ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಗುಮ್ಮಟ ಡಾ.ಫ.ಗು.ಹಳಕಟ್ಟಿ

ವಚನ ಸಾಹಿತ್ಯಕ್ಕೆ ಹೊಸ ಚೈತನ್ಯ ತಂದುಕೊಟ್ಟ ಮಹಾಪುರುಷ
Last Updated 2 ಜುಲೈ 2020, 14:50 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರಿಂದ ವಚನ ಗುಮ್ಮಟ ಎಂದು ಹೊಗಳಿಸಿ ಕೊಂಡವರು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ, ನಗರದ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಕಚೇರಿಯಲ್ಲಿ ವಚನ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ 140ನೇ ಜಯಂತಿಯನ್ನು ಗುರುವಾರ ಆಚರಿಸಿ ಮಾತನಾಡಿದ ಅವರು, ‘ಬಿ.ಎಂ.ಶ್ರೀ. ಒಮ್ಮೆ ಬಿಜಾಪುರಕ್ಕೆ ಹೋಗಿದ್ದಾಗ ಅವರ ಆತ್ಮೀಯರು ತಾವು ಇತಿಹಾಸ ಪ್ರಸಿದ್ಧ ಗೋಳಗುಮ್ಮಟ ನೋಡಲು ಬಂದಿರುವಿರಾ ? ಎಂದು ಕೇಳಿದಾಗ, ಅವರು ಇಲ್ಲ ನಾನು ವಚನಗುಮ್ಮಟವನ್ನು ನೋಡಲು ಬಂದಿರುವೆ ಎಂದರಂತೆ’ ಎಂದರು.

‘ಹನ್ನೆರಡನೇ ಶತಮಾನದ ವಚನ ಸಾಹಿತ್ಯಕ್ಕೆ ಹೊಸ ಚೈತನ್ಯ ತಂದುಕೊಟ್ಟ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಒಂದು ವಿಶ್ವವಿದ್ಯಾನಿಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ಸಾಧಿಸಿದ ಧೀಮಂತರು’ ಎಂದು ಬಣ್ಣಿಸಿದರು.

‘ತಾವು ಸಂಪಾದಿಸಿದ ಶರಣರ ವಚನಗಳನ್ನು ಕ್ರೈಸ್ತ ಮಿಷನರಿಗಳು ಮುದ್ರಣ ಮಾಡಿಕೊಡಲು ಹಿಂದೇಟು ಹಾಕಿದಾಗ, ತಮ್ಮ ಸ್ವಂತ ಮನೆಯನ್ನೇ ಮಾರಿ ‘ಹಿತ ಚಿಂತಕ’ ಎಂಬ ಮುದ್ರಣಾಲಯ ಸ್ಥಾಪಿಸಿ, ಅದರ ಮೂಲಕ ಇನ್ನೂರಕ್ಕೂ ಹೆಚ್ಚು ಶರಣರು ರಚಿಸಿದ ಸಹಸ್ರ, ಸಹಸ್ರ ಸಂಖ್ಯೆಯ ವಚನಗಳು ಬೆಳಕಿಗೆ ಬರಲು ಕಾರಣರಾಗಿ, ವಿಶಿಷ್ಟ ವ್ಯಕ್ತಿಯಾಗಿ ಹೊರಹೊಮ್ಮಿದವರು’ ಎಂದು ಹೇಳಿದರು.

ಫೌಂಡೇಷನ್ ನಿರ್ದೇಶಕಿ ರೂಪಾ ಕುಮಾರಸ್ವಾಮಿ ಮಾತನಾಡಿ ‘ಕನ್ನಡವನ್ನು ಉಸಿರಾಗಿಸಿಕೊಂಡು ವಚನ ಸಾಹಿತ್ಯದ ಹಸ್ತಪ್ರತಿಗಳ ಓಲೆಗರಿಗಳಿಗಾಗಿ ಹಳಕಟ್ಟಿಯವರು ಹುಡುಕಾಡದ ಊರುಗಳಿಲ್ಲ. ತಡಕಾಡದ ಕೇರಿಗಳಿಲ್ಲ. ಅನ್ವೇಷಣೆಗೈಯದ ಆಲಯಗಳಿಲ್ಲ. ಸಂಶೋಧನೆ ನಡೆಸದ ಸ್ಥಳಗಳಿಲ್ಲ. ಅವರ ಪರಿಶ್ರಮದ ಫಲವಾಗಿ ಇಂದು ನಾವು ವಚನಗಳನ್ನು ಅಧ್ಯಯನ ಮಾಡಲು, ಇಂಪಾಗಿ ಹಾಡಲು ಕಾರಣವಾಗಿದೆ’ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗಿರಿಜೇಶ್, ಆದರ್ಶ್, ವಚನ, ಜಯಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT