ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ ತಂದ ಸಂಕಷ್ಟ...

ಜೂನ್‌ನಿಂದ ಅಕ್ಟೋಬರ್‌ವರೆಗೆ ಸುರಿದ ವರ್ಷಧಾರೆಗೆ 542 ಮನೆಗಳಿಗೆ ಹಾನಿ, ಇಬ್ಬರು ಸಾವು
Last Updated 25 ಅಕ್ಟೋಬರ್ 2021, 6:20 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ರೈತರನ್ನು, ಸಾಮಾನ್ಯ ನಾಗರಿಕರನ್ನು ಕಂಗೆಡಿಸಿದೆ. ಅಲ್ಪ ಪ್ರಮಾಣದ ಬೆಳೆ ಹಾನಿಯಾಗಿದೆ. ಮನೆ ಗೋಡೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ; ಆಟೊರಿಕ್ಷಾ ಮೇಲೆ ಮರ ಉರುಳಿ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

‌‌‌‌‌‌ಸೆ.30ರ ರಾತ್ರಿ ಸುರಿದ ಮಳೆಗೆ, ಮೈಸೂರು ನಗರದ ಫೈವ್‌ಲೈಟ್ ವೃತ್ತದ ಬಳಿ ಚಲಿಸುತ್ತಿದ್ದ ಆಟೊರಿಕ್ಷಾ ಮೇಲೆ ಮರ ಬುಡಸಮೇತ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರವನ್ನೂ ವಿತರಿಸಲಾಗಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮದಲ್ಲಿ ಈಚೆಗೆ ಬಿದ್ದ ಮಳೆಯಿಂದ ಕೆಂಪೇಗೌಡ ಎಂಬುವವರ ಮನೆ ಗೋಡೆ ಕುಸಿದು ಪಕ್ಕದ ಮನೆ ಮೇಲೆ ಬಿದ್ದುದರಿಂದ ಬೋರೇಗೌಡ (55) ಮೃತಪಟ್ಟರು. ಮೈಸೂರು ತಾಲ್ಲೂಕು ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಸತತ ಮಳೆಯಿಂದಾಗಿ ರೈತರು ಬೆಳೆದಿದ್ದ ಟೊಮೊಟೊ, ಎಲೆಕೋಸು, ಬೀನ್ಸ್‌ ಸೇರಿದಂತೆ ತರಕಾರಿ ಬೆಳೆ ಶೀತ ಹಿಡಿದು ಕೊಳೆಯುತ್ತಿವೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹುನುಗನಹಳ್ಳಿ-ಮನುಗನಹಳ್ಳಿ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಗೆ ಉಮೇಶ್, ರವಿ ಎಂಬುವರ ಬಾಳೆ ನೆಲಕ್ಕುರುಳಿದೆ. ಬೆಳಗನಹಳ್ಳಿ ರಸ್ತೆಯ ಲ್ಲಿರುವ ಪಿಚ್ಚಿಮುತ್ತು ಜಮೀನಿನಲ್ಲಿನ ಕಬ್ಬು ಸಂಪೂರ್ಣ ನೆಲಕ್ಕಚಿದೆ.

‘ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಬಾಳೆ, ರಾಗಿ, ಭತ್ತ ಸೇರಿದಂತೆ 117 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈಗಾಗಲೇ 60 ಎಕರೆಗೆ ₹4.47 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ ತಿಳಿಸಿದ್ದಾರೆ.

ಹುಣಸೂರು ತಾಲ್ಲೂಕಿನಲ್ಲಿ ಮಳೆಗೆ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಿದ್ದು, ಉದ್ದೂರು ಕಾವಲ್, ಬಿ.ಆರ್.ಕಾವಲ್, ಬನ್ನಿಕುಪ್ಪೆ ಗ್ರಾಮದಲ್ಲಿ ‌ತಲಾ ಒಂದು ಮನೆ ಹಾನಿಗೊಂಡಿವೆ. ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

‘ತಾಲ್ಲೂಕಿನ ಕೆಲ ಭಾಗದಲ್ಲಿ ರೈತರು ಫಸಲು ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 68.57 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 62.85 ಸೆಂ.ಮೀ ವರ್ಷಧಾರೆಯಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್ ಮಾಹಿತಿ ನೀಡಿದರು.

ತಿ.ನರಸೀಪುರ ತಾಲ್ಲೂಕಿನ‌ ಹಲವು ಕಡೆ ಮನೆಗಳಿಗೆ ಹಾನಿಯಾಗಿದೆ. ಮುಂಗಾರು ಮಳೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಾಗಿದ್ದು, ತಲಕಾಡು ಭಾಗದಲ್ಲಿ ನಾಲೆಯ ನೀರಿನ ಹರಿವು ಹೆಚ್ಚಾಗಿ, ಗದ್ದೆಗಳಿಗೆ ಹರಿದು ಭತ್ತದ ಬೆಳೆಗೆ ತೊಂದರೆಯಾಗಿತ್ತು.

‘ಜಿಲ್ಲೆಯಲ್ಲಿ ಮಳೆಯಿಂದ ಹೆಚ್ಚಾಗಿ ರಸ್ತೆಗಳು ಹಾನಿಗೊಳಗಾಗಿವೆ, ಕಳೆದ ತಿಂಗಳು ಅಧಿಕಾರಿಗಳ ಸಭೆ ಮಾಡಿ ನಿರ್ದೇಶನ ನೀಡಲಾಗಿದ್ದು, ಸದಾ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಂಜನಗೂಡು ತಾಲ್ಲೂಕಿನಲ್ಲಿ ಕಳೆದ ಬುಧವಾರ ಸುರಿದ ಮಳೆಗೆ 15ಕ್ಕೂ ಹೆಚ್ಚು ಮನೆಗಳು ಕುಸಿದು, ಅಪಾರ ಪ್ರಮಾಣದಲ್ಲಿ ಬೆಳೆ
ನಷ್ಟವಾಗಿದೆ.

ಕೆ.ಆರ್.ನಗರ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಅಕ್ಟೋಬರ್‌ ತಿಂಗಳಿನಲ್ಲಿ ಬಿದ್ದ ಭಾರಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.

(ಪ್ರಜಾವಾಣಿ ತಂಡ: ರಮೇಶ ಕೆ., ಎಸ್‌.ಎಸ್‌.ಸಚ್ಚಿತ್‌, ಪಂಡಿತ್‌ ನಾಟೀಕರ್‌, ಎಂ.ಮಹದೇವ್‌, ಪ್ರಕಾಶ್‌, ಸತೀಶ್‌ ಆರಾಧ್ಯ, ಬಿ.ಆರ್‌.ಗಣೇಶ್‌, ಬಿಳಿಗಿರಿ, ರವಿಕುಮಾರ್)

ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

ಕಳೆದ ಬುಧವಾರ ರಾತ್ರಿ ಸುರಿದ ಮಳೆಗೆ ಮೈಸೂರಿನ ಕುವೆಂಪುನಗರ, ಶ್ರೀರಾಂ
ಪುರ ಇಸ್ಕಾನ್‌ ಹಿಂಭಾಗ ಎಸ್‌ಬಿಎಂ ಕಾಲೊನಿ, ಸುಭಾಷ್‌ನಗರ, ಸತ್ಯನಗರ, ಮಧು
ವನ, ಶಾಂತಿನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿತ್ತು.

ಚಾಮುಂಡಿಬೆಟ್ಟದಲ್ಲಿ ಭೂಕುಸಿತ ಸಂಭವಿಸಿ ನಂದಿ ವಿಗ್ರಹಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯಲ್ಲಿ ಭೂಮಿ ಕುಸಿದಿತ್ತು.

‘ಬಹಳಷ್ಟು ಕಡೆ ಜನರು ಮನೆ ಮೇಲೆ ಬೀಳುವ ಮಳೆ ನೀರನ್ನು ಚರಂಡಿ ಸೇರುವಂತೆ ಮಾಡಿರುವುದೇ ಮಳೆಗಾಲದಲ್ಲಿ ಸಮಸ್ಯೆಯಾಗಲು ಮುಖ್ಯ ಕಾರಣವಾಗಿದೆ. ಚರಂಡಿಗೆ ಹೆಚ್ಚಿನ ಪ್ರಮಾಣದ ನೀರು ಹೋಗಿ ಒಂದು ಕಡೆ ಕಟ್ಟಿಕೊಳ್ಳುತ್ತದೆ. ಮುಂದೆ ಹೋಗಲು ಸಾಧ್ಯವಾಗದೇ ರಸ್ತೆ ಮೇಲೆ ಹರಿದು, ತಗ್ಗು ಪ್ರದೇಶದ ಮನೆಗಳಿಗೂ ನುಗ್ಗುತ್ತದೆ’ ಎಂದು ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ ವಿಭಾಗ) ಮಹೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.‌

‘ಪಾಲಿಕೆ ವತಿಯಿಂದ ಹಳೆಯ ಸರ್ಕಾರಿ ಕಟ್ಟಡಗಳನ್ನು ಪಟ್ಟಿ ಮಾಡಿ ಗುರುತಿಸಲಾಗಿದೆ. ಹೆಚ್ಚು ಮಳೆ ಬಂದರೆ ಸಮಸ್ಯೆಯಾಗದಂತೆ ಹೂಳು ತೆಗೆಯುವ ಕೆಲಸ ಮಡುತ್ತೇವೆ. ಐದು ಜೆಟ್ಟಿಂಗ್‌ ಯಂತ್ರಗಳಿವೆ, ಅಪಾಯಕಾರಿ ಮರಗಳನ್ನು ಕಡಿಯಲಾಗಿದೆ. ಮಳೆ ಹಾನಿ ತಡೆಯಲು ಶಕ್ತಿ ಮೀರಿ ಕೆಲಸ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ವಿಪತ್ತು ನಿರ್ವಹಣೆಗೆ ಕಾರ್ಯ ಯೋಜನೆ

‘ವಿಪತ್ತು ನಿರ್ವಹಣೆಗಾಗಿ ಪರಿಷ್ಕೃತ ಕಾರ್ಯ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಗ್ನಿಶಾಮಕ ಠಾಣೆಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ. ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ತಹಶೀಲ್ದಾರ್ ಹಂತದಲ್ಲೇ ಪರಿಹಾರ ಸಿಗುತ್ತದೆ. ಹಣದ ಕೊರತೆಯಿಲ್ಲ’ ಎಂದುಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT