ಜಾತಿ, ಹಣದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು

7
ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ವಿಷಾದ

ಜಾತಿ, ಹಣದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು

Published:
Updated:
Deccan Herald

ಮೈಸೂರು: ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯ ಕ್ಷೀಣಿಸಿದ್ದು ಹಣ ಹಾಗೂ ಜಾತಿ ತಾಂಡವವಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.

ಹಳೆಬೇರು ಹೊಸ ಚಿಗುರು ಗಾಯಕರ ಗೆಳೆಯರ ಬಳಗವು ಭಾನುವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕೋಟ್ಯಂತರ ರೂಪಾಯಿಗಳ ಬಜೆಟ್‌ಗಳು ಮಂಡಣೆಯಾಗುತ್ತವೆ. ಆದರೆ, ಅವುಗಳ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗಳೇ ನಡೆಯುವುದಿಲ್ಲ. ಇಲ್ಲಿ ಅರ್ಥಶಾಸ್ತ್ರ ಹಾಗೂ ವಾಣಿಜ್ಯ ನಿರ್ವಹಣೆ ವಿಭಾಗಗಳು ಏನು ಮಾಡುತ್ತಿವೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಶೈಕ್ಷಣಿಕ ಕಾರ್ಯವನ್ನು ಮಾಡುವುದನ್ನು ಬಿಟ್ಟು ಜಾತಿ ರಾಜಕಾರಣ ಮಾಡುತ್ತ, ಹಣದ ಲೆಕ್ಕಾಚಾರದಲ್ಲಿ ನಮ್ಮ ಶಿಕ್ಷಕರು ಮುಳುಗಿರುವುದು ಹೇಸಿಗೆ ತರುತ್ತಿದೆ’ ಎಂದು ನೋವಿನಿಂದ ಹೇಳಿದರು.

ವಿ.ವಿ.ಗಳಲ್ಲಿನ ಅನೇಕರು ಪಿಎಚ್‌.ಡಿ ಮಾಡಿರುತ್ತಾರೆ. ಆದರೆ, ಅವೆಲ್ಲವೂ ನಕಲಿಯೂ ಕೆಲಸಕ್ಕೆ ಬಾರದ ವಿಷಯವನ್ನೂ ಒಳಗೊಂಡಿರುತ್ತವೆ. ವಿದೇಶಿ ವಿಷಯಗಳ ಬಗ್ಗೆ ಸ್ಥಳೀಯ ವಿ.ವಿ.ಗಳು ಸಂಶೋಧನೆ ಮಾಡುವ ಅಗತ್ಯವಾದರೂ ಏನಿದೆ? ಇಲ್ಲಿನ ಸ್ಥಳೀಯ ಸಮಸ್ಯೆಗಳೇ ಸಾಕಷ್ಟಿವೆ. ಇಲ್ಲಿನ ಗ್ರಾಮ ಪಂಚಾಯಿತಿ ವ್ಯವಸ್ಥೆಯ ಬಗ್ಗೆ ಸಂಶೋಧನೆ ನಡೆಸಲಿ, ರಾಜಕೀಯ ವಿಶ್ಲೇಷಣೆ ಮಾಡಲಿ. ಅದನ್ನು ಬಿಟ್ಟು ಸ್ವಾರ್ಥಕ್ಕಾಗಿ ಪಿಎಚ್‌.ಡಿ ಮಾಡುವುದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು.

‘ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ. ಆದರೆ, ಗಾಂಧಿಯನ್ನು ‘ಓಲ್ಡ್‌ ಮ್ಯಾನ್‌’ ಎಂದು ವಿ.ವಿ.ಗಳಲ್ಲಿನ ಯುವಕರು ಗೇಲಿ ಮಾಡುವುದನ್ನು ಕೇಳಿ ಬೇಸರಗೊಂಡಿದ್ದೇನೆ. ಇಂತಹ ಪರಿಸ್ಥಿತಿ ದೇಶದಲ್ಲಿ ಬಂದಿರುವುದು ದುರಂತವೇ ಸರಿ’ ಎಂದು ವಿಷಾದ ವ್ಯಕ್ತಪಡಿಸಿದರು.

ಉತ್ತಮ ಆಡಳಿತವನ್ನು ಸ್ಥಾಪಿಸುವತ್ತ ಯುವಜನತೆ ಪಣ ತೊಡಬೇಕು. ಚುನಾವಣೆಗಳು ಪಾರದರ್ಶಕವಾಗಿರಬೇಕು. ವಿಧಾನಗಳು ಬದಲಾಗಬೇಕು. ಇಲ್ಲವಾದರೆ ಜಾತಿ, ಹಣದ ಆಧಾರದ ಮೇಲೆ ನಡೆಯುವ ಚುನಾವಣೆಗಳಿಗೆ ಕೊನೆಯೇ ಇರುವುದಿಲ್ಲ ಎಂದರು.

ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೌಲ್ಯಗಳ ನಾಶದಿಂದ ದೇಶ ಅಡ್ಡದಾರಿ ಹಿಡಿದಿದೆ. ತೃಪ್ತಿ ಹಾಗೂ ಮಾನವೀಯತೆಯ ಕೊರತೆಯಿಂದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಬೇಸರದಿಂದ ಹೇಳಿದರು.

ಪತ್ರಕರ್ತ ಸಿ.ಕೆ.ಮಹೇಂದ್ರ, ಲೇಖಕ ಗುಬ್ಬಿಗೂಡು ರಮೇಶ್‌, ವೈದ್ಯ ಮೆಹಬೂಬ್‌ ಖಾನ್‌, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜ್‌ ಅತಿಥಿಯಾಗಿದ್ದರು. ಬಳಗದ ಪ್ರಧಾನ ಕಾರ್ಯದರ್ಶಿ ರೇವಣ್ಣ, ಅಧ್ಯಕ್ಷ ಡಾ.ಡಿ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !