ಬುಧವಾರ, ಮಾರ್ಚ್ 29, 2023
31 °C
ಮೈಸೂರು ವಿವಿ ಉಪಕ್ರಮ; ಜುಲೈ 7ರೊಳಗೆ ಲಸಿಕೆ ಪೂರ್ಣಗೊಳಿಸುವ ಉದ್ದೇಶ

ಮೈಸೂರು ವಿವಿ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿಗೆ ಲಸಿಕೆ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮಾನಸ ಗಂಗೋತ್ರಿ, ಮಂಡ್ಯ, ಹಾಸನ, ಚಾಮರಾಜನಗರ ಕ್ಯಾಂಪಸ್‌ ಹಾಗೂ ಘಟಕ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು (ಆಫ್‌ಲೈನ್‌ ಕ್ಲಾಸ್‌) ಆರಂಭಿಸುವ ಸಂಬಂಧ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರರಿಗೆ ಜುಲೈ 7ರೊಳಗೆ ಕೋವಿಡ್‌ ಲಸಿಕಾ ಕಾರ್ಯ ಪೂರ್ಣಗೊಳಿಸಲು ವಿಶ್ವವಿದ್ಯಾಲಯ ಮುಂದಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈಚೆಗೆ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಸಭೆ ನಡೆಸಿದ್ದರು. 7ರೊಳಗೆ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವಂತೆ ಸೂಚಿಸಿದ್ದು, ಅದರಂತೆ ಲಸಿಕಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಮಾನಸಗಂಗೋತ್ರಿ ಕ್ಯಾಂಪಸ್‌, ಘಟಕ ಕಾಲೇಜುಗಳಾದ ಮಹಾರಾಜ ಕಾಲೇಜು, ಸಂಜೆ ಕಾಲೇಜು, ಯುವರಾಜ ಕಾಲೇಜು, ಲಲಿತಕಲಾ ಕಾಲೇಜು ಹಾಗೂ ಕ್ಯಾಂಪಸ್‌ಗಳಾದ ಹಾಸನದ ಹೇಮಗಂಗೋತ್ರಿ, ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು ಸೇರಿ 12,863 ಮಂದಿ ಇದ್ದಾರೆ. ಈ ಪೈಕಿ ಈವರೆಗೆ ಸುಮಾರು 4,100 ಮಂದಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.

‘ಮಹಾರಾಜ ಕಾಲೇಜಿನ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಇಲ್ಲಿ ಪ್ರತಿದಿನ 200 ಮಂದಿಗೆ ಲಸಿಕೆ ಹಾಕಲಾಗುತ್ತಿದೆ’ ಎಂದು ಕುಲಸಚಿವ ಪ್ರೊ.ಆರ್‌.ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

’ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಮಾನಸ ಗಂಗೋತ್ರಿಯ ಸೆನೆಟ್‌ ಭವನ, ತೆರೆದ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರ ಆಯೋಜಿಸಲಾಗುವುದು. ಇದಕ್ಕೆ ಅಗತ್ಯವಿರುವ ವೈದ್ಯಕೀಯ ನೆರವನ್ನು ಆರೋಗ್ಯ ಇಲಾಖೆ ಒದಗಿಸಲಿದೆ. ಮಾನಸಗಂಗೋತ್ರಿ ಹಾಗೂ ಮಹಾರಾಜ ಕಾಲೇಜಿನಲ್ಲಿರುವ ವಿ.ವಿ ಆರೋಗ್ಯ ಕೇಂದ್ರಗಳ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು’ ಎಂದರು.

ಇದಲ್ಲದೇ, ಪದವಿ ಕಾಲೇಜು, ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡುವ ಸಂಬಂಧ ಮೈಸೂರು ವಿಶ್ವವಿದ್ಯಾಲಯವು ಆಡಳಿತಾತ್ಮಕ ನೆರವು ನೀಡುತ್ತಿದೆ. ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಲಾಗಿದೆ. ಕಾಲೇಜುಗಳಿಗೆ ನೋಡಲ್‌ ಅಧಿಕಾರಿಗಳನ್ನೂ ನೇಮಿಸಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳನ್ನು ಸಂಘಟಿಸುವ ಸವಾಲು

‘ನಾವು ನಿರೀಕ್ಷಿಸಿದಷ್ಟು ಲಸಿಕೆ ಕಾರ್ಯಕ್ರಮಕ್ಕೆ ವೇಗ ಸಿಕ್ಕಿಲ್ಲ. ಆನ್‌ಲೈನ್‌ ತರಗತಿ ಕಾರಣ ವಿದ್ಯಾರ್ಥಿಗಳೂ ನಮ್ಮ ನಿಯಂತ್ರಣದಲ್ಲಿ ಇಲ್ಲ. ಅನೇಕರು ಬೇರೆ ಬೇರೆ ಜಿಲ್ಲೆಗಳಲ್ಲಿದ್ದಾರೆ. ಅವರನ್ನು ಒಂದೆಡೆ ಸಂಘಟಿಸುವುದು ಸವಾಲಿನ ಕೆಲಸ. ಆದರೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ  ಮಾಹಿತಿ ನೀಡುತ್ತಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಿದ ಬಳಿಕ ತರಗತಿ ಆರಂಭವಾಗುವ ಸಾಧ್ಯತೆ ಇದೆ. ಜುಲೈ 15 ಅಥವಾ 20ರ ನಂತರ ಭೌತಿಕ ತರಗತಿಗಳು ಆರಂಭವಾಗುವ ಸಂಭವವಿದೆ’ ಎಂದು ಪ್ರೊ.ಶಿವಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು