ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐರನ್‌ಮ್ಯಾನ್‌’ ಉಷಾ ಹೆಗ್ಡೆ

Last Updated 7 ಡಿಸೆಂಬರ್ 2019, 9:54 IST
ಅಕ್ಷರ ಗಾತ್ರ

‌ಅದು ಸವಾಲು. ಸಮುದ್ರದಲ್ಲಿ ಈಜಿ, ಸೈಕ್ಲಿಂಗ್‌ ಮಾಡಿ ನಂತರ ಓಡಬೇಕು. ಇಂಥದೊಂದು ಸವಾಲನ್ನು ಯಶಸ್ವಿಯಾಗಿ ಎದುರಿಸಿದವರು ಮೈಸೂರಿನ ಜೆಎಸ್‌ಎಸ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ.

ಸಮುದ್ರದಲ್ಲಿ 3.8 ಕಿ.ಮೀ ಈಜಿದ ನಂತರ 180 ಕಿ.ಮೀ ಸೈಕ್ಲಿಂಗ್‌ ಮಾಡಿದರು. ಬಳಿಕ 42.2 ಕಿ.ಮೀ ಓಟದಲ್ಲಿ ಭಾಗವಹಿಸಿದರು. ಇವೆಲ್ಲವನ್ನೂ 17 ಗಂಟೆಯಲ್ಲಿ ಪೂರ್ಣಗೊಳಿಸಬೇಕಿತ್ತು. ಅವಧಿಗೂ ಮೊದಲೇ ಅಂದರೆ 14.30 ಗಂಟೆಯಲ್ಲಿ ಪೂರೈಸಿದರು ಡಾ.ಉಷಾ. ಅವರು ಡಿಸೆಂಬರ್ 1ರಂದು ಆಸ್ಟ್ರೇಲಿಯಾದ ಬಿಸಲ್ಟನ್‌ ಎಂಬಲ್ಲಿ ನಡೆದ ‘ಐರನ್‌ಮ್ಯಾನ್’ ಎಂಬ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿ ಯಶ ಕಂಡಿದ್ದಾರೆ. ಹಾಗೆ ಅವರು ಭಾಗವಹಿಸಿದ್ದು ಮಹಿಳೆಯರ 45–49 ವರ್ಷದೊಳಗಿನವರ ವಿಭಾಗದಲ್ಲಿ. ಸಮುದ್ರದಲ್ಲಿ ಈಜುವಾಗ ವೇಸ್ಟ್‌ ಕೋಟ್‌ ಧರಿಸಿ ಈಜಿದರು.

‘ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿತ್ತು. ಆದರೆ, ನೀರು ಚೆನ್ನಾಗಿತ್ತು, ತಳ ಕಾಣುತ್ತಿತ್ತು. ಹೀಗಾಗಿ ಮೀನುಗಳ ಜತೆ ಈಜಿದ ಖುಷಿ’ ಎನ್ನುತ್ತಾರೆ ಡಾ.ಉಷಾ.

ವೃತ್ತಿಯಲ್ಲಿ ದಂತವೈದ್ಯರಾದ ಅವರು, ಕಾಲೇಜಿನ ದಿನಗಳಲ್ಲಿ ತಮ್ಮ ಸೋದರ ಕಿರಣ್‌ ಜೊತೆಗೆ ಓಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಬಳಿಕ, ಬಿಡಿಎಸ್‌ ಓದುವ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ರನ್ನರ್‌ ಆಗಿದ್ದರು. ಕ್ರಾಸ್‌ಕಂಟ್ರಿಯಲ್ಲಿ ಭಾಗವಹಿಸಿದ್ದರು. ಆ ಮೇಲೆ ಮುಂದುವರಿಸಲಾಗಲಿಲ್ಲ. ಆದರೆ, ಎಂಟು ವರ್ಷಗಳ ಹಿಂದೆ ಮತ್ತೆ ಓಡಲು ಶುರು ಮಾಡಿದರು. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಮ್ಯಾರಥಾನ್‌ನಲ್ಲಿ (42.2 ಕಿ.ಮೀ) ಮೊದಲ ಬಹುಮಾನ ಪಡೆದರೆ, ಮುಂಬೈನಲ್ಲಿ ನಡೆದ ಮ್ಯಾರಥಾನ್‌ನಲ್ಲಿ (42.2 ಕಿ.ಮೀ) ದ್ವಿತೀಯ ಬಹುಮಾನ ಪಡೆದರು. ಬಳಿಕ, ಹಾಫ್‌ ಮ್ಯಾರಥಾನ್‌ (21.1 ಕಿ.ಮೀ), 10 ಕಿ.ಮೀ ಓಟದಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರು. ಹೀಗೆ ಪ್ರತಿ ವರ್ಷ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು.

ಇದರೊಂದಿಗೆ ಅವರಿಗೆ ಟ್ರಯಥ್ಲಾನ್‌ನಲ್ಲಿ ಆಸಕ್ತಿ ಹೆಚ್ಚಿತ್ತು. ಇದಕ್ಕಾಗಿ ಮೂರು ವರ್ಷಗಳ ಹಿಂದೆ ಈಜು ಕಲಿತರು. ಪಾಂಡವಪುರ ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ಎರಡೂವರೆ ಕಿ.ಮೀ ಈಜಿದರು. ಜತೆಗೆ, ಸೈಕ್ಲಿಂಗ್‌ ಶುರು ಮಾಡಿದರು. ಮೈಸೂರಿನಿಂದ ಗೋವಾದವರೆಗೆ, ಮನಾಲಿನಿಂದ ಲೇವರೆಗೆ ಸೈಕ್ಲಿಂಗ್‌ ಮೂಲಕ 300, 200 ಕಿ.ಮೀ ಸುತ್ತಿದ್ದಾರೆ. ಹೀಗೆ ಈಜು, ಸೈಕ್ಲಿಂಗ್ ಹಾಗೂ ರನ್ನಿಂಗ್ ಸೇರಿ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿರುವ ಅವರು, ಇದಕ್ಕೆ ಸಂಬಂಧಿಸಿದಂತೆ ಯೊಸ್ಕೊ ಎಂಬ ಆನ್‌ಲೈನ್ ಕೋಚಿಂಗ್ ಸೆಂಟರ್‌ ಮೂಲಕ ಪ್ರಮಾಣಪತ್ರ ಪಡೆದಿದ್ದಾರೆ. ಜತೆಗೆ, ಯೊಸ್ಕೊದ ಮುಖ್ಯ ತರಬೇತುದಾರ ದೀಪಕ್‌ ರಾಜ್‌ ಅವರಿಂದ ತರಬೇತಿ ಪಡೆದಿದ್ದಾರೆ. ಸದ್ಯ ಯೊಸ್ಕೊದ ತರಬೇತುದಾರರೂ ಆಗಿದ್ದಾರೆ.

‘ಐರನ್‌ಮ್ಯಾನ್’ಗೆ ಆಯ್ಕೆಯಾದಾಗ ಮೂರು ತಿಂಗಳ ಹಿಂದೆ ಚೆನ್ನೈಗೆ ಹೋಗಿ ಸಮುದ್ರದಲ್ಲಿ ಈಜುವುದನ್ನು ಅಭ್ಯಾಸ ಮಾಡಿಕೊಂಡೆ. ಆದರೆ, ಈಜುಕೊಳದಲ್ಲಿ ಈಜುವುದಕ್ಕೂ ಸಮುದ್ರದಲ್ಲಿ ಈಜುವುದಕ್ಕೂ ವ್ಯತ್ಯಾಸವಿದೆ. ಸಮುದ್ರದಲ್ಲಿ ಲೈನ್‌ ಇರಲ್ಲ. ಇದಕ್ಕಾಗಿ ಆಗಾಗ ತಲೆ ಎತ್ತಿಕೊಂಡು ಈಜಬೇಕಿತ್ತು. ಈಜು ಮುಗಿದ ತಕ್ಷಣ ಸೈಕ್ಲಿಂಗ್ ಶುರು ಮಾಡಬೇಕಿತ್ತು. ಬಳಿಕ ರನ್ನಿಂಗ್. ಎಲ್ಲ ನಾವೇ ಸಿದ್ಧ ಮಾಡಿಕೊಳ್ಳಬೇಕಿತ್ತು. ಇನ್ನೊಬ್ಬರ ನೆರವು ಪಡೆಯುವಂತಿರಲಿಲ್ಲ’ ಎನ್ನುತ್ತಾರೆ ಅವರು.

ಟ್ರಯಥ್ಲಾನ್‌ ಅನ್ನು ಜನಪ್ರಿಯಗೊಳಿಸಬೇಕೆಂಬ ಉದ್ದೇಶ ಹೊಂದಿರುವ ಅವರು, ಕಳೆದ ವರ್ಷದ ಮೈಸೂರು ದಸರಾ ಮಹೋತ್ಸವದಲ್ಲಿ ಟ್ರಯಥ್ಲಾನ್‌ ಆಯೋಜಿಸಿದ್ದರು.

22 ಮಹಿಳೆಯರಲ್ಲಿ 3ನೇ ಸ್ಥಾನ
ವಿದೇಶದಲ್ಲಿ ನಡೆದಿರುವ ‘ಐರನ್‌ಮ್ಯಾನ್‌’ ಟ್ರಯಥ್ಲಾನ್‌ನಲ್ಲಿ ಭಾರತದಿಂದ ಡಾ.ಉಷಾ ಹೆಗ್ಡೆ ಸೇರಿದಂತೆ ಇದುವರೆಗೆ 22 ಮಹಿಳೆಯರು ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಡಾ.ಉಷಾ ಅವರದು ಮೂರನೆಯ ಸ್ಥಾನ. ‘ಇದು ಸಾಧ್ಯವಾಗಿದ್ದು ಕುಟುಂಬದ ಬೆಂಬಲದಿಂದ. ಅತ್ತೆ ವೇದಾ, ಮಾವ ಮೂಳೆತಜ್ಞ ಡಾ.ಜೆ.ಎಸ್‌.ಹೆಗ್ಡೆ, ಮೂಳೆತಜ್ಞರಾದ ಪತಿ ಡಾ.ಅಜಯ್‌ ಹೆಗ್ಡೆ. ಅವರು ದೇಹದಾರ್ಢ್ಯಪಟು. ಇದರಲ್ಲಿ ಅವರು ಮಿಸ್ಟರ್‌ ಮೈಸೂರು, ಮಿಸ್ಟರ್‌ ಕರ್ನಾಟಕ ಆಗಿದ್ದರು. ಹಿರಿಮಗ ಆಕರ್ಷ್ ಮಂಗಳೂರಿನಲ್ಲಿ ಮೊದಲ ಎಂಬಿಬಿಎಸ್‌ ಓದುತ್ತಿದ್ದು, ರಾಜೀವ ಗಾಂಧಿ ವಿ.ವಿಯ ಪರವಾಗಿ ಕ್ರಿಕೆಟ್‌ ಆಡುತ್ತಾನೆ. ಎರಡನೆಯ ಮಗ ಆರ್ಯವ್ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, 14, 16 ವರ್ಷದೊಳಗಿನವರ ವಲಯ ಕ್ರಿಕೆಟ್‌ ತಂಡದಲ್ಲಿ ಆಡಿದ್ದಾನೆ. ಇವರೆಲ್ಲರ ಬೆಂಬಲವಿದೆ’ ಎನ್ನುವ ಹೆಮ್ಮೆ ಡಾ.ಉಷಾ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT