ಶನಿವಾರ, ಅಕ್ಟೋಬರ್ 24, 2020
27 °C
ಉತ್ತರಪ್ರದೇಶ ಘಟನೆ ತಲೆತಗ್ಗಿಸುವ ಸಂಗತಿ

ಉ.ಪ್ರ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ: ಕಾಂಗ್ರೆಸ್ ಮುಖಂಡ ದೇವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಉತ್ತರ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯನ್ನು ಅಲ್ಲಿನ ಮುಖ್ಯಮಂತ್ರಿಗಳು ಹಗುರವಾಗಿ ಪರಿಗಣಿಸಿರುವುದು ತಲೆ ತಗ್ಗಿಸುವ ಸಂಗತಿ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ದಸಂಸ, ಕಾಂಗ್ರೆಸ್ ಮತ್ತು ತಾಲ್ಲೂಕು ವಾಲ್ಮೀಕಿ ಸಮುದಾಯದ ಸಂಘದವರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಹಾಥರಸ್ ಜಿಲ್ಲೆಯಲ್ಲಿ ಅಮಾನವೀಯವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರೂ ಆರೋಪಿಗಳ ಪರವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬ್ಯಾಟಿಂಗ್ ಮಾಡುತ್ತಿರುವುದು ಬಿಜೆಪಿ ಮಹಿಳೆಯರಿಗೆ ನೀಡುವ ರಕ್ಷಣೆ ಹಾಗೂ ಗೌರವ ಕಾಣಿಸುತ್ತಿದೆ’ ಎಂದರು.

ದಸಂಸ ಮುಖಂಡ ರತ್ನಾಪುರಿ ಪುಟ್ಟಸ್ವಾಮಿ ಮಾತನಾಡಿ, ‘ಉತ್ತರಪ್ರದೇಶದಲ್ಲಿ ಕಾನೂನು ಬಾಹಿತ ಚಟುವಟಿಕೆ ನಡೆಸುತ್ತಿರುವ ಕ್ರಿಮಿನಲ್‌ಗಳಿಗೆ ಆಶ್ರಯ ತಾಣವಾಗಿದ್ದು, ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದು ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕು’ ಎಂದರು.

‘ಉತ್ತರಪ್ರದೇಶದಲ್ಲಿ ಪರಿಶಿಷ್ಟ, ಅಲ್ಪಸಂಖ್ಯಾತ ಮಹಿಳೆಯರು ಭಯಮುಕ್ತವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕಾದರೆ ಆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ  ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ಅಸ್ವಾಳು ಕೆಂಪೇಗೌಡ ಹೇಳಿದರು.

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವುದರಿಂದ ಇತರರು ಎಚ್ಚೆತ್ತುಕೊಳ್ಳಲಿದ್ದಾರೆ. ಈ ದಿಕ್ಕಿನಲ್ಲಿ ನ್ಯಾಯಾಲಯ ಗಂಭೀರವಾಗಿ ಚಿಂತನೆ ನಡೆಸಿ ನ್ಯಾಯ ನೀಡಬೇಕು ಎಂದು ದಸಂಸ ಮುಖಂಡ ಡೇವಿಡ್ ರತ್ನಾಪುರಿ ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಭಾಗ್ಯಮ್ಮ, ಶಿವಕುಮಾರ್, ಹರೀಶ್‌, ಕಾಂಗ್ರೆಸ್ ಮುಖಂಡರಾದ ಜಿ.ಪಂ. ಸದಸ್ಯ ಕಟ್ಟನಾಯಕ, ಶ್ರೀನಿವಾಸ್‌, ರಘು, ಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷ ರಮೇಶ್, ಮಧು ಮತ್ತು ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.