ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಮಗಳ ಬದುಕೇ ‘ಉರಿಯ ಉಯ್ಯಾಲೆ ’

ನಾಟಕ ಮುನ್ನೊಟ
Last Updated 13 ಸೆಪ್ಟೆಂಬರ್ 2019, 14:07 IST
ಅಕ್ಷರ ಗಾತ್ರ

ನಗರದ ಕಿರು ರಂಗಮಂದಿರದಲ್ಲಿ ಸೆ.19ರಂದು ಸಂಜೆ 7ಕ್ಕೆ ರಂಗಯಾನ ತಂಡದ ಕಲಾವಿದರು ‘ಉರಿಯ ಉಯ್ಯಾಲೆ’ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ತಮ್ಮ ಬರಹದ ಮುಖೇನ ವಿಶೇಷ ಸ್ಥಾನದಲ್ಲಿ ನಿಲ್ಲುವ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಈ ನಾಟಕವನ್ನು ಮೈಸೂರು ರಂಗಾಯಣದ ಹಿರಿಯ ಕಲಾವಿದೆ ಬಿ.ಎನ್. ಶಶಿಕಲಾ ನಿರ್ದೇಶಿಸಿದ್ದಾರೆ.

ನಾಟಕದಲ್ಲಿ ಪಾತ್ರಧಾರಿಗಳೆಲ್ಲರೂ ಮಹಿಳೆಯರೇ. ಮಹಿಳೆಯರೇ ಅಭಿನಯಿಸಿ ಹಾಗೂ ನಿರ್ದೇಶಿಸಿರುವ ಹೆಗ್ಗಳಿಕೆ ಇದರದ್ದು. 8 ಪಾತ್ರಗಳ ನಾಟಕ ಹಲವು ನೆಲೆಗಳಲ್ಲಿ ಪ್ರಶ್ನಾರ್ಹವಾಗಿ ಬಿಡುತ್ತದೆ.

ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿ ಬೇರೇನೂ ಇಲ್ಲ ಎಂಬ ಮಾತಿದೆ. ಅದೇ ಭಾರತ ಎಲ್ಲ ಸ್ತರಗಳಲ್ಲೂ ಸ್ವೀಕಾರಾರ್ಹವಲ್ಲ ಎಂಬ ಮಾರ್ಮಿಕ ತಾಕಲಾಟವೂ ಇದೆ. ಭಾರತದಲ್ಲಿ ಯಾರು ಅತಿ ಹೆಚ್ಚು ನೋವುಂಡವರು? ಕಾರುಣ್ಯ, ದಯೆಯ ನೋಟ, ಸಮಾಜ ಅಷ್ಟು ಸುಲಭವಾಗಿ ಎಲ್ಲರೆಡೆಗೂ ಚೆಲ್ಲುವುದಿಲ್ಲ. ಹಾಗೆ ಶ್ರೇಷ್ಠ ಕೃತಿ ಭಾರತದಲ್ಲಿ ಕೂಡ ವಿಧಿಯಾಟಕ್ಕೆ ನಲುಗಿ ಅತ್ಯಂತ ದುಮ್ಮಾನ ಉಂಡವರಾರು? ಭಾರತವನ್ನು ಬಹುವಾಗಿ ಅರ್ಥೈಸಿದವರು, ಸಮರ್ಥಿಸಿಕೊಂಡವರು, ವ್ಯಾಖ್ಯಾನಿಸಿ ಅಂತರಾಳದ ಅಳಲನ್ನು, ಅದರ ಹುಳುಕನ್ನು ಹೆಕ್ಕಿ ತೆಗೆದು ವಾಚಿಸಿದವರಿದ್ದಾರೆ. ಅಂತೆಯೇ ಈ ನಾಟಕದಲ್ಲಿ ಕೇಳಿಬರುವುದು ಅತೀ ನೊಂದವರ ನೋವು.

ಹೆಣ್ಣು ಎಂದಾಗಲೇ ನಮ್ಮ ಸಮಾಜ ಅವಳೆಡೆಗೆ ನೋಡುವ ಪರಿ ನಿಕೃಷ್ಟ. ಮಹಾಭಾರತದಲ್ಲಿ ನೂರು ಮಕ್ಕಳ ಹೆತ್ತ ಗಾಂಧಾರಿ ಎಲ್ಲ ಮಕ್ಕಳನ್ನು ಕಳೆದುಕೊಂಡದ್ದು ದುರಂತವೋ? ಮೊಮ್ಮಕ್ಕಳ ಕಾದಾಟದಲ್ಲಿ ಶರಶಯ್ಯೆಯಲ್ಲೇ ನರಳಿ ಸಾಯುವ ಭೀಷ್ಮ ಪಿತಾಮಹ ಅತೀ ನೋವುಂಡವನಾಗುತ್ತಾನೋ ಅಥವಾ ಜಾತಿ ನಿಂದನೆಗೆ ಒಳಗಾಗಿ ಸೂತಪುತ್ರ ಎಂಬ ಅವಮಾನದಲ್ಲೇ ಸ್ವಂತ ಅಣ್ಣ- ತಮ್ಮಂದಿರನ್ನು ಕೊಲ್ಲುವ, ಸಂಕಟಕ್ಕೀಡಾಗುವ ಕರ್ಣ ಅತೀ ದುಃಖಿಯೋ? ತಂದೆ ದ್ರುಪದನ ಸೇಡಿನ ಕಿಡಿಯಾಗಿಯೇ ಮೈತಳೆದವಳು ಈ ದ್ರೌಪದಿ. ಧರ್ಮರಾಯನ ಜೂಜಿಗೆ ಪಣವಾದವಳು; ರಾಣಿಯಾಗಿ ಮೆರೆಯುತ್ತಿರುವ ಹೊತ್ತಲ್ಲೇ ಬೀದಿಗೆ ಬಿದ್ದು, ದುಶ್ಶಾಸನ ಧೂರ್ತವರ್ತನೆಗೆ ಗುರಿಯಾಗಿ, ತುಂಬಿದ ಸಭೆಯಲ್ಲಿ ಬೆತ್ತಲಾಗಬೇಕಾದ ನೋವಿಗೆ ಸಿಕ್ಕವಳು. ವನವಾಸ, ಅಜ್ಞಾತವಾಸ, ಕೀಚಕನ ಕೇಡುಗಣ್ಣಿನ ನೋಟ– ಇಂಥ ಹಲವಾರು ಮುಳ್ಳಿನ ದಾರಿಯಲ್ಲೇ, ದಳ್ಳುರಿಯ ಬೆಂಕಿಯಲ್ಲೇ ಬೇಯುತ್ತ ಬದುಕಿದವಳು. ಇನ್ನೇನು ಕೌರವ ಸತ್ತ, ಯುದ್ಧ ಮುಗಿಯಿತು ಎನ್ನುವ ಹೊತ್ತಲ್ಲೇ ತನ್ನ ಪ್ರೀತಿಯ ಐವರು ಮಕ್ಕಳನ್ನು ಬೆಳಗಾಗುವುದರೊಳಗಾಗಿ ಕಳೆದುಕೊಂಡ ತಾಯಿ. ಮುಖಗಳೇ ಇಲ್ಲದ ಮುಂಡ ಗಳನ್ನು ನೋಡಬೇಕಾದ ಕರುಳುಹಿಂಡುವ ಸನ್ನಿವೇಶಕ್ಕೆ ಎದುರಾದ ದ್ರೌಪದಿಯ ಒಡಲ ಬೇಗೆಯ ಮುಂದೆ ಇನ್ನೊಂದು ಬೇಗೆ ಇರಲು ಹೇಗೆ ಸಾಧ್ಯ? ನೋವು, ಸಂಕಟ, ಸಿಟ್ಟು, ಅಪಮಾನ– ಇಂಥ ನೂರಾರು ಉರಿಯ ಜ್ವಾಲೆಗಳಲ್ಲಿ ಜೀಕಬೇಕಾದ ಬೆಂಕಿಮಗಳ ಬದುಕೇ ಈ ನಾಟಕ.

ಕಳೆದ 5 ವರ್ಷಗಳಿಂದ ನಗರದಲ್ಲಿ ಸಕ್ರಿಯ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ತಂಡ ರಂಗಯಾನ. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2008–09ನೇ ಸಾಲಿನ ವಿದ್ಯಾರ್ಥಿ ವಿಕಾಸ್ ಚಂದ್ರ ಕಟ್ಟಿದ ತಂಡ ಇದು. ರಂಗಭೂಮಿಯನ್ನು ಎಲ್ಲ ಸ್ತರದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭವಾದ ರಂಗಯಾನ, ವರ್ಷಕ್ಕೆ ಒಮ್ಮೆಯಾದರೂ ಕಾಡು ಮಕ್ಕಳಿಗೆ ನಾಟಕ ಕಲಿಸಿ ಅವರಿಂದ ನಾಟಕ ಮಾಡಿಸುತ್ತಾರೆ. ಹುಣಸೂರು ತಾಲ್ಲೂಕಿನ ಶೆಟ್ಟಳ್ಳಿ ಹಾಡಿ, ಡಿ.ಬಿ.ಕುಪ್ಪೆ ಹಾಡಿ ಹಾಗೂ ಚಾಮರಾಜನಗರ ಜಿಲ್ಲೆಯ ಹಾವಿನ ಮೂಲೆ ಹಾಡಿಗಳಿಗೆ ಹೋಗಿ ಆದಿವಾಸಿ ಮಕ್ಕಳಿಗೆ ರಂಗದ ಗೀಳು ಹತ್ತಿಸಿದ್ದಾರೆ.

ಜತೆಗೆ, ನಗರದ ಬಾಲಮಂದಿರದಲ್ಲಿ ರಂಗ ಶಿಬಿರಗಳ ಆಯೋಜನೆ, ರಂಗ ಒಡನಾಟ ಇಲ್ಲದವರಿಗೆ ರಂಗಸಖ್ಯ ಬೆಳಸುವ ಸಲುವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈವರೆಗೆ ‘ದೇಶಸಂಚಾರ’, ‘ಗಡಂಗಿನೊಳಗಣ ಸತ್ಯ’ ಎಂಬಿತ್ಯಾದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ‘ಉರಿಯ ಉಯ್ಯಾಲೆ’ ನಾಟಕದಲ್ಲಿ ವಿವಿಧ ಉದ್ಯೋಗಗಳಲ್ಲಿರುವ ಮಹಿಳೆಯರು, ಗೃಹಿಣಿಯರು ಸೇರಿ ಅಭಿನಯಿಸಿದ್ದಾರೆ. ನಾಟಕದ ತರಬೇತಿ ಆರಂಭಿಸಿದಾಗ ಮಹಿಳೆಯರು ಹೆಚ್ಚು ಬಾರದಿದ್ದರೂ ಅನಂತರದಲ್ಲಿ ಹಿಂಜರಿಕೆ ಬಿಟ್ಟು ತಾವೂ ನಾಟಕ ಮಾಡಬೇಕೆಂಬ ಹುಮ್ಮಸ್ಸಿನಿಂದ ಮೊದಲ ಬಾರಿಗೆ ನಾಟಕ ಮಾಡಲು ಇಲ್ಲಿನ ಕಲಾವಿದರು ಮುಂದಾಗಿದ್ದಾರೆ. ಹೊಸಬರಿಂದ ಕೆಲಸ ತೆಗೆಸುವುದು ನಿರ್ದೇಶಕರಿಗೆ ಸವಾಲಿನ ವಿಚಾರವೇ.

ನಾಟಕದ ಒಟ್ಟು ಅವಧಿ ಒಂದು ಗಂಟೆ 15 ನಿಮಿಷಗಳು. ನಾಟಕದ ಸ್ಕ್ರಿಪ್ಟ್ ಏಕವ್ಯಕ್ತಿ ಪ್ರದರ್ಶನದ್ದಾದರೂ ಕಥಾಹಂದರವನ್ನು 8 ಎಳೆಗಳಲ್ಲಿ ಬೆಳೆಸಲಾಗಿದೆ. ಹೆಣ್ಣಿನ ತೊಳಲಾಟಗಳು ಎಲ್ಲ ಕಾಲದಲ್ಲೂ ಒಂದೇ. ಇಲ್ಲಿ ದ್ರೌಪದಿ ರೂಪಕವಾಗಿ ನಿಂತರೂ ಕಥನ ಮಾತ್ರ ಹೆಣ್ಣಿನದ್ದೇ. ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಸಿಕ್ಕ ನಂತರವೂ ಸ್ತ್ರೀ ಸ್ವಾತಂತ್ರ್ಯ, ಸ್ವಾವಲಂಬನೆ, ಸಮತೆಯ ಕನಸು ಈಡೇರಿಲ್ಲ. ಹಾಗಾಗಿ ದ್ರೌಪದಿಯ ಕಥನ ಎಲ್ಲರ ಕಥೆಯೇ... ಹಂದರ ಮಾತ್ರ ಬದಲು.

**

ನಾಟಕ: ಉರಿಯ ಉಯ್ಯಾಲೆ

ನಿರ್ದೇಶನ: ಬಿ.ಎನ್.ಶಶಿಕಲಾ, ರಂಗಾಯಣ

ಸ್ಥಳ: ಕಿರು ರಂಗಮಂದಿರ

ಸೆಪ್ಟೆಂಬರ್ 19, ಸಂಜೆ 7ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT