಾಸ ಹೊಂದಿರುವ ಮೃಗಾಲಯಕ್ಕೆ ಸದ್ಯದಲ್ಲೇ ಹೊಸ ಸ್ಪರ್ಶ ಲಭಿಸಲಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರವು ₹ 1.95 ಕೋಟಿ ವೆಚ್ಚದಲ್ಲಿ ರಸ್ತೆಯಲ್ಲಿ ಪಾದಚಾರಿ ಸಬ್‌ವೇ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಬಂಧ ಟೆಂಡರ್‌ ಕರೆದಿದ್ದು, 165 ದಿನಗಳಲ್ಲಿ ಕಾಮಗಾರಿ ಮುಗಿಸಲು ಗಡುವು ವಿಧಿಸಿದೆ. ಸಬ್‌ವೇನಲ್ಲಿ ಒಳಹೋಗುವ ಹಾಗೂ ಹೊರಬರುವ ಮಾರ್ಗಗಳು ಇರಲಿವೆ. ಕಾಮಗಾರಿ ಕೈಗೆತ್ತಿಕೊಳ್ಳಲು ಮಹಾನಗರ ಪಾಲಿಕೆ ಈಗಾಗಲೇ ಒಪ್ಪಿಗೆ ನೀಡಿದೆ.

ವಾಹನ ದಟ್ಟಣೆಯಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು, ವೃದ್ಧರಿಗೆ ಪಾರ್ಕಿಂಗ್‌ ಸ್ಥಳದಿಂದ ರಸ್ತೆ ದಾಟಿ ಮೃಗಾಲಯಕ್ಕೆ ತೆರಳಲು ಕಷ್ಟಕರವಾಗಿದೆ. ವಾಹನಗಳು ಹಾದು ಹೋಗುವವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಚಾಮುಂಡಿಬೆಟ್ಟಕ್ಕೆ ತೆರಳುವ ಬಹುತೇಕ ವಾಹನಗಳು ಇದೇ ರಸ್ತೆಯಲ್ಲಿ ಸಾಗುತ್ತವೆ. ಅಲ್ಲದೇ, ಗಾಲ್ಫ್‌ ಕೋರ್ಸ್‌, ಟರ್ಫ್‌ ಕ್ಲಬ್, ಮಾಲ್‌ ಆಫ್‌ ಮೈಸೂರು, ಆಡಳಿತ ತರಬೇತಿ ಸಂಸ್ಥೆ, ಸಿಆರ್‌ಆರ್‌, ಆಲನಹಳ್ಳಿ ಹಾಗೂ ಬಡಾವಣೆಗಳಿಗೆ ತೆರಳುವವರು ಇದೇ ರಸ್ತೆ ಬಳಸುತ್ತಾರೆ. ರಸ್ತೆ ಕಿರಿದಾಗಿರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

‘ಅಂಡರ್‌ಪಾಸ್‌ ನಿರ್ಮಾಣ ಬಹಳ ಹಿಂದಿನ ಯೋಜನೆ. ಅದನ್ನು ಕಾರ್ಯರೂಪಕ್ಕೆ ತರಲು ಒಪ್ಪಿಗೆ ಲಭಿಸಿದ್ದು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯಿಂದ ಮೃಗಾಲಯ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ ನಿರ್ಮಾಣವಾಗಿದೆ. ಅಂಡರ್‌ಪಾಸ್‌ ನಿರ್ಮಾಣವಾದರೆ ಈ ಸಮಸ್ಯೆ ತುಸು ತಗ್ಗಬಹುದು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಹೇಳುತ್ತಾರೆ.

ಈಗಾಗಲೇ ಮೃಗಾಲಯ ಹಾಗೂ ಕಾರಂಜಿ ಕೆರೆ ವೀಕ್ಷಣೆಗೆ ಒಂದೇ ಕಡೆ ಟಿಕೆಟ್‌ ಖರೀದಿಸಿ, ಪ್ರವೇಶ ಕಲ್ಪಿಸಲಾಗುತ್ತಿದೆ.

ಈ ಹಿಂದೆ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಪ್ರತ್ಯೇಕ ಪ್ರವೇಶದ್ವಾರ ಹಾಗೂ ಪ್ರವೇಶ ಶುಲ್ಕ ವ್ಯವಸ್ಥೆ ಇತ್ತು. ಜನದಟ್ಟಣೆ ಕಾರಣ ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಟಿಕೆಟ್‌ ಪಡೆಯಲು ಕಷ್ಟವಾಗುತಿತ್ತು. ಅಲ್ಲದೆ, ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗುತಿತ್ತು.

ಉದ್ದೇಶಿತ ಸಬ್‌ವೇ ನಿರ್ಮಾಣ ಆರಂಭವಾದರೆ ಕಾಮಗಾರಿಗಾಗಿ ಕೆಲ ದಿನ ಮುಖ್ಯ ರಸ್ತೆ ಬಂದ್‌ ಮಾಡಬೇಕಾಗುತ್ತದೆ. ಇದರಿಂದ ಚಾಮುಂಡಿಬೆಟ್ಟ ಮತ್ತು ಇನ್ನಿತರ ಸ್ಥಳಗಳಿಗೆ ಮೃಗಾಲಯದ ಹಿಂಬದಿಯ ರಸ್ತೆ ಹಾಗೂ ಎಂ.ಜಿ. ರಸ್ತೆಯಲ್ಲಿ ವಾಹನಗಳು ಸಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT