ಸೋಮವಾರ, ಡಿಸೆಂಬರ್ 9, 2019
17 °C

ಉತ್ತರಾ ಮಳೆಗೆ ತಣಿದ ಧಾರಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ನಗರದಲ್ಲಿ ಭಾನುವಾರ ರಾತ್ರಿ ಹದವಾಗಿ ಸುರಿಯಿತು. ಉತ್ತರೆ ಮಳೆಗೆ ಅಕ್ಷರಶಃ ಇಳೆ ತಂಪಾಯಿತು.‌

ಗುಡುಗು, ಸಿಡಿಲುಗಳ ಆರ್ಭಟವೂ ಜೋರಾಗಿತ್ತು. ನಗರ ಪ್ರಮುಖ ರಸ್ತೆಗಳು ಜಲಾವೃತವಾದವು. ಹಲವೆಡೆ ಒಳಚರಂಡಿಗಳು ಕಟ್ಟಿಕೊಂಡು, ಮ್ಯಾನ್‌ಹೋಲ್‌ಗಳಲ್ಲಿ ನೀರು ಉಕ್ಕಿತು. ತಗ್ಗು ಪ್ರದೇಶಗಳು ಜಲಾವೃತಗೊಂಡವು. ಕೆಲ ಮನೆಗಳಿಗೆ ನೀರು ನುಗ್ಗಿತು.

ಸಂಜೆ ವಿಹಾರಕ್ಕೆ ಹೊರಟವರಿಗೆ ಮಳೆ ಕಿರಿಕಿರಿಯನ್ನು ತಂದೊಡ್ಡಿತು. ಗಂಟೆಗಟ್ಟಲೆ ಕಾಯುವಂತಾಯಿತು. ಕೆಲವರು ಮಳೆಯಲ್ಲಿ ನೆನೆಯುತ್ತಲೇ ಮನೆಗೆ ಹೊರಟರು. ವಾಹನ ಸವಾರರು ಮರದಡಿ ನಿಂತು ರಕ್ಷಣೆ ಪಡೆಯುತ್ತಿದ್ದು ಕಂಡುಬಂತು.

ಚಾಮುಂಡಿಪುರಂ ಹಾಗೂ ಕುರುಬಾರಹಳ್ಳಿ ವೃತ್ತ, ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನ ಬಳಿ ಮರಗಳು ಉರುಳಿಬಿದ್ದವು. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ಈ ಭಾಗದಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಪಾಲಿಕೆಯ ರಕ್ಷಣಾ ತಂಡ ‘ಅಭಯ್’ ಕಾರ್ಯಾಚರಣೆ ನಡೆಸಿ ಮರಗಳನ್ನು ತಕ್ಷಣವೇ ತೆರವುಗೊಳಿಸಿತು.

ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಹೋಗುವ ರಸ್ತೆ ಭಾನುವಾರ ರಾತ್ರಿ ಸುರಿದ ಮಳೆಗೆ ಸಂಪೂರ್ಣ ಜಲಾವೃತಗೊಂಡಿತು. ಹಲವು ವಾಹನಗಳು ನೀರಿನಲ್ಲಿ ಮುಳುಗಿ ಚಾಲೂ ಆಗದೇ ಸವಾರರು ಪರದಾಡಿದರು. ಉದಯಗಿರಿ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ‘ಯುವಸಂಭ್ರಮ’ದಲ್ಲಿ ಯುವಜನರು ಮಳೆಯಲ್ಲಿ ಮಿಂದೆದ್ದರು. ಇಡೀ ಸಭಾಂಗಣ ಗಾಂಧರ್ವ ಲೋಕದಂತೆ ಭಾಸವಾಯಿತು.

ಪ್ರತಿ ಹಾಡಿಗೂ ಯುವಕ, ಯುವತಿಯರು ಹೆಜ್ಜೆ ಹಾಕಿದರು. ಬೀಳುತ್ತಿದ್ದ ಮಳೆ ಹನಿಗಳು ಯುವತಿಯರ ನೃತ್ಯ ಕಂಡು ಮತ್ತೆ ಮತ್ತೆ ಬಿರುಸು ಪಡೆಯಿತು. ಪ್ರೇಕ್ಷಕ ವೃಂದ ಕುಣಿದು ಕುಪ್ಪಳಿಸಿತು.

ಚಾಮರಾಜ ಮೊಹಲ್ಲಾ ಪ್ರದೇಶದಲ್ಲಿ ಸಂಜೆಯೇ ಮಳೆ ಶುರುವಾಗಿ ರಾತ್ರಿ 9ರವರೆಗೆ ಸುರಿಯುತ್ತಲೇ ಇತ್ತು. ಆದರೆ, ನಗರದ ಕೆಲ ಬಡಾವಣೆಗಳಲ್ಲಿ ಮಳೆ ತಡವಾಗಿ ಬಂತು.

ಬಿತ್ತಿರುವ ಬೆಳೆಗಳು ಜೀವ ಕಳೆ ಪಡೆಯಲು ಮಾತ್ರವಲ್ಲ; ತೆನೆಕಟ್ಟಲೂ ಈ ಮಳೆ ಕಾರಣವಾಯಿತು. ‘ಉತ್ತರೆ ಮಳೆಯಾದ ಮೇಲೆ ಇನ್ಯಾತರ ಮಳೆ’ ಎಂಬ ಗಾದೆ ಮಾತಿನಂತೆ ಕೆಲವೆಡೆ ಬಿರುಸಿನಿಂದ ಮಳೆ ಸುರಿದಿದ್ದು ವಿಶೇಷ ಎನಿಸಿತು.

 

ಪ್ರತಿಕ್ರಿಯಿಸಿ (+)