ಮಂಗಳವಾರ, ನವೆಂಬರ್ 12, 2019
27 °C
ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ

ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ಈಗಿರುವ ಸಮಸ್ಯೆಗಳ ನಡುವೆ ಮತ್ತೊಂದು ಸೇರ್ಪಡೆ!

Published:
Updated:
Prajavani

ಮೈಸೂರು: ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯಗಳಲ್ಲಿ ಹಲವು ಸಮಸ್ಯೆಗಳು ಹಿಂದಿನಿಂದಲೂ ಇದ್ದಿದ್ದೇ. ಈಗ ವಿದ್ಯಾರ್ಥಿಗಳಿಗೆ ಜೇನಿನ ಪೀಡೆ ಶುರುವಾಗಿದೆ!

ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯ ಬ್ಲಾಕ್‌– 1ರಲ್ಲಿ ಹಲವು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ಸ್ನಾನಕ್ಕೆ ನೀರಿಲ್ಲದೇ ಇರುವುದು, ಕ್ಯಾಂಟೀನ್‌ನಲ್ಲಿ ಸ್ವಚ್ಛತೆಯ ಕೊರತೆ– ಹೀಗೆ, ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ, ಈಗ ಕಾಣಿಸಿಕೊಂಡಿರುವುದು ಜೇನಿನ ಸಮಸ್ಯೆ. ಹಾಸ್ಟೆಲ್‌ನ ಕಿಟಕಿಗಳು, ಪಡಸಾಲೆಗಳಲ್ಲಿ ಜೇನುಗೂಡುಗಳು ಕಟ್ಟಿದ್ದು, ವಿದ್ಯಾರ್ಥಿಗಳು ಭಯದಿಂದ ಕಾಲ ಕಳೆಯುವಂತಾಗಿದೆ.

ಕೊಠಡಿಗಳನ್ನೇ ತೊರೆದರು: ‘ಇದು ಮೂರು ತಿಂಗಳಿನಿಂದ ಇರುವ ಸಮಸ್ಯೆ. ನಿರಂತರ ಮಳೆ ಶುರುವಾದ ಬಳಿಕ ಜೇನುಗಳು ಹತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಗೂಡುಗಳನ್ನು ಕಟ್ಟಿದವು. ವಿದ್ಯಾರ್ಥಿಗಳ ಕೊಠಡಿಗಳ ಕಿಟಕಿ ಬಳಿ ಗೂಡು ಕಟ್ಟಿರುವ ಕಾರಣ ರಾತ್ರಿ ಹೊತ್ತು ಬೆಳಕಿಗೆ ಆಕರ್ಷಿತವಾಗಿ ಕೊಠಡಿಯ ಒಳಗೂ ಬರುತ್ತಿವೆ. ಇದಕ್ಕೆ ಹೆದರಿರುವ ವಿದ್ಯಾರ್ಥಿಗಳು ಕೊಠಡಿಯನ್ನೇ ತೊರೆದಿದ್ದಾರೆ. ಇದರಿಂದ ಸ್ನೇಹಿತರ ಕೊಠಡಿಗಳಲ್ಲಿ ಕಾಲ ದೂಡುವಂತಾಗಿದೆ’ ಎಂದು ವಿದ್ಯಾರ್ಥಿ, ಕೊಳ್ಳೇಗಾಲ ಮೂಲದ ಶಿವು ಬಂಡಳ್ಳಿ ‘ಪ್ರಜಾವಾಣಿ’ ಜತೆಗೆ ಬೇಸರ ಹಂಚಿಕೊಂಡರು.

‘ನಾವು ದೂರದ ಊರಿನಿಂದ ಬಂದು ಹಾಸ್ಟೆಲ್‌ನಲ್ಲಿ ನೆಲೆಸಿದ್ದೇವೆ. ಈ ರೀತಿಯ ಸಮಸ್ಯೆಗಳಿದ್ದರೆ ವ್ಯಾಸಂಗ ಮಾಡುವುದು ಹೇಗೆ? ಆತಂಕದಲ್ಲಿ ಕಾಲ ದೂಡುವಂತಹ ಪರಿಸ್ಥಿತಿ ನಮಗೆ ಎದುರಾಗಿದೆ’ ಎಂದು ಅವರು ಹೇಳಿದರು.

ಸ್ಪಂದನೆಯಿಲ್ಲ: ‘ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನಿರಂತರವಾಗಿ ದೂರು ನೀಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಗಮನ ಹರಿಸಿ ಓದಿಗೆ ಅವಕಾಶ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿ ನಿಂಗರಾಜು ಮನವಿ ಮಾಡಿದರು.

ಪೀಡಿಸುವ ನಾಯಿಗಳು! ಹಾಸ್ಟೆಲ್‌ ಕೊಠಡಿಗಳ ಒಳಗೆ ತಿಗಣೆ ಕಾಟವಾದರೆ, ಹೊರಗಡೆ ಬೀದಿನಾಯಿಗಳ ತೊಂದರೆ ವಿದ್ಯಾರ್ಥಿಗಳಿಗೆ ಹೆಚ್ಚಾಗಿದೆ.

‘ಸಂಜೆಯಾಗುತ್ತಲೂ ಹಾಸ್ಟೆಲ್‌ನ ಹೊರಗೆ ಗುಂಪುಗೂಡುವ ನಾಯಿಗಳು ವಿದ್ಯಾರ್ಥಿಗಳನ್ನು ಅಟ್ಟಾಡಿಸುತ್ತವೆ. ರಾತ್ರಿ ಹೊತ್ತು ಊಳಿಟ್ಟು ಗಲಾಟೆ ಮಾಡುತ್ತವೆ. ಇದರಿಂದ ಹಾಸ್ಟೆಲ್‌ ವಾಸ ನಮಗೆ ನರಕ ಉಂಟುಮಾಡುತ್ತಿದೆ’ ಎಂದು ವಿದ್ಯಾರ್ಥಿ ನಿಂಗರಾಜು ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)